ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮ್ನಿ ನಿಜರೂಪ ಬೇರೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಮೊದಲ ಮುಖಾಮುಖಿ ಚರ್ಚೆಯಲ್ಲಿ ಹಿನ್ನಡೆ ಅನುಭವಿಸಿರುವ ಬರಾಕ್ ಒಬಾಮ, `ಬುಧವಾರ ರಾತ್ರಿ ನಡೆದ ಚರ್ಚೆ ವೇಳೆ ರೋಮ್ನಿ ಅವರು ನೈಜ ರೋಮ್ನಿ ಆಗಿರಲಿಲ್ಲ~ ಎಂದು ಟೀಕಿಸಿದ್ದಾರೆ.

ರೋಮ್ನಿ ಅಂದು ವೇದಿಕೆ ಮೇಲೆ ವಿರೋಧಾಭಾಸದ ಪ್ರತೀಕವಾಗಿದ್ದರು. ಇದುವರೆಗೆ ಸ್ವತಃ ಯಾವ ನೀತಿಗಳನ್ನು ಪ್ರತಿಪಾದಿಸುತ್ತಾ ಬಂದಿದ್ದರೋ ಅದಕ್ಕೆ ತದ್ವಿರುದ್ಧ ಅಂಶಗಳನ್ನು ಅವರು ಪ್ರಸ್ತಾಪಿಸಿದರು ಎಂದು ಒಬಾಮ ಚುಚ್ಚಿದರು.

ರೋಮ್ನಿ ಒಂದು ವರ್ಷದಿಂದಲೂ, ಅಮೆರಿಕನ್ನರು ಕಟ್ಟುತ್ತಿರುವ ಒಟ್ಟು ತೆರಿಗೆಯಲ್ಲಿ 5 ಟ್ರಿಲಿಯನ್ ಡಾಲರ್‌ಗಳನ್ನು ಕಡಿತಗೊಳಿಸುವ ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಇದು ಸಿರಿವಂತರ ಪರವಾದ ನೀತಿಯಾಗಿದೆ. ಆದರೆ ಬುಧವಾರ ಚರ್ಚಾ ವೇದಿಕೆಯಲ್ಲಿ ಮಾತ್ರ ಅವರು, ಈ ಬಗ್ಗೆ ತಮಗೇನೂ ಗೊತ್ತೇ ಇಲ್ಲವೆಂಬಂತೆ ನಟಿಸಿದರು ಎಂದು ಒಬಾಮ ಕುಟುಕಿದರು.

ಶಾಲೆಯ ತರಗತಿಗಳಲ್ಲಿ ಇನ್ನು ನಮಗೆ ಶಿಕ್ಷಕರ ಅಗತ್ಯವಿಲ್ಲ ಎಂದು ರೋಮ್ನಿ ಹಲವು ಬಾರಿ ಹೇಳಿದ್ದಾರೆ. ಆದರೆ ಚರ್ಚೆ ವೇಳೆ ಮಾತ್ರ ಅವರು ಶಿಕ್ಷಕರ ಬಗ್ಗೆ ಪ್ರೀತಿಯ ಮಳೆ ಸುರಿಸಿದರು ಎಂದು ಬರಾಕ್ ಒಬಾಮ ವ್ಯಂಗ್ಯವಾಡಿದರು.

ಅದೇ ರೀತಿ, ಹೊರಗುತ್ತಿಗೆ ನೀಡುವ ಕಂಪೆನಿಗಳಿಗೆ ತೆರಿಗೆ ನೀಡುವ ವಿಷಯವೇ ತಮಗೆ ಗೊತ್ತಿಲ್ಲ ಎಂದು ರೋಮ್ನಿ ನಟಿಸಿದರು. ಸ್ವತಃ ಹಲವು ಕಂಪೆನಿಗಳ ಒಡೆಯರಾದ, ತಮ್ಮದೇ ಕಂಪೆನಿಗಳಲ್ಲಿ ಈ ಹಿಂದೆ ಹೊರಗುತ್ತಿಗೆ ನೀಡಿದ್ದ ರೋಮ್ನಿ ಅವರಿಗೆ ಇದು ಗೊತ್ತಿಲ್ಲದಿರಲು ಸಾಧ್ಯವೇ ಇಲ್ಲ ಎಂದೂ ಒಬಾಮ ದೂರಿದರು.

ಗೆಲುವು ಸನಿಹದಲ್ಲಿ-ರೋಮ್ನಿ: ಡೆನ್ವರ್‌ನಲ್ಲಿ ಗುರುವಾರ ನಡೆದ ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಮುಕ್ತ ಚರ್ಚೆಯಲ್ಲಿ ಬರಾಕ್ ಒಬಾಮ ವಿರುದ್ಧ ಮೇಲುಗೈ ಸಾಧಿಸಿದ ರಿಪಬ್ಲಿಕನ್ ಪಕ್ಷದ ಎದುರಾಳಿ ಮಿಟ್ ರೋಮ್ನಿ, ಜನರ ಬೆಂಬಲದಿಂದಾಗಿ ನವೆಂಬರ್ 6ರ ಚುನಾವಣೆಯಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಗೆಲುವು ಕೈಗೆಟುಕಿದಂತೆ ಭಾಸವಾಗುತ್ತಿದೆ. ನಿಮ್ಮ ನೆರವಿನಿಂದ ಅದನ್ನು ನನಸಾಗಿಸುತ್ತೇವೆ~ ಎಂದು ರೋಮ್ನಿ ತಮ್ಮ ಬೆಂಬಲಿಗರಿಗೆ ಇ-ಮೇಲ್‌ನಲ್ಲಿ ಬರೆದಿದ್ದಾರೆ. ತಮ್ಮ ಕೊನೆಯ ಸುತ್ತಿನ ಪ್ರಚಾರಕ್ಕಾಗಿ ಹಣ ಸಂಗ್ರಹಿಸಲು ಬರೆದಿರುವ ಇ-ಮೇಲ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ.

ಅಮೆರಿಕದ ಭವಿಷ್ಯವನ್ನು ಸಂರಕ್ಷಿಸಲು ಹಾಗೂ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ತಾವು ಹಾಗೂ ತಮ್ಮ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾದ ಪೌಲ್ ರಿಯಾನ್ ಸಕಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT