ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್ ಫೆಡರರ್‌ಗೆ ಗೆಲುವು

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ): ಪ್ರಶಸ್ತಿಯತ್ತ ಚಿತ್ತ ಕೇಂದ್ರೀಕರಿಸಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದರು.

ಕಳೆದ ಬಾರಿ ರನ್ನರ್‌ಅಪ್ ಆಗಿದ್ದ ಫೆಡರರ್ ಅವರು ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 6-3, 6-2, 6-7 (6-8), 6-3ರಲ್ಲಿ ರೊಮಾನಿಯಾದ ಆ್ಯಡ್ರಿಯನ್ ಅಂಗುರ್ ವಿರುದ್ಧ ವಿಜಯ ಸಾಧಿಸಿದರು.

ಈ ಬಾರಿ ಮೂರನೇ ಶ್ರೇಯಾಂಕ ಪಡೆದಿರುವ ಸ್ವಿಸ್ ಆಟಗಾರ ಮೊದಲ ಎರಡು ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದರೂ, ನಂತರದ ಸೆಟ್ ಉಳಿಸಿಕೊಳ್ಳಲು ಆಗಲಿಲ್ಲ. ಟ್ರೈಬ್ರೇಕರ್‌ನಲ್ಲಿ ಕೊನೆಗೊಂಡ ಮೂರನೇ ಸೆಟ್ ಅನ್ನು ಆ್ಯಡ್ರಿಯನ್ ತಮ್ಮದಾಗಿಸಿಕೊಂಡರು.

ಆದರೆ ನಾಲ್ಕನೇ ಹಾಗೂ ಕೊನೆಯ ಸೆಟ್‌ನಲ್ಲಿ ಮತ್ತೆ ಚೇತರಿಕೆಯ ಆಟವಾಡಿದ ಅನುಭವಿ ರೋಜರ್ ಬಿರುಸಿನ ಹೊಡೆತಗಳಿಂದ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿದರು. ಆಕರ್ಷಕ ಡ್ರಾಪ್‌ಗಳಿಂದ ಎದುರಾಳಿಯನ್ನು ಚಕಿತಗೊಳಿಸಿದ ಅವರು ಜಯವನ್ನು ಒಲಿಸಿಕೊಂಡರು.

2009ರಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ರೋಜರ್‌ಗೆ ಕಳೆದ ವರ್ಷ ಫೈನಲ್‌ನಲ್ಲಿ ನಿರಾಸೆ ಕಾಡಿತ್ತು. ಆದರೆ ಈ ಬಾರಿ ಅವರು ಉನ್ನತ ಮಟ್ಟದ ಪ್ರದರ್ಶನದೊಂದಿಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಮೊದಲ ಎರಡು ಸುತ್ತಿನಲ್ಲಿ ಯಶಸ್ಸು ಸಿಕ್ಕಿದ್ದರೂ ಇನ್ನೂ `ಗುರಿ ದೂರವಿದೆ, ಅದನ್ನು ಮುಟ್ಟುವ ವಿಶ್ವಾಸವೂ ಇದೆ~ ಎಂದು ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ. ಹದಿನಾರು ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಫೆಡರರ್ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಯಶಸ್ಸು ಕಂಡಿದ್ದು ಒಮ್ಮೆ ಮಾತ್ರ. ಮತ್ತೊಮ್ಮೆ ಇಲ್ಲಿ ಪ್ರಶಸ್ತಿ ಎತ್ತಿ ಹಿಡಿಯಬೇಕು ಎನ್ನುವುದು ಅವರ ಆಶಯ.

ಅಗ್ರಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಕೂಡ ಎರಡನೇ ಸುತ್ತಿನಲ್ಲಿ ಯಶಸ್ವಿಯಾಗಿದ್ದಾರೆ. 2011ರಲ್ಲಿ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ್ದ ಅವರು ಈ ಬಾರಿ ಅದಕ್ಕಿಂತ ಉನ್ನತ ಮಟ್ಟಕ್ಕೇರುವ ಕನಸು ಕಂಡಿದ್ದಾರೆ. ಎರಡನೇ ಸುತ್ತಿನಲ್ಲಿ ನೊವಾಕ್ ಭಾರಿ ಪರಿಶ್ರಮ ಪಡುವ ಅಗತ್ಯವೇ ಎದುರಾಗಲಿಲ್ಲ. ಅವರು 6-0, 6-4, 6-4ರಲ್ಲಿ ಸ್ಲೊವೇನಿಯಾದ ಬ್ಲಾಜ್ ಕಾವ್ಸಿಕ್ ವಿರುದ್ಧ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್ ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸಾಕಷ್ಟು ಪ್ರಯಾಸ ಪಡಬೇಕಾಯಿತು. ಒಂಬತ್ತನೇ ಶ್ರೇಯಾಂಕ ಹೊಂದಿರುವ ಜುವಾನ್‌ಗೆ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವೆಸೆಲಿನ್ ಪ್ರಬಲ ಪ್ರತಿರೋಧವೊಡ್ಡಿದರು.

ಆದರೂ ಪಂದ್ಯದ ಮೇಲಿನ ಹಿಡಿತ ಬಿಟ್ಟುಕೊಡದ ಅರ್ಜೆಂಟೀನಾ ಆಟಗಾರ 6-7 (7-5), 7-6 (7-3), 6-4, 6-4ರಲ್ಲಿ ಗೆಲುವು ಪಡೆದು ಮೂರನೇ ಸುತ್ತಿಗೆ ರಹದಾರಿ ಪಡೆದರು.ಫ್ರಾನ್ಸ್‌ನ ನಿಕೊಲಸ್ ಡೆವಿಲ್ಡರ್ 7-6 (7-5), 6-4, 6-2ರಲ್ಲಿ ಜರ್ಮನಿಯ ಮೈಕಲ್ ಬೆರ‌್ರರ್ ಅವರನ್ನು ಹಾಗೂ ಕ್ರೊಯೇಷಿಯಾದ ಯುವ ಆಟಗಾರ ಮರಿನ್ ಸಿಲಿಸ್ 7-6 (7-4), 6-2, 6-3ರಲ್ಲಿ ಸ್ಪೇನ್‌ನ ಜುವಾನ್ ಕಾರ್ಲೊಸ್ ಫೆರೆರೊ ಅವರನ್ನು ಸೋಲಿಸಿದರು.

ಮೂರನೇ ಸುತ್ತಿಗೆ ಅಜಾರೆಂಕಾ: ಅಗ್ರಶ್ರೇಯಾಂಕಿತ ಬೆಲಾರೂಸ್‌ನ ವಿಕ್ಟೋರಿಯಾ ಅಜಾರೆಂಕಾ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 6-1, 6-1ರಲ್ಲಿ ಜರ್ಮನಿಯ ಡಿನಾ ಫಿಜೆನ್ಮಿಯರ್ ಎದುರು ಗೆದ್ದರು. ಇನ್ನೊಂದು ಪಂದ್ಯದಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಸಮಂಥಾ ಸ್ಟೊಸರ್ 6-1, 6-4ರಲ್ಲಿ ಅಮೆರಿಕಾದ ಇರಿನಾ ಫಾಲ್ಕೊನಿ ಅವರನ್ನು ಮಣಿಸಿದರು.

ಎರಡನೇ ಸುತ್ತಿನ ಇನ್ನಿತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಮ್ಯಾಥಿಲ್ಡ್ ಜಾನ್ಸನ್ 7-6 (7-1), 6-2ರಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಸೆಟ್ಕೊವಸ್ಕಾ ವಿರುದ್ಧವೂ, ಸ್ಪೇನ್‌ನ ಮೆಡಿನಾ ಜಾರ್ಜಿಗಸ್ 6-3, 6-2ರಲ್ಲಿ ಫ್ರಾನ್ಸ್‌ನ ಇರಿನಾ ಪಾವ್ಲೊವಿಕ್ ಎದುರೂ, ಇಟಲಿಯ ಸಾರಾ ಎರ‌್ರಾನಿ 6-2, 6-3ರಲ್ಲಿ ಅಮೆರಿಕಾದ ಮೆಲಾನಿ ಒಡಿನ್ ವಿರುದ್ದವೂ, ಕೆನಡಾದ ಅಲೆಕ್ಸಾಂಡ್ರಾ ವೊಜ್ನಿಕ್ 6-2, 6-4ರಲ್ಲಿ ಚೀನಾದ ಜೀ ಜೆಂಗ್ ಎದುರೂ, ಸ್ಲೊವಾಕಿಯಾದ ಡೊಮಿನಿಕಾ ಸಿಬುಲ್ಕೊವಾ 6-0, 6-2ರಲ್ಲಿ ಅಮೆರಿಕಾದ ವಾನಿಯಾ ಕಿಂಗ್ ವಿರುದ್ಧ ಗೆಲುವು ಸಾಧಿಸಿದರು.
ಮೊದಲ ಸುತ್ತಲ್ಲಿಯೇ ಎಡವಿದ ಸೆರೆನಾ ವಿಲಿಯಮ್ಸ

ಗ್ರ್ಯಾಂಡ್ ಸ್ಲಾಮ್ ಟೇನಿಸ್ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲಿ ನಿರ್ಗಮಿಸುವ ಮೂಲಕ ಅಮೆರಿಕಾದ ಸೆರೆನಾ ವಿಲಿಯಮ್ಸ ತಮ್ಮ ಅಭಿಮಾನಿಗಳು ನಿರಾಸೆಗೊಳ್ಳುವಂತೆ ಮಾಡಿದ್ದಾರೆ.

ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಸೆರೆನಾಗೆ 47 ಗ್ರ್ಯಾಂಡ್ ಸ್ಲಾಮ್ ಆಗಿತ್ತು. ಈ ಮೊದಲು ಆಡಿದ್ದ 46 ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಒಮ್ಮೆಯೂ ಅವರು ಮೊದಲ ಸುತ್ತಿನಲ್ಲಿ ನಿರ್ಗಮಿಸಿರಲಿಲ್ಲ. ಆದರೆ ಈ ಸಾರಿ ಅಂಥದೊಂದು ಆಘಾತ ಅನುಭವಿಸಿದರು.

ಮಂಗಳವಾರ ನಡೆದ ಮಹಿಳೆಯರ ಮೊದಲ ಸುತ್ತಿನ ಪಂದ್ಯದಲ್ಲಿ ಮೂವತ್ತು ವರ್ಷ ವಯಸ್ಸಿನ ಸೆರೆನಾ 6-4, 6-7 (5-7), 3-6ರಲ್ಲಿ ಫ್ರಾನ್ಸ್‌ನ ವರ್ಜಿನಿ ರಜ್ಜಾನೊ ವಿರುದ್ಧ ಪರಾಭವಗೊಂಡರು.ಸಾನಿಯಾ-ಭೂಪತಿ ಶುಭಾರಂಭ: ಭಾರತದ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಈ ಜೋಡಿ 64 ನಿಮಿಷ ಹೋರಾಟ ನಡೆಸಿ 6-2, 6-4ರಲ್ಲಿ ಅಮೆರಿಕದ ಕೊಪ್ಸ್ ಜೋನೆಸ್-ಎರಿಕ್ ಬೊಥರಿಕ್ ಎದುರು ಗೆಲುವು ಪಡೆಯಿತು.

ಭಾರತದ ಲಿಯಾಂಡರ್ ಪೇಸ್ ಹಾಗೂ ರಷ್ಯದ ಎಲೆನಾ ವೆಸ್ನಿನಾ ಮೊದಲ ಸುತ್ತಿನಲ್ಲಿ 6-1, 6-1ರಲ್ಲಿ ಲೂಸಿಯಾ ರಡೆಚ್ಕಾ-ಫ್ರಾಂಟಿಸೆಕ್ ಕೆರ್ಮಾಕ್ ಎದುರು ಜಯ ಸಾಧಿಸಿದರು. ಇದಕ್ಕಾಗಿ 49 ನಿಮಿಷ ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT