ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‌್ಯಾಂಪ್ ಮೇಲೆ ಇಳಕಲ್ ಚೌಕುಳಿ

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೆಸರುಘಟ್ಟದ ಗುಡ್ಡದ ಬದಿಯಲ್ಲೊಂದು ಫೋಟೊಶೂಟ್. ರೂಪದರ್ಶಿ ತೊಟ್ಟಿದ್ದ ಉಡುಪಿನ ನೆರಿಗೆ ಸರಿಯಿದೆಯೇ, ಕುರ್ತಾದ ಟಕ್ ನೀಟಾಗಿದೆಯೇ ಎಂದೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಿನ್ಯಾಸಕಿ.

ಫ್ಯಾಷನ್ ಛಾಯಾಗ್ರಾಹಕ ಲಕ್ಕಿ ಮಲ್ಹೋತ್ರಾಗೆ ನಿರ್ದೇಶನ ನೀಡುತ್ತ, ಅವರು ತೆಗೆದ ಚಿತ್ರಗಳನ್ನೊಮ್ಮೆ ನೋಡಿ ತಲೆಯಾಡಿಸುತ್ತಿದ್ದರು. ಆ ಗಡಿಬಿಡಿಯಲ್ಲೇ `ಮೆಟ್ರೊ~ ಜತೆ ಮಾತಿಗಿಳಿದರು.

ಆ ವಸ್ತ್ರ ವಿನ್ಯಾಸಕಿ ದೀಪಿಕಾ ಗೋವಿಂದ್. ಅಂದಹಾಗೆ ಅಲ್ಲಿ ನಡೆಯುತ್ತಿದ್ದುದು `ಲ್ಯಾಕ್ಮೆ ಫ್ಯಾಷನ್ ವೀಕ್~ಗೆ ಪೂರ್ವಭಾವಿಯಾದ ಫೋಟೊಶೂಟ್.

ಮಾರ್ಚ್ 2ರಿಂದ 8ರವರೆಗೆ ಮುಂಬೈನಲ್ಲಿ ಗ್ಲಾಮರ್‌ಭರಿತ `ಲ್ಯಾಕ್ಮೆ ಫ್ಯಾಷನ್ ವೀಕ್~. ಮಾರ್ಚ್ 4ರಂದು ದೀಪಿಕಾ ವಿನ್ಯಾಸಗಳ ಪ್ರದರ್ಶನ. ಫ್ಯಾಷನ್ ರಂಗದ ದಿಗ್ಗಜರು, ವಸ್ತ್ರೋದ್ಯಮದ ಘಟಾನುಘಟಿಗಳ ಮುಂದೆ ದೀಪಿಕಾ ಈ ಬಾರಿ ಕರ್ನಾಟಕದ ಇಳಕಲ್ ಸೀರೆಯ ಮಹತ್ವ ಸಾರುವ ವಿನ್ಯಾಸಗಳನ್ನು ಪ್ರಸ್ತುತಪಡಿಸಲಿದ್ದಾರೆ.

`ಲ್ಯಾಕ್ಮೆ ಫ್ಯಾಷನ್ ವೀಕ್~ನ ಮೊದಲ ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದರೂ ಕೌಟುಂಬಿಕ ಕಾರಣಗಳಿಂದ ಇತ್ತೀಚಿನ ಐದಾರು ವರ್ಷಗಳಲ್ಲಿ ಯಾವುದೇ `ಫ್ಯಾಷನ್ ವೀಕ್~ಗಳಿಗೆ ಹೋಗುತ್ತಿರಲಿಲ್ಲವಂತೆ ದೀಪಿಕಾ.

`ಫ್ಯಾಷನ್ ವೀಕ್‌ಗಳೆಂದರೆ ನಾನು ಸ್ವಲ್ಪ ದೂರ. ಗ್ಲಾಮರ್‌ಗಿಂತ ಹೆಚ್ಚಿನದು ಅಲ್ಲಿ ಸಾಧ್ಯವಾಗುವುದಿಲ್ಲ ಎನಿಸುತ್ತಿತ್ತು. ಈ ಬಾರಿ ಲ್ಯಾಕ್ಮೆ ಸಪ್ತಾಹದಲ್ಲಿ ದೇಸಿ ವಸ್ತ್ರಗಳು, ದೇಸಿ ವಿನ್ಯಾಸ, ಕಲೆಗಳಿಗಾಗಿ ದಿನವೊಂದನ್ನು ಮೀಸಲಿಟ್ಟಿದ್ದಾರೆ. ಅಲ್ಲಿ ಫ್ಯಾಷನ್ ರಂಗಕ್ಕೆ ಹೇಳಲು ವಿಷಯವಿದೆ ಎಂದು ಅನಿಸಿತು. ಹಾಗಾಗಿ ಭಾಗಿಯಾಗುತ್ತಿರುವೆ~ ಎಂದು ಮನದ ಮಾತು ಬಿಚ್ಚಿಟ್ಟರು ದೀಪಿಕಾ.

ಮೂಲತಃ ತಮಿಳುನಾಡಿನವರಾದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಕಾರಣ ನಾನು ಅಪ್ಪಟ ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ದೀಪಿಕಾ. ಇಲ್ಲಿನ ಜನ, ಪರಂಪರೆ ಎಲ್ಲವನ್ನೂ ಪ್ರೀತಿಸುತ್ತೇನೆ ಎನ್ನುವ ಅವರ ಹಲವು ವಿನ್ಯಾಸಗಳಿಗೆ ಹಂಪಿಯ ಸ್ಮಾರಕಗಳು ಸ್ಫೂರ್ತಿಯಂತೆ.  ಹಂಪಿಯಿಂದ ಅನತಿ ದೂರದಲ್ಲಿರುವ ಇಳಕಲ್ ಸಹ ಇದೇ ಕಾರಣಕ್ಕೆ ಸೆಳೆದಿದೆ. ಅಲ್ಲಿನ ಪಾರಂಪರಿಕ ವಿನ್ಯಾಸಗಳಿಗೆ ಮರುಜೀವ ನೀಡಬೇಕು ಎಂದೇ ಈ ಕಸರತ್ತು ಎನ್ನುತ್ತಾರೆ ಆಕೆ.

`ದಿ ವುಮೆನ್ ಇನ್ ಬ್ಲೂ ಚೆಕ್ಸ್: ಕಾವೇರಿಸ್ ಟೇಲ್~ ಎಂಬ ರೂಪಕದ ಮೂಲಕ ದೀಪಿಕಾ ಪಾರಂಪರಿಕ ಚೌಕುಳಿ ವಿನ್ಯಾಸಕ್ಕೆ ಫ್ಯಾಷನ್ ರಂಗು ತುಂಬಲಿದ್ದಾರೆ. ಕಾವೇರಿಯೆಂಬ ಹಳ್ಳಿ ಹುಡುಗಿ ಪಟ್ಟಣಕ್ಕೆ ಬಂದು ತನ್ನ ಹಳ್ಳಿಯ ವಿಶಿಷ್ಟ ನೇಕಾರಿಕೆ ವಿನ್ಯಾಸವನ್ನು ಪರಿಚಯಿಸುತ್ತಾಳೆ. ಅವಳ ಮತ್ತು ಆ ವಿನ್ಯಾಸದ ಉಳಿವಿಗೆ ಹೋರಾಡುತ್ತಾಳೆ. 

 `ಇಳಕಲ್‌ನ ಕೆಂಪು, ನೀಲಿ, ಹಸಿರು ಚೌಕುಳಿ ವಿನ್ಯಾಸಗಳಲ್ಲಿ ಅನನ್ಯ ಆಕರ್ಷಣೆಯಿದೆ. ಗಾಂಧೀಜಿ ಸಬರಮತಿಯಲ್ಲಿ ಸ್ವದೇಶಿ ವಸ್ತ್ರ ಆಂದೋಲನ ಆರಂಭಿಸುವಾಗ ಇಲ್ಲಿಯೂ ಆ ಚಳವಳಿಯ ಕಾವು ಏರಿತ್ತು. ಇಳಕಲ್ ಪಟ್ಟಣದ ಬಳಿ ಗಾಂಧಿ ಆಶ್ರಮವೊಂದು ಇದೆ ಗೊತ್ತಾ. ಅಪ್ಪಟ ಹತ್ತಿ ಸೀರೆಗಳಿಗೆ ಮಾರುಕಟ್ಟೆ ಇಲ್ಲದ ಕಾರಣ ಅಲ್ಲಿಯ ನೇಕಾರರು ಈಗ ಸಿಂಥೆಟಿಕ್ ಸೀರೆ ತಯಾರಿಸುತ್ತಿದ್ದಾರೆ, ಮಗ್ಗಗಳನ್ನು ಮುಚ್ಚುತ್ತಿದ್ದಾರೆ. ಮಾರುಕಟ್ಟೆಯಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮ ಭವ್ಯ ಪರಂಪರೆ ಕಳೆದುಕೊಳ್ಳಬೇಕೆ ?~

`ಇಳಕಲ್ ಒಂದೇ ಅಲ್ಲ. ನಮ್ಮ ಹತ್ತಾರು ದೇಸಿ ವಿನ್ಯಾಸಗಳು ಸಾಂಪ್ರದಾಯಿಕ ಎಂಬ ಹಣೆಪಟ್ಟಿ ಹಚ್ಚಿಕೊಂಡು ಮರೆಯಾಗುತ್ತಿವೆ. ಅವಕ್ಕೆಲ್ಲ ಒಂದಿಷ್ಟು ಹೊಸತನ, ಗ್ಲಾಮರ್ ಟಚ್ ಕೊಟ್ರೆ ಸಾಕು, ಅದ್ಭುತವಾಗಿ ಕಾಣ್ತವೆ. ಇದೇ ಶೋನಲ್ಲಿ ನಾನು ಮಂಗಲಗಿರಿ, ಕಾಂಜೀವರಂ ಇತ್ಯಾದಿ ದಕ್ಷಿಣ ಭಾರತದ ಇತರ ಚೌಕುಳಿ ವಿನ್ಯಾಸಗಳನ್ನೂ ರ‌್ಯಾಂಪ್ ಮೇಲೆ ತರುತ್ತಿದ್ದೇನೆ~ ಎನ್ನುತ್ತ ಮಾತು ಮುಗಿಸಿದರು ದೀಪಿಕಾ.

ರೂಪದರ್ಶಿ: ಅಪೂರ್ವ ವಿಶ್ವನಾಥನ್, ಮೇಕಪ್: ಸಬ್ರೀನಾ ಸುಹೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT