ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹನ್-ಖುರೇಷಿ ಪರಾಭವ

Last Updated 1 ಜೂನ್ 2011, 18:50 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿಯು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಯೇ ನಿರಾಸೆ ಹೊಂದಿದೆ.

ರೋಹನ್-ಐಸಾಮ್ ವಿರುದ್ಧ ಅಗ್ರಶ್ರೇಯಾಂಕದ ಬಾಬ್ ಹಾಗೂ ಮೈಕ್ ಬ್ರಿಯಾನ್ ಸಹೋದರರು ತಮ್ಮ ಖ್ಯಾತಿಗೆ ತಕ್ಕ ಆಟವನ್ನು ಆಡಿ ಸೆಮಿಫೈನಲ್‌ಗೆ ರಹದಾರಿ ಪಡೆದರು. ರೋಲಂಡ್ ಗ್ಯಾರೋಸ್ ಅಂಗಳದಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಬಾಬ್ ಮತ್ತು ಮೈಕ್ 6-7 (2-7), 6-3, 7-6 (7-3)ರಲ್ಲಿ ಭಾರತ-ಪಾಕ್ ಜೋಡಿಗೆ ಆಘಾತ ನೀಡಿದರು. ಐದನೇ ಶ್ರೇಯಾಂಕ ಹೊಂದಿರುವ ಬೋಪಣ್ಣ ಮತ್ತು ಐಸಾಮ್ ಪ್ರಬಲ ಪ್ರತಿರೋಧವೊಡ್ಡಿದರೂ, ಪಂದ್ಯದ ಮೇಲೆ ಹಿಡಿತ ಕಾಯ್ದುಕೊಳ್ಳುವಲ್ಲಿ ವಿಫಲರಾದರು.

ಫೈನಲ್‌ಗೆ ಕ್ಯಾಥರಿನಾ-ನೆನಾಡ್: ಅಚ್ಚರಿಗೆ ಅವಕಾಶ ನೀಡದ ಅಗ್ರ ಶ್ರೇಯಾಂಕದ ಸ್ಲೊವೇನಿಯಾದ ಕ್ಯಾಥರಿನಾ ಸ್ರೆಬೊತ್ನಿಕ್ ಮತ್ತು ಸರ್ಬಿಯಾದ ನೆನಾಡ್ ಜಿಮೊಂಜಿಕ್ ಜೋಡಿಯು 7-6 (7-4), 7-6 (7-5)ರಲ್ಲಿ ರಷ್ಯಾದ ನಾಡಿಯಾ ಪೆಟ್ರೋವಾ ಹಾಗೂ ಇಂಗ್ಲೆಂಡ್‌ನ ಜ್ಯಾಮಿ ಮರ‌್ರೆ ವಿರುದ್ಧ ಗೆದ್ದು ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ತಲುಪಿದೆ.

ಸೆಮಿಫೈನಲ್‌ಗೆ ಫೆಡರರ್: ವಿಶ್ವಾಸಪೂರ್ಣ ಆಟವಾಡಿದ ಸ್ವಿಟ್ಜರ್ಲೆಂಡ್ ಟೆನಿಸ್ ತಾರೆ ರೋಜರ್ ಫೆಡರರ್ ನಿರೀಕ್ಷೆಯಂತೆ ಕ್ವಾರ್ಟರ್ ಫೈನಲ್ ಅಡೆತಡೆಯನ್ನು ಕೂಡ ಯಶಸ್ವಿಯಾಗಿ ದಾಟಿದ್ದಾರೆ.

ಅನುಭವದ ಬಲದಿಂದ ಪುರುಷರ ಸಿಂಗಲ್ಸ್ ಎಂಟರ ಘಟ್ಟದಲ್ಲಿ ಗೆಲುವು ಸಾಧಿಸಿದ ಫೆಡರರ್ ಅವರು ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಫ್ರಾನ್ಸ್‌ನ ಮೊನ್‌ಫಿಲ್ಸ್ ಅಚ್ಚರಿಯ ಫಲಿತಾಂಶ ಹೊರಹೊಮ್ಮಿಸುವುದಕ್ಕೆ ಸ್ವಿಟ್ಜರ್ಲೆಂಡ್ ಆಟಗಾರ ಅವಕಾಶ ನೀಡಲಿಲ್ಲ.

ಮೂರನೇ ಸೆಟ್‌ನಲ್ಲಿ ಮಾತ್ರ ಸ್ವಲ್ಪ ಕಷ್ಟಪಟ್ಟರೂ ಫೆಡರರ್ ಪಂದ್ಯದ ಮೇಲಿನ ಬಿಗಿ ಹಿಡಿತವನ್ನು ಬಿಟ್ಟುಕೊಡಲಿಲ್ಲ. ಮೊದಲ ಸೆಟ್‌ನಿಂದಲೇ ಪ್ರಾಬಲ್ಯ ಸಾಧಿಸಿದ ಮೂರನೇ ಶ್ರೇಯಾಂಕದ ರೋಜರ್ 6-4, 6-3, 7-6 (7-3)ರಲ್ಲಿ ಮೊನ್‌ಫಿಲ್ಸ್ ಅವರನ್ನು ಪರಾಭವಗೊಳಿಸಿದರು.

ಬೆಲಾರೂಸ್‌ನ ಮ್ಯಾಕ್ಸ್ ಮಿರ್ನಿ ಮತ್ತು ಕೆನಡಾದ ಡೇನಿಯಲ್ ನೆಸ್ಟರ್ ಜೋಡಿಯು ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು. ಎರಡನೇ ಶ್ರೇಯಾಂಕ ಹೊಂದಿರುವ ಮಿರ್ನಿ- ನೆಸ್ಟರ್ 6-4, 6-2ರಲ್ಲಿ ಸ್ವೀಡನ್‌ನ ರಾಬರ್ಟ್ ಲಿಂಡ್‌ಸ್ಟೆಡ್ ಹಾಗೂ ರೊಮೇನಿಯಾದ ಹೊರಿಯಾ ಟೆಕಾವು ಎದುರು ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT