ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಗಿಂಗ್ ರಾಗ!

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅದು 2010ರ ನವೆಂಬರ್ 17ರ ರಾತ್ರಿ. ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ನ್ಯಾಷನಲ್ ಪವರ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿನಿಯೊಬ್ಬಳು ನರಗಳನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದಳು. ಕಾರಣ ರ್‍ಯಾಗಿಂಗ್ ಹೆಸರಿನಲ್ಲಿ ತನ್ನ ಕಾಲೇಜಿನ ಮೂವರು ಹಿರಿಯ ವಿದ್ಯಾರ್ಥಿನಿಯರು ಪಡೆದ ವಿಕೃತ ಸಂತೋಷ.

ನವೆಂಬರ್ 15ರ ರಾತ್ರಿ ಬಲಿಪಶುವಾದ ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ನ ಖಾಲಿ ಕೋಣೆಯೊಂದಕ್ಕೆ ಕರೆಯಿಸಿದ್ದ ಹಿರಿಯ ವಿದಾರ್ಥಿಗಳು ಕಠಿಣ ಪ್ರಶ್ನೆಗಳನ್ನು ಕೇಳಿದ್ದರಲ್ಲದೆ ಮನಬಂದಂತೆ ಥಳಿಸಿದ್ದರು. ಅಷ್ಟು ಸಾಲದೆಂಬಂತೆ ಆಕೆಯನ್ನು ಬೆತ್ತಲೆ ಮಾಡಿ ತಮ್ಮ ಮೊಬೈಲ್‌ಗಳಲ್ಲಿ ಫೋಟೊಗಳನ್ನು ತೆಗೆದರು.

ಇಷ್ಟಕ್ಕೇ ಕೊನೆಗೊಳ್ಳದ ಅವರ ವಿಕೃತಿ ಆ ಫೋಟೊಗಳನ್ನು ಇತರ ಮೊಬೈಲ್‌ಗಳಿಗೆ ಮತ್ತು ಅಂತರ್ಜಾಲಕ್ಕೆ ರವಾನಿಸುವ ಮಟ್ಟಕ್ಕೆ ಮುಂದುವರಿಯಿತು. ಇದರಿಂದ ತೀವ್ರ ಅಪಮಾನಿತಳಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು.

ಇದು ಇವಳೊಬ್ಬಳ ನೋವಲ್ಲ. ಇಂಥ ಸಾವಿರಾರು ರ್‍ಯಾಗಿಂಗ್ ಪ್ರಕರಣಗಳು ನಮ್ಮ ಮುಂದಿವೆ. ಕನಸು ಹೊತ್ತು ಕಾಲೇಜಿಗೆ ಕಾಲಿಟ್ಟ ಸಾಕಷ್ಟು ವಿದ್ಯಾರ್ಥಿಗಳು ಈ ಕಹಿ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ಹಿಂಸಾಚಾರದಿಂದ ವಿದ್ಯಾರ್ಥಿಗಳು ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಮಾನಸಿಕವಾಗಿ ಜರ್ಜರಿತರಾದವರು ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.

ಸರ್ಕಾರ ರ್‍ಯಾಗಿಂಗ್ ಒಂದು ಅಪರಾಧ ಎಂದು ಘೋಷಿಸಿ ದಶಕಗಳೇ ಕಳೆದಿವೆ. 2001ರಲ್ಲಿ ಸುಪ್ರೀಂಕೋರ್ಟ್ ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ನಿಲಯಗಳಲ್ಲಿ ರ್‍ಯಾಗಿಂಗ್ ನಿಷೇಧಿಸಿದೆ.

ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಎಚ್ಚರಿಸಿದೆ. ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ತಾಕೀತು ಕೂಡ ಮಾಡಿದೆ. ಆದರೂ ನಿಲ್ಲದ ರ್‍ಯಾಗಿಂಗ್ ಕೂಪವನ್ನು ಎಚ್ಚರಿಸಲು ಇನ್ನೊಂದು `ರ್‍ಯಾಗಿಂಗ್ ತಡೆ ದಿನ~ ಬಂದಿದೆ.

ರ್‍ಯಾಗಿಂಗ್ ಇನ್ನೂ ಇದೆ
ಇತ್ತೀಚಿನ ದಿನಗಳಲ್ಲಿ ರ್‍ಯಾಗಿಂಗ್ ಪ್ರಕರಣಗಳು ಮೊದಲಿನಷ್ಟು ಕಂಡು ಬರುತ್ತಿಲ್ಲ. ಇದೊಂದು ಸಾಮಾಜಿಕ ಪಿಡುಗು ಎಂಬ ಭಾವನೆ ಈಗ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಇದರ ನಿರ್ಮೂಲನೆಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಇದು ಸಮಾಧಾನಕರ ವಿಚಾರ. ಹಾಗಂತ ಇದು ಪೂರ್ತಿ ನಿಂತಿದೆ ಎಂದಲ್ಲ. ಈಗಲೂ ಅಲ್ಲಲ್ಲಿ ರ್‍ಯಾಗಿಂಗ್ ಭೂತ ಉಳಿದಿದೆ.

ವರದಿಯಾಗುತ್ತಿರುವ ಪ್ರಕರಣಗಳು ಕೆಲವು. ಎಷ್ಟೋ ಪ್ರಕರಣಗಳು ಬೆಳಕಿಗೇ ಬರುತ್ತಿಲ್ಲ. ತಮ್ಮ ವ್ಯಕ್ತಿತ್ವಕ್ಕೆ ಇಲ್ಲವೇ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಭಾವನೆಯಿಂದ ಕಾಲೇಜುಗಳ ಆವರಣದಲ್ಲಿ ನಡೆಯುತ್ತಿರುವ ರ‌್ಯಾಗಿಂಗನ್ನು ಕಾಲೇಜು ಆಡಳಿತ ಮಂಡಳಿ ಹೊರಗಿನವರಿಗೆ ಗೊತ್ತಾಗದಂತೆ ತಡೆಯುತ್ತದೆ. ರ್‍ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹೆದರುವುದಲ್ಲದೆ ಪ್ರಾಣ ಉಳಿಸಿಕೊಳ್ಳಲು ಮೌನವಾಗಿಯೇ ಇದ್ದು ನೋವುಣ್ಣುತ್ತಾರೆ.

ರ್‍ಯಾಗಿಂಗ್‌ನಿಂದ ನೊಂದ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ತಮಗಾದ ಅವಮಾನವನ್ನು ಬಹಿರಂಗಪಡಿಸಲು ಮನಸ್ಸಿಲ್ಲದೆ ಕಾಲೇಜು ಬದಲಾಯಿಸುವುದು ಇಲ್ಲವೇ ಅರ್ಧಕ್ಕೇ ಓದನ್ನು ಮೊಟಕುಗೊಳಿಸುವ ನಿರ್ಧಾರಕ್ಕೆ ಬರುತ್ತಿದ್ದಾರೆ.
 
ಅನೇಕ ಸಂದರ್ಭಗಳಲ್ಲಿ ರ್‍ಯಾಗಿಂಗ್ ನಡೆದಿದ್ದರೂ ಅದನ್ನು ಸಮರ್ಥಿಸಲು ಸಾಕ್ಷ್ಯಾಧಾರಗಳು ಸಿಗದೇ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಜೀವದ ಭಯ, ಸಿಗದ ಸಾಕ್ಷ್ಯ ಹಾಗೂ ಈ ಎಲ್ಲಾ ಅಂಶಗಳೂ ರ್‍ಯಾಗಿಂಗ್ ತಡೆಗೆ ಅಡ್ಡಿಯಾಗಿವೆ.

`ದೂರು ನೀಡಿ~
ರ್‍ಯಾಗಿಂಗ್ ಅಪರಾಧ. ರ್‍ಯಾಗಿಂಗ್ ದೂರುಗಳು ಬಂದ ಕೂಡಲೇ ಕಾನೂನಿನಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ರ್‍ಯಾಗಿಂಗ್ ಯಾವ ಸ್ವರೂಪದ್ದು ಎಂಬುದನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಮೊಕದ್ದಮೆ ಹೂಡಲಾಗುತ್ತದೆ.

ಆರೋಪಿಗಳಿಂದ ಪ್ರಾಣ ಬೆದರಿಕೆ ಬಂದಲ್ಲಿ ನಿರ್ಭಯವಾಗಿ ಪೊಲೀಸ್ ಠಾಣೆಗೆ ತಿಳಿಸಬಹುದು. ದೂರುದಾರರಿಗೆ ಕಾನೂನಿನಡಿಯಲ್ಲಿ ರಕ್ಷಣೆ ನೀಡುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
-ಟಿ. ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT