ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕಘಟ್ಟದಲ್ಲಿ ಎರಡನೇ ಟೆಸ್ಟ್

Last Updated 29 ಡಿಸೆಂಬರ್ 2010, 6:30 IST
ಅಕ್ಷರ ಗಾತ್ರ

ಡರ್ಬನ್: ದಕ್ಷಿಣ ಅಫ್ರಿಕಾ ತಂಡದ ಗೆಲುವಿಗೆ 192 ರನ್ ಬೇಕಿದ್ದರೆ; ಭಾರತದ ಜಯಕ್ಕೆ ಏಳು ವಿಕೆಟ್‌ಗಳ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್‌ನ ಎರಡು ಶ್ರೇಷ್ಠ ತಂಡಗಳ ನಡುವಿನ ಪೈಪೋಟಿ ರೋಚಕ ಹಂತ ತಲುಪಿದೆ. ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಮಂಗಳವಾರ ಉಭಯ ತಂಡಗಳು ಸಮತೋಲನ ಕಾಪಾಡಿಕೊಂಡವು. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಫಲಿತಾಂಶ ನಿರ್ಧಾರವಾಗುವುದು ಹೆಚ್ಚು ಕಡಿಮೆ ಖಚಿತ.

ಗೆಲುವಿಗೆ 303 ರನ್‌ಗಳ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ 27 ಓವರ್‌ಗಳಲ್ಲಿ 3 ವಿಕೆಟ್‌ಗೆ 111 ರನ್ ಗಳಿಸಿದೆ. ಇನ್ನುಳಿದ ಏಳು ವಿಕೆಟ್‌ಗಳಿಂದ 192 ರನ್ ಗಳಿಸುವ ಕಠಿಣ ಸವಾಲು ಗ್ರೇಮ್ ಸ್ಮಿತ್ ಬಳಗದ ಮುಂದಿದೆ. ಮೂರು ದಿನಗಳಲ್ಲಿ 33 ವಿಕೆಟ್‌ಗಳನ್ನು ‘ಬಲಿ’ ತೆಗೆದುಕೊಂಡ ಪಿಚ್ ಇದೀಗ ಬ್ಯಾಟ್ಸ್‌ಮನ್‌ಗಳಿಗೆ ಅಲ್ಪ ನೆರವು ನೀಡುತ್ತಿದೆ. ಆದರೆ ಮಹೇಂದ್ರ ಸಿಂಗ್ ದೋನಿ ಬಳಗದ ಬೌಲರ್‌ಗಳಲ್ಲಿ ಗೆಲುವಿನ ತುಡಿತ ಕಂಡುಬಂದಿದೆ. ಒಟ್ಟಿನಲ್ಲಿ ಬುಧವಾರ ಎರಡೂ ತಂಡಗಳು ಗೆಲುವಿಗಾಗಿ ಕಠಿಣ ಪರಿಶ್ರಮ ನಡೆಸಲಿದ್ದು, ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

ವಿವಿಎಸ್ ಲಕ್ಷ್ಮಣ್ (96, 171 ಎಸೆತ, 12 ಬೌಂಡರಿ) ಅವರ ಆಕರ್ಷಕ ಆಟದ ನೆರವಿನಿಂದ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 228 ರನ್ ಕಲೆಹಾಕಲು ಯಶಸ್ವಿಯಾಯಿತು. ಮಾತ್ರವಲ್ಲ ಆತಿಥೇಯ ತಂಡಕ್ಕೆ 300 ಕ್ಕೂ ಅಧಿಕ ರನ್‌ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಅಫ್ರಿಕಾದ ಆರಂಭ ಅಬ್ಬರದಿಂದ ಕೂಡಿತ್ತು. ಗ್ರೇಮ್ ಸ್ಮಿತ್ (37, 38 ಎಸೆತ, 5 ಬೌಂ) ಮತ್ತು ಅಲ್ವಿರೊ ಪೀಟರ್‌ಸನ್ (26) ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 63 ರನ್ ಸೇರಿಸಿದರು.

ಆದರೆ ಎಸ್. ಶ್ರೀಶಾತ್ (30ಕ್ಕೆ 2) ಅವರು ಸ್ಮಿತ್ ವಿಕೆಟ್ ಪಡೆದು ಭಾರತಕ್ಕೆ ‘ಬ್ರೇಕ್’ ನೀಡಿದರು. ಮೂರು ಓವರ್‌ಗಳ ಬಳಿಕ ಹರಭಜನ್ ಅವರು ಪೀಟರ್‌ಸನ್‌ಗೆ ಪೆವಿಲಿಯನ್ ಹಾದಿ ತೋರಿದರು. ಹಾಶಿಮ್ ಆಮ್ಲಾ (16) ಔಟಾದ ಕಾರಣ ಆತಿಥೇಯ ತಂಡ ಮತ್ತಷ್ಟು ಒತ್ತಡಕ್ಕೆ ಒಳಗಾಯಿತು. ಆ ಬಳಿಕ ಎಚ್ಚರಿಕೆಯಿಂದ ಆಡಿದ ಜಾಕ್ ಕಾಲಿಸ್ (12) ಮತ್ತು ಎಬಿ ಡಿವಿಲಿಯರ್ಸ್ (17) ಹೆಚ್ಚಿನ ಅಪಾಯ ಉಂಟಾಗದಂತೆ ನೋಡಿಕೊಂಡರು. ಕಾಲಿಸ್‌ಗೆ ಖಾತೆ ತೆರೆಯುವ ಮುನ್ನ ಜೀವದಾನ ಲಭಿಸಿತ್ತು. ಅವರು ನೀಡಿದ ಕ್ಯಾಚ್‌ನ್ನು ಚೇತೇಶ್ವರ ಪೂಜಾರ ಪಡೆಯಲು ಯಶಸ್ವಿಯಾಗಿದ್ದಲ್ಲಿ, ಭಾರತ ಪಂದ್ಯದ ಮೇಲಿನ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸುತ್ತಿತ್ತು.

ಲಕ್ಷ್ಮಣ್ ಮಿಂಚು: ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಬೆಳಗ್ಗಿನ ಅವಧಿಯಲ್ಲಿ ಮಿಂಚಿದ್ದು ವಿವಿಎಸ್ ಲಕ್ಷ್ಮಣ್. ತನ್ನ ಹೆಸರಿನೊಂದಿಗೆ ಅಂಟಿಕೊಂಡಿರುವ ‘ಆಪದ್ಭಾಂಧವ’ ಎಂಬ ಬಿರುದನ್ನು ಹೈದರಾಬಾದ್‌ನ ಈ ಬ್ಯಾಟ್ಸ್‌ಮನ್ ಮತ್ತೊಮ್ಮೆ ನಿಜಗೊಳಿಸಿದರು.


4 ವಿಕೆಟ್‌ಗೆ 92 ರನ್‌ಗಳಿಂದ ಮಂಗಳವಾರ ಆಟ ಆರಂಭಿಸಿದ ಭಾರತ ಒಂದು ರನ್ ಸೇರಿಸುವಷ್ಟರಲ್ಲಿ ಪೂಜಾರ (10) ಅವರನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಲಕ್ಷ್ಮಣ್ ಮತ್ತು ನಾಯಕ ದೋನಿ (21) ಆರನೇ ವಿಕೆಟ್‌ಗೆ 48 ರನ್ ಸೇರಿಸಿದರು. ದೋನಿ ಮತ್ತು ಹರಭಜನ್ ಸಿಂಗ್ (4) ಅವರು ಎಂಟು ರನ್ ಅಂತರದಲ್ಲಿ ಔಟಾದಾಗ ಭಾರತದ ಮೊತ್ತ 170 ದಾಟುವುದು ಅನುಮಾನ ಎನಿಸಿತ್ತು. ಆದರೆ ಲಕ್ಷ್ಮಣ್ ಸುಲಭದಲ್ಲಿ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಜಹೀರ್ ಖಾನ್ (27) ಜೊತೆ ಏಳನೇ ವಿಕೆಟ್‌ಗೆ 70 ರನ್ ಸೇರಿಸಿದ ಅವರು ಆತಿಥೇಯ ಬೌಲರ್‌ಗಳನ್ನು ಕಾಡಿದರು. ಆದರೆ ಅರ್ಹ ಶತಕ ಗಳಿಸುವ ಅದೃಷ್ಟ ಲಕ್ಷ್ಮಣ್‌ಗೆ ಇರಲಿಲ್ಲ. ಲಕ್ಷ್ಮಣ್ ಕೊನೆಯವರಾಗಿ ಔಟಾಗುವ ಮುನ್ನ ಭಾರತದ ಒಟ್ಟಾರೆ ಮುನ್ನಡೆಯನ್ನು 302 ರನ್‌ಗಳಿಗೆ ಹಿಗ್ಗಿಸಿದರು. 

ಸ್ಮಿತ್-ಶ್ರೀ ಚಕಮಕಿ: ಭಾರತದ ವೇಗಿ ಶ್ರೀಶಾಂತ್ ಅವರ ಗ್ರೇಮ್ ಸ್ಮಿತ್ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು. ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ‘ಶ್ರೀ’ ಅವರು ಎದುರಾಳಿ ನಾಯಕನಿಗೆ ಏನನ್ನೋ ಹೇಳಿದರು. ಸ್ಮಿತ್ ಅವರು ಶ್ರೀಶಾಂತ್‌ರತ್ತ ಬ್ಯಾಟ್ ಎತ್ತಿ ತೋರಿಸಿ ಅದಕ್ಕೆ ಪ್ರತ್ಯುತ್ತರ ನೀಡಿದರು.

ಸ್ಕೋರು ವಿವರ

ಭಾರತ: ಮೊದಲ ಇನಿಂಗ್ಸ್ 65.1 ಓವರ್‌ಗಳಲ್ಲಿ 205
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್
37.2 ಓವರ್‌ಗಳಲ್ಲಿ 131
ಭಾರತ: ಎರಡನೇ ಇನಿಂಗ್ಸ್ 70.5 ಓವರ್‌ಗಳಲ್ಲಿ 228
(ಸೋಮವಾರ 30.5 ಓವರ್‌ಗಳಲ್ಲಿ 4 ವಿಕೆಟ್‌ಗೆ 92)

ವಿವಿಎಸ್ ಲಕ್ಷ್ಮಣ್ ಸಿ ಬೌಷರ್ ಬಿ ಡೆಲ್ ಸ್ಟೇನ್  96
ಚೇತೇಶ್ವರ ಪೂಜಾರ ಬಿ ಮಾರ್ನ್ ಮಾರ್ಕೆಲ್  10
ಮಹೇಂದ್ರ ಸಿಂಗ್ ದೋನಿ ಸಿ ಬೌಷರ್ ಬಿ ತ್ಸೊತ್ಸೊಬೆ  21
ಹರಭಜನ್ ಸಿಂಗ್ ಸಿ ಕಾಲಿಸ್ ಬಿ ಮಾರ್ನ್ ಮಾರ್ಕೆಲ್  04
ಜಹೀರ್ ಖಾನ್ ಸಿ ಡಿವಿಲಿಯರ್ಸ್ ಬಿ ಪಾಲ್ ಹ್ಯಾರಿಸ್  27
ಇಶಾಂತ್ ಶರ್ಮ ಸಿ ಆಮ್ಲಾ ಬಿ ಜಾಕ್ ಕಾಲಿಸ್  00
ಶ್ರೀಶಾಂತ್ ಔಟಾಗದೆ  00
ಇತರೆ: (ಬೈ-8, ಲೆಗ್‌ಬೈ-4, ವೈಡ್-9)  21
ವಿಕೆಟ್ ಪತನ: 1-42 (ಸೆಹ್ವಾಗ್; 9.1), 2-44 (ವಿಜಯ್; 10.3), 3-48 (ದ್ರಾವಿಡ್; 11.2), 4-56 (ಸಚಿನ್; 14.1), 5-93 (ಪೂಜಾರ; 31.5), 6-141 (ದೋನಿ; 41.6), 7-148 (ಹರಭಜನ್; 44.1), 8-218 (ಜಹೀರ್; 63.4), 9-223 (ಇಶಾಂತ್; 68.5), 10-228 (ಲಕ್ಷ್ಮಣ್; 70.5)
ಬೌಲಿಂಗ್: ಡೆಲ್ ಸ್ಟೇನ್ 15.5-1-60-2, ಮಾರ್ನ್ ಮಾರ್ಕೆಲ್ 15-1-47-3, ಲಾನ್‌ವಾಬೊ ತ್ಸೊತ್ಸೊಬೆ 13-3-43-3, ಜಾಕ್ ಕಾಲಿಸ್ 13-2-30-1, ಪಾಲ್ ಹ್ಯಾರಿಸ್ 14-2-36-1

ದಕ್ಷಿಣ ಆಫ್ರಿಕಾ: ಎರಡನೇ ಇನಿಂಗ್ಸ್ 27 ಓವರ್‌ಗಳಲ್ಲಿ
3 ವಿಕೆಟ್‌ಗೆ 111
ಗ್ರೇಮ್ ಸ್ಮಿತ್ ಸಿ ದೋನಿ ಬಿ ಎಸ್. ಶ್ರೀಶಾಂತ್  37
ಅಲ್ವಿರೊ ಪೀಟರ್‌ಸನ್ ಸಿ ಪೂಜಾರ ಬಿ ಹರಭಜನ್ ಸಿಂಗ್  26
ಹಾಶಿಮ್ ಆಮ್ಲಾ ಸಿ ದೋನಿ ಬಿ ಎಸ್. ಶ್ರೀಶಾಂತ್  16
ಜಾಕ್ ಕಾಲಿಸ್ ಬ್ಯಾಟಿಂಗ್  12
ಎಬಿ ಡಿವಿಲಿಯರ್ಸ್ ಬ್ಯಾಟಿಂಗ್  17
ಇತರೆ: (ನೋಬಾಲ್-3)  03
ವಿಕೆಟ್ ಪತನ: 1-63 (ಸ್ಮಿತ್; 12.1), 2-82 (ಪೀಟರ್‌ಸನ್; 15.4), 3-82 (ಆಮ್ಲಾ; 16.2).
ಬೌಲಿಂಗ್: ಜಹೀರ್ ಖಾನ್ 6-2-25-0, ಇಶಾಂತ್ ಶರ್ಮ 5-0-21-0, ಎಸ್. ಶ್ರೀಶಾಂತ್ 7-0-30-2, ಹರಭಜನ್ ಸಿಂಗ್ 8-0-29-1, ಸಚಿನ್ ತೆಂಡೂಲ್ಕರ್ 1-0-6-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT