ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಿಯೊಗೆ ಮಂಜಣ್ಣನ ಶಕ್ತಿಮದ್ದು!

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಸುದ್ದಿಗೋಷ್ಠಿಯಲ್ಲಿ ಕುಳಿತ ಚಿತ್ರತಂಡ ಅಂದು ಮಾತನಾಡಿದ್ದು ಕಡಿಮೆ. ಮೈಕು ಕೈಗೆತ್ತಿಕೊಂಡ ನಿರ್ಮಾಪಕ ಕೆ.ಮಂಜು ಮಾತ್ರ ಮಾತು ನಿಲ್ಲಿಸುವ ಲಕ್ಷಣ ಕಾಣಲಿಲ್ಲ. ಮಂಜಣ್ಣನ ಮಾತಿನ ಬಂಡಿ ಸಾಗುತ್ತಲೇ ಇತ್ತು. ಕೊನೆಗೆ ಅದಕ್ಕೆ ಬ್ರೇಕ್ ಹಾಕಿದ್ದು ನಟ ಗಣೇಶ್.

ಗಣೇಶ್- ಭಾವನಾ (ಜಾಕಿ) ಅಭಿನಯದ `ರೋಮಿಯೊ~ ಈ ವಾರ ತೆರೆಕಾಣುತ್ತಿದೆ. ಸುದ್ದಿಗೋಷ್ಠಿಯ ಕೇಂದ್ರ ಬಿಂದು ಕೆ.ಮಂಜು. ಕಾರಣ ಚಿತ್ರವಿತರಣೆಯ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿರುವುದು.

`ರೋಮಿಯೊ~ದ ಯಾವ ಸುದ್ದಿಗೋಷ್ಠಿಯಲ್ಲೂ ನಾಯಕಿ ಭಾವನಾ ಮುಖ ಕಂಡಿರಲಿಲ್ಲ. ಚಿತ್ರತಂಡದ ಕೊನೆಯ ಸುದ್ದಿಗೋಷ್ಠಿಗೂ ಅವರು ಹಾಜರಾಗಿರಲಿಲ್ಲ. ಅವರು ಅಮೆರಿಕದಲ್ಲಿದ್ದಾರೆ ಹೀಗಾಗಿ ಬಂದಿಲ್ಲ ಎಂಬ ಸಮಜಾಯಿಷಿ ನಿರ್ಮಾಪಕ ನವೀನ್ ಅವರಿಂದ ಬಂತು.

ಗಾಂಧಿನಗರದ ಹಂಚಿಕೆದಾರರೆಲ್ಲರಿಗೂ `ರೋಮಿಯೊ~ ಬೇಕು. ಆದರೆ ಯಾರೂ ಕಾಸು ಕೊಟ್ಟು ಕೊಳ್ಳಲು ತಯಾರಿಲ್ಲ ಎಂದು ವ್ಯಂಗ್ಯವಾಗಿ ನುಡಿದರು ಮಂಜು. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಮಗೆ ನಂಬಿಕೆ ಇದೆ ಎಂದು ಹೇಳಿದ ಅವರು, ತಮ್ಮ ಚಿತ್ರಗಳ ಲಾಭ ನಷ್ಟದ ಅಂದಾಜನ್ನು ಮೊದಲೇ ಊಹಿಸುವ ಶಕ್ತಿ ತಮಗಿದೆ ಎಂದು ಹೇಳಿಕೊಂಡರು. ಅವರ ಪ್ರಕಾರ ರೋಮಿಯೊ ಆರರಿಂದ ಏಳು ಕೋಟಿ ಗಳಿಕೆ ಮಾಡಲಿದೆಯಂತೆ.

ರೋಮಿಯೊ ಪ್ರದರ್ಶನಗೊಳ್ಳಲಿರುವ ಚಿತ್ರಮಂದಿರಗಳಿಗೆ ಮಂಜು ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆಯಂತೆ. ಈ ತಂಡ ಯಾವಾಗ ಎಲ್ಲಿ ಪರಿಶೀಲನೆ ನಡೆಸಲಿದೆಯೋ ಹೇಳಲಾಗದು. ಚಿತ್ರಮಂದಿರಗಳಲ್ಲಿ ಮಾಲೀಕರ ಗಮನಕ್ಕೆ ಬಾರದಂತೆ ಅಲ್ಲಿನ ಸಿಬ್ಬಂದಿ ಗುಪ್ತ ವ್ಯವಹಾರ ನಡೆಸಿ ಟಿಕೆಟ್ ಪಡೆಯದೆ ಜನರನ್ನು ಒಳಗೆ ಬಿಡುತ್ತಾರೆ.
ಇದನ್ನು ತಡೆಯಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಚಿತ್ರದ ಕಥೆ ಅದ್ಭುತವಾಗಿದೆ. ಮೊದಲು ನಿರ್ದೇಶಕ ಶೇಖರ್ ಕಥೆ ಹೇಳುವ ರೀತಿ ನೋಡಿದಾಗ, ಕಥೆ ಹೇಳುತ್ತಾರೋ ಅಥವಾ ನಿಜವಾಗಿಯೂ ಸಿನಿಮಾ ಮಾಡುತ್ತಾರೋ ಎಂದೆನಿಸಿತ್ತು. ಕೇಳಿದ ಕಥೆಗಿಂತಲೂ ಚೆನ್ನಾಗಿ ಚಿತ್ರ ಮೂಡಿಬಂದಿದೆ.

ತಮ್ಮ ವೃತ್ತಿ ಬದುಕಿನ ವಿಶಿಷ್ಟ ಚಿತ್ರಗಳ್ಲ್ಲಲಿ ಇದೂ ಒಂದು. ಇದರ ಎಲ್ಲಾ ಶ್ರೇಯಸ್ಸು ನಿರ್ದೇಶಕರಿಗೆ ಸಲ್ಲುತ್ತದೆ ಎಂದರು ನಟ ಗಣೇಶ್. ಪ್ರಥಮ ಬಾರಿಗೆ ಸಂಭಾಷಣೆ ಬರೆದ ನಟರಾಜ್ ಬಗ್ಗೆ ಗಣೇಶ್ ಮೆಚ್ಚುಗೆ ಮಾತನ್ನಾಡಿದರು.

ತಮಿಳಿನಲ್ಲಿ ಚಿತ್ರವೊಂದನ್ನು ಮಾಡಿ ರಾಜ್ಯಪ್ರಶಸ್ತಿ ಪಡೆದಿದ್ದ ಪಿ.ಸಿ.ಶೇಖರ್ `ಮುಂಗಾರು ಮಳೆ~ ನೋಡಿ ಗಣೇಶ್‌ಗಾಗಿಯೇ 2006ರಲ್ಲಿ `ರೋಮಿಯೊ~ ಕಥೆ ಸಿದ್ಧಪಡಿಸಿದರಂತೆ. ಇದರಲ್ಲಿ ಸಾಕಷ್ಟು ವಿಶೇಷತೆಗಳಿವೆ. ಇಡೀ ಚಿತ್ರ ಕಲಾಕೃತಿಯ ರೂಪದಲ್ಲಿ ಮೂಡಿಬಂದಿದೆ ಎಂದು ಹೇಳಿದರು.

`ಆಲಾಪನೆ ಆರಾಧನೆ...~ ಹಾಡು ಸೇರಿದಂತೆ `ರೋಮಿಯೊ~ದ ಹಾಡುಗಳು ಹಿಟ್ ಆಗಿರುವುದರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪುಳಕಿತರಾಗಿದ್ದರು. ರೀರೆಕಾರ್ಡಿಂಗ್‌ನಲ್ಲಿ ಸುದೀರ್ಘ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಿದ್ದ ನಿರ್ದೇಶಕರ ಬದ್ಧತೆಯ ಬಗ್ಗೆ ಅವರ ಹೊಗಳಿಕೆ ಮೀಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT