ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಷನ್‌ನಗರಕ್ಕೆ ಉಪಮೇಯರ್ ಭೇಟಿ

Last Updated 21 ಡಿಸೆಂಬರ್ 2010, 10:40 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವರ ಜೀವನಹಳ್ಳಿ ವಾರ್ಡ್‌ನ ರೋಷನ್‌ನಗರ ಕೊಳೆಗೇರಿಯಲ್ಲಿ ಅರ್ಹರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಉಪಮೇಯರ್ ಎನ್. ದಯಾನಂದ್ ಹೇಳಿದರು.

ರೋಷನ್ ನಗರ ಮತ್ತು ಇತರೆ ಕೊಳೆಗೇರಿಗಳಿಗೆ ಸೋಮವಾರ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿ ಸ್ಥಳೀಯರ ಅಹವಾಲು ಆಲಿಸಿದರು.
‘ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಆದರೂ ಕುಡಿಯಲು ಶುದ್ದ ನೀರಿಲ್ಲ. ಶೌಚಾಲಯದ ವ್ಯವಸ್ಥೆಯಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿಲ್ಲ. ವಿದ್ಯುತ್ ಸಂಪರ್ಕವಿಲ್ಲ. ಮಳೆ ಸುರಿದಾಗ ನೀರು ಮನೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ನೈರ್ಮಲ್ಯವಿಲ್ಲದ ಪ್ರದೇಶದಲ್ಲೇ ದಿನ ಕಳೆಯುವಂತಾಗಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಅನುದಾನ:ಇದಕ್ಕೆ ಸ್ಪಂದಿಸಿದ ಉಪಮೇಯರ್, ‘ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣವೇ ಎರಡು ಕೊಳವೆ ಬಾವಿ ಕೊರೆಯಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುವುದು. ಈ ಎರಡೂ ಕಾರ್ಯಗಳಿಗೆ ಉಪಮೇಯರ್ ನಿಧಿಯಿಂದ ಅನುದಾನ ನೀಡಲಾಗುವುದು’ ಎಂದರು.

‘ಸುಮಾರು 1,500 ತಾತ್ಕಾಲಿಕ ಶೆಡ್‌ಗಳಲ್ಲಿ ನೆಲೆಸಿರುವವರಿಗೆ ಮನೆ ನಿರ್ಮಿಸಿ ಕೊಡುವ ಸಂಬಂಧ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶೆಡ್‌ನಲ್ಲೇ ಅಂಗನವಾಡಿ:ಯಾವುದೇ ಸೌಕರ್ಯವಿಲ್ಲದ ಶೆಡ್‌ನಲ್ಲಿ ಅಂಗನವಾಡಿ ನಡೆಸುತ್ತಿರುವ ಬಗ್ಗೆ ಉಪಮೇಯರ್ ಅಸಮಾಧಾನ ವ್ಯಕ್ತಪಡಿಸಿದರು. ‘ಅಂಗನವಾಡಿ ನಡೆಸಲು ಸುಸಜ್ಜಿತ ಕಟ್ಟಡವೇ ಇಲ್ಲ. ಶೀಟು ಹಾಕಲಾದ ಸಾಧಾರಣ ಶೆಡ್‌ನಲ್ಲಿ ಅಂಗನವಾಡಿ ಕಾರ್ಯ ನಿರ್ವಹಿಸುವಂತಾಗಿದೆ.’ ಎಂದು ಅಂಗನವಾಡಿ ಸಹಾಯಕಿಯರು ಹೇಳಿದಾಗ, ‘ಅಂಗನವಾಡಿಗೆ ಸೂಕ್ತ ಕಟ್ಟಡ ನಿರ್ಮಿಸುವಂತೆ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

ಈ ಪ್ರದೇಶದ ಬಹುತೇಕ ರಸ್ತೆಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡದಿರುವುದು, ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳಬೇಕು. ನಿಯಮಿತವಾಗಿ ಧೂಮೀಕರಣ ನಡೆಸಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಬಳಿಕ ರೋಷನ್‌ನಗರ, ದೊಡ್ಡಣ್ಣ ನಗರದಲ್ಲಿ ಶೇಕಡ 22.75ರ ಅನುದಾನದಡಿ ಮನೆಗಳನ್ನು ನಿರ್ಮಿಸುತ್ತಿರುವ ಕಾಮಗಾರಿ ಪರಿಶೀಲಿಸಿದ ಅವರು ಈ ಭಾಗದಲ್ಲಿ ಒಟ್ಟು 204 ಮನೆಗಳನ್ನು ನಿರ್ಮಿಸಲು ವಿತರಿಸಲಾಗುವುದು ಎಂದರು.

ಜನತೆಯಲ್ಲಿ ಹರ್ಷ:ಡಿ.ಜೆ.ಹಳ್ಳಿ ವಾರ್ಡ್ ಸದಸ್ಯ ಸಂಪತ್‌ರಾಜ್ ಅವರು ಡಿ.ಜೆ.ಹಳ್ಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸುವಂತೆ ಸಾಕಷ್ಟು ಬಾರಿ ಪಾಲಿಕೆ ಮಾಸಿಕ ಸಭೆಯಲ್ಲಿ ಒತ್ತಾಯಿಸಿದ್ದರು. ಉಪಮೇಯರ್ ಎನ್. ದಯಾನಂದ್ ಅವರು ಸೋಮವಾರ ಈ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದು, ಸ್ಥಳೀಯರಲ್ಲಿ ಹರ್ಷ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT