ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿಯಿಂದ ಹಿರಿಯ ಜೀವಿಗಳ ಆರೋಗ್ಯ ತಪಾಸಣೆ

Last Updated 2 ಫೆಬ್ರುವರಿ 2013, 18:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯ ತಂಡ ಬಾಳಿನ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ನಾಡಿ ಹಿಡಿದು ಆರೋಗ್ಯ ತಪಾಸಣೆ ನಡೆಸುತ್ತಿದ್ದರೆ, ಸುಕ್ಕುಗಟ್ಟಿದ ಮುಖಗಳಲ್ಲಿ ಒಂದು ತೆರನಾದ ಮಂದಹಾಸ ಮೂಡಿತ್ತು.

ಇದು ರೋಟರಿ ಕಂಟೋನ್ಮೆಂಟ್ ಮತ್ತು ನೈರುತ್ಯ ವಿಭಾಗವು ಜಯನಗರ ನ್ಯಾಷನಲ್ ಕಾಲೇಜಿನ ಎಚ್. ಎನ್. ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ `ಯೋಗಕ್ಷೇಮ 2013' ಶಿಬಿರದಲ್ಲಿ ಕಂಡುಬಂದ ದೃಶ್ಯ.

ಸಾಲು ಸಾಲು ಮಳಿಗೆಗಳಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಿರುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ತಪಾಸಣೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅರವತ್ತರ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗೆಯ ಕುರಿತು ಭರಪೂರ ಮಾಹಿತಿ ನೀಡಲಾಗುತ್ತಿತ್ತು.

ಇದರೊಂದಿಗೆ ಅಕಾಲ ವೃದ್ಧಾಪ್ಯ ಮತ್ತು ಅದರೊಂದಿಗೆ ತಳಕು ಹಾಕಿಕೊಂಡಿರುವ ಮಧುಮೇಹ, ರಕ್ತದ ಒತ್ತಡ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ವೈದ್ಯರು ಮಾಹಿತಿ ನೀಡಿದರು. ಇದಲ್ಲದೇ ಖಿನ್ನತೆ, ಮರೆಗುಳಿತನ, ಸ್ಕಿಜೋಫ್ರೇನಿಯಾದಂತಹ  ಮಾನಸಿಕ ಕಾಯಿಲೆಗಳ ಉಪಾಚಾರ ಕುರಿತು ವಿವರಿಸಿದರು.

  ಕಾಡುವ ಕಿವಿ, ಕಣ್ಣಿನ ದೋಷ,ಮಧುಮೇಹ, ರಕ್ತದ ಒತ್ತಡ,  ನಿದ್ರಾ ಹೀನತೆಗೆ ಸಂಬಂಧಪಟ್ಟಂತೆ  ಬಹುತೇಕ ವೃದ್ಧರು ವೈದ್ಯರಲ್ಲಿ  ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಪೋಲೋ, ವಿಕ್ರಂ, ನಿಮ್ಹಾನ್ಸ್, ಮಣಿಪಾಲ ಹೆಲ್ತ್ ಕೇರ್, ವಿಠಲ ಕಣ್ಣಿನ ಆಸ್ಪತ್ರೆ, ಸುನೇತ್ರ ಕಣ್ಣಿನ ಆಸ್ಪತ್ರೆ  ಸೇರಿದಂತೆ ಸುಮಾರು 20ಕ್ಕೂ ಅಧಿಕ ಆಸ್ಪತ್ರೆಗಳ ವೈದ್ಯ ಸಿಬ್ಬಂದಿ ಹಿರಿಯ ನಾಗರಿಕರ ಯೋಗಕ್ಷೇಮವನ್ನು ಆಸ್ಥೆಯಿಂದ ವಿಚಾರಿಸಿದರು. ಇದರೊಂದಿಗೆ ಸ್ಟಾರ್ ಜೀವವಿಮಾ ನಿಗಮ ಸಂಸ್ಥೆಯೂ ವೃದ್ಧ ಜೀವಗಳಿಗೆ ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿತು. ಅರವತ್ತರ ಹರೆಯದ ನಂತರವೂ ಕೌಶಲ ಉಪಯೋಗಿಸಿ ಸ್ವಾವಲಂಬನೆ ಸಾಧಿಸುವ ಬಗ್ಗೆ ನೈಟಿಂಗೇಲ್ ಸಂಸ್ಥೆಯೂ ವಿಚಾರ ಮಂಡಿಸಿತು.

ಜೀವಹಿಂಡುವ ಬೆನ್ನುನೋವು, ಮಂಡಿನೋವು, ಸೊಂಟನೋವು, ಕುತ್ತಿಗೆ ನೋವಿಗೆ ಅಗತ್ಯವಾಗಿ ಹಾಕಿಕೊಳ್ಳುವ ಬೆಲ್ಟ್ ಮತ್ತು ಇತರೆ ಉಪಕರಣಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಯಿತು. ಈ ಬಗ್ಗೆ ಮಾತನಾಡಿದ ಮಣಿಪಾಲ ಹೆಲ್ತ್ ಕೇರ್‌ನ ವೈದ್ಯ ಡಾ. ಸಂಗೀತಾ, `ಕೇವಲ ವೃದ್ಧರಿಗೆ ಸಹಾಯವಾಗಲೆಂದು ಈ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಹೊರತು ಮಾರಾಟಕ್ಕೆ ಅಲ್ಲ. ಮಾತ್ರೆ ಹಾಗೂ ಔಷಧಿಗಳಿಂದಲೇ ಎಲ್ಲ ನೋವಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅತ್ಯಾಧುನಿಕ ಉಪಕರಣಗಳು ಕೂಡ ನೋವು ಶಮನಕ್ಕೆ ಸಹಕಾರಿ' ಎಂದು ತಿಳಿಸಿದರು.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ರೋಟರಿ ಕ್ಲಬ್‌ನ ನಿಯೋಜಿತ ಡಿಸ್ಟ್ರಿಕ್ ಗರ್ವನರ್ ಮಂಜುನಾಥ್ ಶೆಟ್ಟಿ, `ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ರೋಟರಿ ಕ್ಲಬ್ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಂದಿ ಹಿರಿಯ ನಾಗರಿಕರು ಆಗಮಿಸುವ ನಿರೀಕ್ಷೆಯಿದೆ' ಎಂದು ತಿಳಿಸಿದರು.

`ಜನರಲ್ಲಿ ಆರೋಗ್ಯದ ಅರಿವು ಮೂಡಿಸುವತ್ತ ರೋಟರಿ ಕ್ಲಬ್ ಸದಾ ಮುಂದಿದೆ. ಕಳೆದ ವರ್ಷ 250 ಮಂದಿ ಮಕ್ಕಳಿಗೆ ಉಚಿತ ಹೃದಯಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನಷ್ಟು ಆರೋಗ್ಯಪರ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ' ಎಂದು ತಿಳಿಸಿದರು.

ರೋಟೆರಿಯನ್ ಶೈಲೇಂದ್ರ ಗುಪ್ತ, `ಆಸ್ಪತ್ರೆಗಳಿಗೆ ಬಾಡಿಗೆ ರಹಿತವಾಗಿ ಮಳಿಗೆಗಳನ್ನು ನೀಡಲಾಗಿದೆ. ಇದು ಹಿರಿಯರಿಗೆ ಆರೋಗ್ಯ ಚಿಂತನಾ ಶಿಬಿರವೇ ಹೊರತು ವ್ಯಾಪಾರದ ಉದ್ದೇಶವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಗಿದ್ದು, ರೋಟರಿ ಕ್ಲಬ್ ವೆಚ್ಚ ಭರಿಸಲಿದೆ' ಎಂದು ತಿಳಿಸಿದರು.
ರೋಟೆರಿಯನ್ ಎಸ್.ಸುಧಾಕರ್ ಇತರರು ಉಪಸ್ಥಿತರಿದ್ದರು. ಶಿಬಿರವು ಫೆಬ್ರವರಿ 3 ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ನಡೆಯಲಿದೆ.

ಇನ್ನಿಲ್ಲ ಆತಂಕ

ವೃದ್ಧಾಪ್ಯ ಕಾಲದಲ್ಲಿ ಮನೆಯಿಂದ ಮಕ್ಕಳು ದೂರವಿದ್ದಾರೆ. ಮನೆಯಲ್ಲಿರುವ ಹಿರಿಯ ಜೀವಗಳಿಗೆ ಅಭದ್ರತೆ ಕಾಡುತ್ತಿದೆಯೇ? ಹಾಗಿದ್ದರೆ ಒಮ್ಮೆ ಈ ಶಿಬಿರಕ್ಕೆ ಭೇಟಿ ನೀಡಿ. ಕಳ್ಳಕಾಕಾರ ಭಯವನ್ನು ನಿವಾರಣೆಗೊಳಿಸಲು ಈ ಶಿಬಿರದಲ್ಲಿ ಜಯನಗರ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಒಂದು ಮಳಿಗೆ ತೆರೆಯಲಾಗಿದೆ.

ಈ ಬಗ್ಗೆ ಮಾತನಾಡಿದ ಎಪ್ಪತ್ತರ ಹರೆಯದ ನೀಲಂ, `ಪೊಲೀಸ್ ಮತ್ತು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೆಂದರೆ ಮೊದಲಿನಿಂದಲೂ ಭಯ. ಮಗ ದೂರದ ಅಮೆರಿಕದ ಸಿನ್ಸಿನಾಟಿಯಲ್ಲಿ ವಾಸ ಮಾಡುತ್ತಿದ್ದಾನೆ. ದಂಪತಿಗಳಿಬ್ಬರೇ ವಾಸ ಮಾಡುತ್ತಿರುವುದರಿಂದ ಕಳ್ಳಕಾಕಾರ ಭಯ ಹೆಚ್ಚುತ್ತಿದೆ. ಆದರೆ ಈ ಶಿಬಿರಕ್ಕೆ ಆಗಮಿಸಿ ಜಯನಗರ ಪೊಲೀಸ್ ಠಾಣಾ ಸಿಬ್ಬಂದಿಯೊಂದಿಗೆ ಮಾತನಾಡಿದ ಮೇಲೆ ಧೈರ್ಯ ಬಂದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT