ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚಕ ಟೈ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ಪ್ರಿಯರ ಎದೆಬಡಿತ ಹೆಚ್ಚಿಸಿದ ರೋಚಕ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡಕ್ಕೂ ಸಮಾಧಾನವಾಗುವಂತೆ ಹಾಗೂ ರನ್ನುಗಳ ಮಳೆಗೆ ಹಿರಿಮೆ ತಂದುಕೊಡುವಂತೆ ಪಂದ್ಯ ‘ಟೈ’ ಆಯಿತು. ಕೊನೆಯ ಓವರ್‌ನಲ್ಲಿ 14 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 13 ರನ್ನುಗಳನ್ನು ಹೊಡೆದು ಗೆಲುವು ಸಾಧಿಸಲಾಗದಿದ್ದರೂ ಸೋಲನ್ನು ತಪ್ಪಿಸಿಕೊಂಡಿತು.

ಭಾರತದ 338 ರನ್ನುಗಳಿಗೆ ಉತ್ತರವಾಗಿ ಇಂಗ್ಲೆಂಡ್ 50 ಓವರುಗಳಲ್ಲಿ 8 ವಿಕೆಟ್‌ಗೆ 338 ರನ್ ಗಳಿಸಿತು. ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ ಪಡೆದವು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹತ್ತನೇ ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯ ಎರಡು ಸಲ ಅನಿರೀಕ್ಷಿತ ತಿರುವುಗಳನ್ನು ಪಡೆಯಿತು. ಪಂದ್ಯ ಗೆಲ್ಲಲು ಭಾರತ ಕೊಟ್ಟಿದ್ದ 339 ರನ್ನುಗಳ ಸವಾಲನ್ನು ಇಂಗ್ಲೆಂಡ್ ದಿಟ್ಟವಾಗಿಯೇ ಸ್ವೀಕರಿಸಿತ್ತು. ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರ ಭರ್ಜರಿ ಶತಕ ಹಾಗೂ ಇಯಾನ್ ಬೆಲ್ ಜೊತೆಗಿನ 170 ರನ್ನುಗಳ ಮೂರನೇ ವಿಕೆಟ್ ಜೊತೆಯಾಟ ಇಂಗ್ಲೆಂಡ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತ್ತು. ಆದರೆ ಜಹೀರ್ ಖಾನ್ ಈ ಜೊತೆಯಾಟ ಮುರಿದರಲ್ಲದೇ ಏಳು ಎಸೆತಗಳ ಅಂತರದಲ್ಲಿ ಮೂರು ವಿಕೆಟ್ ಉರುಳಿಸಿ ಗೆಲುವಿನ ಅವಕಾಶವನ್ನು ಭಾರತದ ಕಡೆ ತಿರುಗಿಸಿದರು. ಪಟಪಟನೆ ವಿಕೆಟ್‌ಗಳು ಬಿದ್ದವಾದರೂ ಗ್ರೇಮ್ ಮತ್ತು ಅಜ್ಮಲ್ ಶಹಜಾದ್ ಒಂದೊಂದು ಸಿಕ್ಸರ್ ಎತ್ತಿ ಇಂಗ್ಲೆಂಡ್‌ಗೂ ಗೆಲುವಿನ ಅವಕಾಶ ಉಳಿಯುವಂತೆ ನೋಡಿಕೊಂಡರು.

ಮುನಾಫ್ ಪಟೇಲ್ ಕೊನೆಯ ಓವರ್ ಬೌಲ್ ಮಾಡಲು ಎಲ್ಲರೂ ಕುತೂಹಲದಿಂದ ಎದ್ದುನಿಂತರು. ಮೂರನೇ ಎಸೆತವನ್ನು ಶಹಜಾದ್ ಲಾಂಗ್‌ಆಫ್ ಮೇಲೆ ಸಿಕ್ಸರ್ ಎತ್ತಿದರು. ಮುಂದಿನ ಎರಡು ಎಸೆತಗಳಲ್ಲಿ ಮೂರು ರನ್ನುಗಳು ಬಂದವು. ಕೊನೆಯ ಎಸೆತ ಇದ್ದಾಗ ಇಂಗ್ಲೆಂಡ್‌ಗೆ ಗೆಲ್ಲಲು ಎರಡು ರನ್ ಮಾಡಬೇಕಿತ್ತು. ಸ್ವಾನ್ ಒಂದು ರನ್ ತೆಗೆದುಕೊಳ್ಳಲು ಮಾತ್ರ ಸಾಧ್ಯವಾಯಿತು. ಎರಡೂ ತಂಡಗಳೂ ಸಮಾಧಾನದ ನಿಟ್ಟುಸಿರು ಬಿಟ್ಟವು.

ಇಂಗ್ಲೆಂಡ್ 2 ವಿಕೆಟ್‌ಗೆ 281 ರನ್ ಮಾಡಿದ್ದಾಗ ತಮ್ಮ ಕೊನೆಯ ಮೂರು ಓವರ್‌ಗಳನ್ನು ಬೌಲ್ ಮಾಡಲು ಬಂದ ಜಹೀರ್ ಖಾನ್ ದಿಢೀರನೆ ಪಂದ್ಯದ ಗತಿಯನ್ನು ಬದಲಿಸಿದರು. ಮೊದಲು ಬೆಲ್ ಕವರ್ಸ್‌ನಲ್ಲಿ ಕ್ಯಾಚ್ ಕೊಟ್ಟರೆ, ಮರುಎಸೆತದಲ್ಲಿ ಸ್ಟ್ರಾಸ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಜಹೀರ್ ತಮ್ಮ ಮುಂದಿನ ಓವರ್‌ನಲ್ಲಿ ಕಾಲಿಂಗ್‌ವುಡ್ ವಿಕೆಟ್ ಹಾರಿಸಿದರು. ಭಾರತ ಸೋಲುವುದೆಂದು ಎದ್ದುಹೋಗುತ್ತಿದ್ದ ಪ್ರೇಕ್ಷಕರು ಕುಳಿತುಕೊಳ್ಳುವಂತೆ ಮಾಡಿದ ಜಹೀರ್ ಕ್ರೀಡಾಂಗಣದಲ್ಲಿ ಜೀವಕಳೆ ಮರಳುವಂತೆ ಮಾಡಿದರು. ಹರಭಜನ್, ಚಾವ್ಲಾ ಕೂಡ ಒಂದೊಂದು ವಿಕೆಟ್ ಗಳಿಸಿದಾಗ ಇಂಗ್ಲೆಂಡ್‌ನ ಹೋರಾಟ ಹುಸಿಹೋಗುವುದೆಂದು ತೋರಿತ್ತು. ಆದರೆ ಸ್ವಾನ್ ಮತ್ತು ಶಹಜಾದ್ ಇಂಗ್ಲೆಂಡ್ ಸೋಲದಂತೆ ನೋಡಿಕೊಂಡರು.

ಸಚಿನ್  ಅವರ ನೂರರ ಆಟ ನೋಡಲು ಮಳೆರಾಯ ಮೋಡಗಳನ್ನು ಹಾರಿಸಿಬಿಟ್ಟರೆ, ಆ್ಯಂಡ್ರ್ಯೂ ಸ್ಟ್ರಾಸ್ ಅವರ ಬ್ಯಾಟಿಂಗ್ ಭಾರತದ ಬೌಲರುಗಳನ್ನು ದಿಕ್ಕೆಡಿಸಿಬಿಟ್ಟಿತ್ತು. ಸಚಿನ್ ಅವರಿಗಿಂತ ಹೆಚ್ಚು ರನ್ ಹೊಡೆದ ನಾಯಕ ಸ್ಟ್ರಾಸ್ ಇಂಗ್ಲೆಂಡ್ ಆರಾಮವಾಗಿ ಗೆಲುವಿನ ಹಾದಿಯಲ್ಲಿ ಹೆಜ್ಜೆ ಇಡುವಂತೆ ಆಡಿದರು. ಭಾರತದ ಬ್ಯಾಟ್ಸಮನ್ನರು ಕಟ್ಟಿದ್ದ ದೊಡ್ಡ ಮೊತ್ತದ ಸೌಧವನ್ನು ಬೌಲರುಗಳು ಕೆಡವಬಹುದೆಂದು ತೋರಿತ್ತು. ಆದರೆ ಹಾಗಾಗಲಿಲ್ಲ. ಪಕ್ಕಾ ವೃತ್ತಿಪರವಾಗಿದ್ದ ಸ್ಟ್ರಾಸ್ ಮತ್ತು ಬೆಲ್ ನಡುವಣ ಜೊತೆಯಾಟ ಮುರಿದಾಗಲೇ ಭಾರತದ ಬೌಲರ್‌ಗಳ ಮುಖದಲ್ಲಿ ನಗು ಅರಳಿದ್ದು.

ಸಚಿನ್ ತೆಂಡೂಲ್ಕರ್ (120)  ತಮ್ಮ ಸುದೀರ್ಘ 22 ವರ್ಷಗಳ ಕ್ರಿಕೆಟ್ ಜೀವನದ ಒಂದು ಅತ್ಯುತ್ತಮ ಶತಕವನ್ನು ಹೊಡೆದರು. ಆದರೆ ಸ್ಟ್ರಾಸ್ (158) ಅದನ್ನು ಮೀರಿಸಿದರು. ಕೆವಿನ್ ಪೀಟರ್ಸನ್ ಮತ್ತು ಟ್ರಾಟ್ ಔಟಾದಾಗ ಇಂಗ್ಲೆಂಡ್‌ಗೆ ಗುರಿಮುಟ್ಟುವುದು ಕಷ್ಟವಾಗಬಹುದೆಂದು ತೋರಿತ್ತು. ಆದರೆ ಸ್ಟ್ರಾಸ್ ಮತ್ತು ಬೆಲ್ ಯಾವ ಗಡಿಬಿಡಿಯನ್ನು ತೋರದೇ ಭಾರತದ ಬೌಲರುಗಳ ದೌರ್ಬಲ್ಯವನ್ನು ಎತ್ತಿತೋರಿಸಿದರು.

ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಮತ್ತು ಲೆಗ್‌ಸ್ಪಿನ್ನರ್ ಪಿಯೂಶ್ ಚಾವ್ಲಾ ಪರಿಣಾಮಕಾರಿಯಾಗಿರಲಿಲ್ಲ. ಪಿಚ್ ಬ್ಯಾಟ್ಸಮನ್ನರ ಪರವಾಗಿಯೇ ಇತ್ತು. ಆದರೆ ಜಹೀರ್ ಖಾನ್ ಅವರ ಅಂತಿಮ ದಾಳಿಯಲ್ಲಿ ಜಾದೂ ಮೂಡಿಬಂದಿತ್ತು. ಭಾರತವೂ ಸೋಲಿನಿಂದ ಪಾರಾಯಿತು.

ವಿಶ್ವ ಕಪ್‌ನಲ್ಲಿ ‘ಟೈ’ ಆದ ನಾಲ್ಕನೇ ಪಂದ್ಯ. ಆಸ್ಟ್ರೇಲಿಯ-ದಕ್ಷಿಣ ಆಫ್ರಿಕ ನಡುವೆ 1999 ರಲ್ಲಿ; ದಕ್ಷಿಣ ಆಫ್ರಿಕ-ಶ್ರೀಲಂಕಾ ನಡುವೆ 2003 ರಲ್ಲಿ ಮತ್ತು 2007 ರಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯಗಳು ಟೈ ಆಗಿದ್ದವು. ಆ್ಯಂಡ್ರ್ಯೂ ಸ್ಟ್ರಾಸ್ ‘ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಟಾಸ್ ಗೆದ್ದ ಮಹೇಂದ್ರಸಿಂಗ್ ದೋನಿ ಅನುಮಾನವಿಲ್ಲದೇ ಬ್ಯಾಟಿಂಗ್ ಆಯ್ದುಕೊಂಡರು. ವೀರೇಂದ್ರ ಸೆಹ್ವಾಗ್ ಮಧ್ಯಾಹ್ನದ ಮೊದಲ ಎಸೆತದಲ್ಲೇ ಬಚಾವಾದರು.

ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಸೆಹ್ವಾಗ್ ಬ್ಯಾಟಿನಿಂದ ಸಿಡಿದು ಎರಡನೇ ಸ್ಲಿಪ್‌ನಲ್ಲಿ ಸ್ವಾನ್ ಬಲಬದಿಯಿಂದ ಬೌಂಡರಿಗೆ ಹೋಯಿತು. ಮೂರನೇ ಎಸೆತದಲ್ಲಿ ಚೆಂಡನ್ನು ಹಿಡಿಯಲು ಕವರ್ಸ್‌ನಲ್ಲಿದ್ದ ಕಾಲಿಂಗ್‌ವುಡ್ ಮೇಲೆ ಹಾರಿದರಾದರೂ ಅದು ಅವರ ಕೈಗೆ ಸಿಗಲಿಲ್ಲ.

ಐದನೇ ಎಸೆತದಲ್ಲಿ ಆ್ಯಂಡರ್ಸನ್ ಕೂಡ ಬೌಲ್ ಮಾಡಿ ಮುಂದೆ ಓಡಿಬಂದದ್ದರಿಂದ ಕ್ಯಾಚ್ ಹಿಡಿಯಲಾಗಲಿಲ್ಲ. ನಂತರ ಸೆಹ್ವಾಗ್ ಆರು ಬೌಂಡರಿ ಹೊಡೆದರಾದರೂ ಅವರ ಆಟದಲ್ಲಿ ಢಾಕಾದಲ್ಲಿ ಕಂಡುಬಂದಿದ್ದ ವಿಶ್ವಾಸ ಕಾಣಲಿಲ್ಲ.

ಆದರೆ ಢಾಕಾದಲ್ಲಿ ರನ್‌ಔಟ್ ಆಗಿದ್ದಕ್ಕೆ ತಮ್ಮನ್ನು ತಾವೇ ಹಳಿದುಕೊಂಡಿದ್ದ ಸಚಿನ್ ತೆಂಡೂಲ್ಕರ್ ಭಾನುವಾರ ಮಾಡಿದ್ದು ಒಂದೇ ತಪ್ಪು. ಅದು ಶತಕ ದಾಟಿ ಬೇಗ ಬೇಗ ಹೆಚ್ಚು ರನ್ ಗಳಿಸುವ ಆತುರದಲ್ಲಿದ್ದಾಗ. ಆ್ಯಂಡರ್ಸನ್ ಅವರನ್ನು ಚೆನ್ನಾಗಿ ಹಣಿದಿದ್ದ ಅವರು ಪಕ್ಕಕ್ಕೆ ಸರಿದು ಚೆಂಡನ್ನು ಕವರ್ಸ್ ಮೇಲೆ ಎತ್ತಲು ಹೋಗಿ ಕ್ಯಾಚ್ ಕೊಟ್ಟರು. ಅಷ್ಟೊತ್ತಿಗೆ ಅವರು ಭಾರತವನ್ನು ದೊಡ್ಡ ಮೊತ್ತದ ಹಾದಿಯಲ್ಲಿ ಮುನ್ನಡೆಸಿದ್ದರು.

ಸಚಿನ್ ಆಟ ಜನರನ್ನು ಹುಚ್ಚೆಬ್ಬಿಸಿಬಿಟ್ಟಿತು. ಅವರ ಬ್ಯಾಟಿನಿಂದ ಕ್ರಿಕೆಟ್ ಪುಸ್ತಕದಲ್ಲಿರುವ ಇಲ್ಲದಿರುವ ಹೊಡೆತಗಳೆಲ್ಲ ಬಂದವು.

ಆಫ್‌ಸ್ಪಿನ್ನರ್ ಗ್ರೇಮ್ ಸ್ವಾನ್ ಮತ್ತು ಪಾಲ್ ಕಾಲಿಂಗ್‌ವುಡ್ ಬೌಲಿಂಗ್‌ನಲ್ಲಂತೂ ಚೆಂಡು ಅವರಿಗೆ ಫುಟ್‌ಬಾಲ್‌ನಂತೆ ಕಂಡಿರಬೇಕು. ಅವರು ಸ್ವಾನ್ ಬೌಲಿಂಗ್‌ನಲ್ಲಿ ಮೂರು ಹಾಗೂ ಕಾಲಿಂಗ್‌ವುಡ್ ಬೌಲಿಂಗ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಎತ್ತಿದರು. ಅವರ ಬೌಂಡರಿಗಳಲ್ಲಿ ಕಲಾತ್ಮಕ ಸ್ಪರ್ಶ ಇತ್ತು. ಸಚಿನ್ ಇನ್ನೂ 25ರ ಯುವಕನಂತೆ ಆಡಿದರು. ಗಂಭೀರ್ ಜೊತೆ ಎರಡನೇ ವಿಕೆಟ್‌ಗೆ 131 ಎಸೆತಗಳಲ್ಲಿ 134 ರನ್; ಯುವರಾಜ್ ಸಿಂಗ್ ಜೊತೆ ಮೂರನೇ ವಿಕೆಟ್‌ಗೆ 56 ರನ್ ಸೇರಿಸಿದರು. ಗಂಭೀರ್ ಮತ್ತು ಯುವರಾಜ್ ಅರ್ಧಶತಕ ಗಳಿಸಿ ಉತ್ತಮ ಮೊತ್ತಕ್ಕೆ ನೆರವಾದರೂ ಸಚಿನ್ ಎದುರು ಅವರ ಉಪಯುಕ್ತ ಬ್ಯಾಟಿಂಗ್ ಮಸುಕಾಯಿತು.

ಭಾರತ 37ನೇ ಓವರ್‌ಗೆ ಬ್ಯಾಟಿಂಗ್ ಪವರ್‌ಪ್ಲೇ ತೆಗೆದುಕೊಂಡಿತು. ಆಗ ಸಚಿನ್ ಮತ್ತು ಯುವರಾಜ್ ಆಡುತ್ತಿದ್ದರು.39ನೇ ಓವರ್‌ನಲ್ಲಿ ಸಚಿನ್ ಔಟಾದರು. ಆಗ ದೋನಿ ಬಂದರಾದರೂ ಐದು ಓವರುಗಳಲ್ಲಿ ಬಂದದ್ದು ಕೇವಲ 32 ರನ್. ಆದರೆ ಕೊನೆಯ ಎಂಟು ಓವರುಗಳಲ್ಲಿ 76 ರನ್ ಬಂದವು. ದೋನಿ ಕೂಡ ಚುರುಕಾಗಿಯೇ ಆಡಿದರು.

ಇಂಗ್ಲೆಂಡ್ ಬೌಲರುಗಳಲ್ಲಿ ಟಿಮ್ ಬ್ರೆಸ್ನನ ಒಬ್ಬರೇ ಬ್ಯಾಟ್ಸಮನ್ನರನ್ನು ಬಿಗಿಹಿಡಿದಿದ್ದು. ಅಷ್ಟೇ ಅಲ್ಲ ಅವರು ಐದು ವಿಕೆಟ್ ಕೂಡ ಕಿತ್ತರು. ಆ್ಯಂಡರ್ಸನ್ ಅವರಂತೂ ಚೆನ್ನಾಗಿ ಹೊಡೆಸಿಕೊಂಡು 91 ರನ್ ಕೊಟ್ಟರು. ಶಹಜಾದ್, ಸ್ವಾನ್, ಯಾರ್ಡಿ ರನ್ ಕೊಡುವುದರಲ್ಲಿ ಅರ್ಧಶತಕ ದಾಟಿದರು. ಪಿಚ್ ಸ್ಪಿನ್ನರುಗಳಿಗೆ ನೆರವಾಗುವುದೆಂಬ ನಂಬಿಕೆ ಇಂಗ್ಲೆಂಡ್ ಮಟ್ಟಿಗಂತೂ ಹುಸಿಹೋಯಿತು.

ಭಾರತ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 6 ರಂದು ಐರ್ಲೆಂಡ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT