ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ, ಗೂಂಡಾಗಳ ಮೇಲೆ `ಕಣ್ಗಾವಲು'

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಕ್ಸಲರು, ರೌಡಿಗಳು, ಗೂಂಡಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು, ಸಮಾಜಘಾತುಕ ಶಕ್ತಿಗಳಿಂದ ಚುನಾವಣೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರದಂತೆ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಈ ಬಾರಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದು ಗೃಹ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆ ವಹಿಸಿದ್ದು, `ರೌಡಿ' ಪಟ್ಟಿಯಲ್ಲಿರುವ ಪ್ರಕರಣಗಳನ್ನು ಚುನಾವಣೆ ಮುಗಿಯುವವರೆಗೂ ಮುಕ್ತಾಯ ಗೊಳಿಸ ಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ಬೆನ್ನಿಗೇ, ಗೃಹ ಖಾತೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್ ಅವರು ಸುತ್ತೋಲೆ ಹೊರಡಿಸಿ, ಸುಸೂತ್ರವಾಗಿ ಚುನಾವಣೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಕ್ರಿಮಿನಲ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ಗೂಂಡಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು, ಸಮಾಜಘಾತುಕ ಶಕ್ತಿಗಳು ಹಾಗೂ ವೃತ್ತಿನಿರತ ಮಾಫಿಯಾ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ತಾಕೀತು: ನಕ್ಸಲ್‌ಪೀಡಿತ ಜಿಲ್ಲೆಗಳ ಸೂಕ್ಷ್ಮಪ್ರದೇಶಗಳಿಗೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸುವಂತೆ ಸರ್ಕಾರ ಪೊಲೀಸರಿಗೆ ಆದೇಶಿಸಿದೆ. ಗುಪ್ತದಳದ ಸಿಬ್ಬಂದಿ ಅಲ್ಲಿಯ ಜನರ ಹಾಗೂ ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ನಿಗಾ ವಹಿಸಬೇಕು. ಮತದಾರರಿಗೆ ಮತ ಚಲಾಯಿಸಲು ಅಡ್ಡಿಪಡಿಸದ ಹಾಗೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳು ಹಾಗೂ ಜನರ ಚಲನವಲನಗಳ ಮೇಲೆ ಕಣ್ಗಾವಲಿರಿಸಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧದ ಜಾಮೀನುರಹಿತ ವಾರೆಂಟ್‌ಗಳನ್ನು ಕೂಡಲೇ ಜಾರಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಚುನಾವಣಾ ಪ್ರಕ್ರಿಯೆಗೆ ಅಡಚಣೆ ಅಥವಾ ಯಾವುದೇ ರೀತಿಯ ತೊಂದರೆ ಉಂಟು ಮಾಡುವ ಸಾಧ್ಯತೆ ಇರುವ ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಕಾನೂನು ಪ್ರಕಾರ ಬಂಧಿಸಿ ಗಡಿಪಾರು ಮಾಡಬಹುದು. ಶಸ್ತ್ರಾಸ್ತ್ರಗಳ ಪರವಾನಗಿ ಹೊಂದಿರುವ ವ್ಯಕ್ತಿಗಳಿಗೆ ತಕ್ಷಣವೇ ಅವುಗಳನ್ನು ಆಯಾ ಪೊಲೀಸ್ ಠಾಣೆಗಳಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ವೀಕ್ಷಕರಿಗೂ ಭದ್ರತೆ: ಚುನಾವಣೆ ವೀಕ್ಷಕರ ಮೇಲೆ ಹಲ್ಲೆ ನಡೆಸುವ, ಅವರನ್ನು ಬೆದರಿಸುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತರಕ್ಷಣೆ ಒದಗಿಸಲು ಆದೇಶಿಸಲಾಗಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯವಾದ ನಂತರ ವೀಕ್ಷಕರು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಆಗ, ತಂಗುವ ಸ್ಥಳದಲ್ಲಿ ಅವರಿಗೆ ರಕ್ಷಣೆ ಒಗದಿಸುವುದರ ಜೊತೆಗೆ, ಒಬ್ಬೊಬ್ಬ ವೀಕ್ಷಕರಿಗೂ ಕನಿಷ್ಠ ಒಬ್ಬ ಅಂಗರಕ್ಷಕರನ್ನು ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.

ಚುನಾವಣೆ ಸಂದರ್ಭದಲ್ಲಿ ವಾಮಮಾರ್ಗದ ಮೂಲಕ ಕಳ್ಳಬಟ್ಟಿ, ಮದ್ಯ ಮಾರಾಟ ಆಗದಂತೆ ನೋಡಿಕೊಳ್ಳಬೇಕು. ಗಾಂಜಾ, ಮಾದಕ ವಸ್ತುಗಳ ಮಾರಾಟ, ಕಳ್ಳಸಾಗಣೆ ಮೇಲೆ ನಿಗಾ ವಹಿಸಿ, ಈ ರೀತಿಯ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾಹನಗಳ ಸಂಚಾರ ಹಾಗೂ ಜನರ ಚಲನವಲನಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಬೇಕು ಎಂದು ಆದೇಶಿಸಲಾಗಿದೆ.

ಸೂಕ್ಷ್ಮ- ಅತಿಸೂಕ್ಷ್ಮ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಕೂಡಲೇ ಗುರುತಿಸಿ, ಅವುಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಇಂತಹ ಕೇಂದ್ರಗಳಿಗೆ ಗೃಹರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡುವ ಬದಲು ಪೊಲೀಸ್ ಸಿಬ್ಬಂದಿಯಿಂದಲೇ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಸ್ಥಳೀಯ ವಾತಾವರಣ, ಹಿಂದಿನ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ಅಹಿತಕರ ಘಟನೆಗಳನ್ನು ಆಧರಿಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಿ ಆಯೋಗದ ಗಮನಕ್ಕೆ ತರಲಿದ್ದಾರೆ. ಆಯೋಗದ ಸೂಚನೆ ಅನ್ವಯ ಅಂತಹ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೇಂದ್ರ ಸ್ಥಾಪಿಸಿ, ಅದರ ದೂರವಾಣಿ ಸಂಖ್ಯೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರು, ಹುದ್ದೆ, ದೂರವಾಣಿ ಸಂಖ್ಯೆಯನ್ನು ಚುನಾವಣಾ ಆಯೋಗಕ್ಕೆ ಮತ್ತು ಒಳಾಡಳಿತ ಇಲಾಖೆಗೆ ಕಳುಹಿಸಬೇಕು.

ದೂರು ದಾಖಲಾದ 24 ಗಂಟೆಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ದಾಖಲಾದ ಅರ್ಜಿಗಳು ಹಾಗೂ ಇತ್ಯರ್ಥವಾದ ಅರ್ಜಿಗಳ ಅಂಕಿ - ಸಂಖ್ಯೆಗಳನ್ನು ವಾರದ ಕೊನೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕು. ದೂರು ಆಧರಿಸಿ ಕ್ರಮ ಕೈಗೊಳ್ಳದೆ ಇದ್ದರೆ ಆಯೋಗವು ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT