ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಸೈಯದ್‌ಗೆ ಪೊಲೀಸ್ ಗುಂಡೇಟು

Last Updated 25 ನವೆಂಬರ್ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು:  ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಸೈಯದ್ ರಾಹಿಲ್ (27) ಮೇಲೆ ಇನ್‌ಸ್ಪೆಕ್ಟರ್ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಬಾಣಸವಾಡಿಯ ನೆಹರು ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ರಾಹಿಲ್ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಸುಲಿಗೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಆತನನ್ನು ಬಂಧಿಸಲು ತಂಡ ರಚಿಸಲಾಗಿತ್ತು. ನೆಹರು ರಸ್ತೆಯ ಶಾಲೆಯೊಂದರ ಬಳಿ ಆರೋಪಿ ಇರುವ ಬಗ್ಗೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮಾಹಿತಿ ಸಿಕ್ಕಿತು. ಇನ್‌ಸ್ಪೆಕ್ಟರ್ ರಂಗಪ್ಪ ಅವರ ತಂಡ ಆರೋಪಿಯನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿತು. ಈ ಸಂದರ್ಭದಲ್ಲಿ ಆತ ಚಾಕುವಿನಿಂದ ಕಾನ್‌ಸ್ಟೇಬಲ್ ಬಾಲಾಜಿ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.  

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಂಗಪ್ಪ ಅವರು ರಿವಾಲ್ವರ್‌ನಿಂದ ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದರು. ಎರಡೂ ಗುಂಡುಗಳು ರಾಹಿಲ್‌ನ ಮೊಣಕಾಲಿನ ಬಳಿ ಹೊಕ್ಕವು. ಕುಸಿದು ಬಿದ್ದ ಆರೋಪಿಯನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಾಜಿ ಅವರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ರಾಹಿಲ್‌ನ ಪೋಷಕರು ದುಬೈನಲ್ಲಿದ್ದಾರೆ. ಅಲೆಮಾರಿಯಾಗಿದ್ದ ಆತ ಜನರನ್ನು ಸುಲಿಗೆ ಮಾಡುತ್ತಿದ್ದ. ಬಿಎಂಟಿಸಿ ಬಸ್ ಚಾಲಕ ಮತ್ತು ಸಂಚಾರ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಎರಡು ಪ್ರಕರಣ, ಮೂರು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಆತನ ಮೇಲೆ ಒಟ್ಟು 22 ಪ್ರಕರಣಗಳಿವೆ. ಐದು ಪ್ರಕರಣಗಳಲ್ಲಿ ಆತ ಖುಲಾಸೆಯಾಗಿದ್ದಾನೆ. ಉಳಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ~ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಆತ ಬಾಣಸವಾಡಿಯಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಬೆದರಿಸಿ 25 ಸಾವಿರ ರೂಪಾಯಿ ದರೋಡೆ ಮಾಡಿದ್ದ. ಈ ವಿಷಯ ಗೊತ್ತಾದ ನಂತರ ಸಿಬ್ಬಂದಿ ಆತನ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು~ ಎಂದು ಅವರು ಮಾಹಿತಿ ನೀಡಿದರು. ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT