ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‌್ಯಾನ್ಸಮ್ ವೇರ್:ಕಂಪ್ಯೂಟರ್ ಹುಷಾರ್

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಶಕಗಳ ಹಿಂದೆ ಅಪಹರಣಕಾರರು ಹಣ ಗಳಿಸಲು ಪತ್ರಿಕೆಗಳಿಂದ ಕತ್ತರಿಸಿ ತೆಗೆದ ಅಕ್ಷರಗಳನ್ನು ಅಂಟಿಸಿ `ರ‌್ಯಾನ್ಸಮ್' ಬೇಡಿಕೆ ರವಾನಿಸುತ್ತಿದ್ದರು. ಈಗಿನ `ಆಧುನಿಕ' ದಿನಗಳಲ್ಲಿ ರ‌್ಯಾನ್ಸಮ್ ಬೇಡಿಕೆ ಕಂಪ್ಯೂಟರ್ ಪರದೆ ಮೇಲೆ ಬಹಳ ಸುಲಭವಾಗಿ ಗೋಚರಿಸುತ್ತದೆ. ಜತೆಗೆ ಕಂಪ್ಯೂಟರ್ ಅಗೋಚರ್ ಹ್ಯಾಕರ್ಸ್‌ಗೆ ಒತ್ತೆ ಆಗಿರುತ್ತದೆ.

ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆಯೇ ಎಚ್ಚರಿಕೆ ಸಂದೇಶಗಳು ಪರದೆ ಮೇಲೆ ಮೂಡಿ `ಇನ್ನು ಮುಂದೆ ನಿಮ್ಮ ಕಂಪ್ಯೂಟರ್‌ಗಾಗಲಿ ಅಥವಾ ಅದರಲ್ಲಿನ ಕಡತಗಳಿಗಾಗಲಿ ಪ್ರವೇಶ ಇರುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಾರೆ. ಇಂಥ ಸಂದೇಶಗಳು ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್‌ಡಿಐ)ನಿಂದ ಲೋ, `ಟ್ವೆಂಟಿ ಲಾ ಎನ್ಫೋರ್ಸ್‌ಮೆಂಟ್ ಎಜೆನ್ಸಿ'ಯಿಂದಲೋ ಬಂದಿರುವಂತೆ ತೋರುತ್ತವೆ. ಸಂದೇಶ ವೀಕ್ಷಿಸಲು ಕ್ಲಿಕ್ ಮಾಡಿದರೆ ಕಥೆ ಮುಗಿಯಿತು, ಕಂಪ್ಯೂಟರ್ ಲಾಕ್ ಆಗುತ್ತದೆ. ಮತ್ತೆ ಚಾಲನೆಗೊಳಿಸಬೇಕೆಂದರೆ ಬಳಕೆದಾರರಿಗೆ ಇರುವ  ಮಾರ್ಗವೆಂದರೆ `ದಂಡ ಪಾವತಿ'!

ಪಾಶ್ಚಿಮಾತ್ಯ ದೇಶಗಳ ಕಂಪ್ಯೂಟರ್ ಸುರಕ್ಷತೆ ತಜ್ಞರ ಪ್ರಕಾರ ಇಂಥ ಅಗೋಚರ `ಹ್ಯಾಕರ್ಸ್'ಗಳು ವರ್ಷದಲ್ಲಿ ಏನಿಲ್ಲವೆಂದರೂ 50 ಲಕ್ಷ ಡಾಲರ್(್ಙ 25-30 ಕೋಟಿ) `ರ‌್ಯಾನ್ಸಮ್' ಗಳಿಸುತ್ತಾರೆ.ಯೂರೋಪ್ ಖಂಡದ ಪೂರ್ವ ಭಾಗದ ದೇಶಗಳ ಕಂಪ್ಯೂಟರ್ ಬಳಕೆದಾರರಿಗೆ 2009ರ ದಿನಗಳು ಶಾಪದಂತಿದ್ದವು. ಕಾರಣ ಆಗ ಅಂತರ್ಜಾಲ ಸಂಪರ್ಕದ ಎಲ್ಲ ಕಂಪ್ಯೂಟರ್‌ಗಳಿಗೂ ಹ್ಯಾಕರ್ಸ್‌ಗಳ ದಾಳಿ ಹೆಚ್ಚಿತ್ತು. ಮೂರು ವರ್ಷಗಳ ನಂತರ, ಅಂದರೆ ಈಗ ದುಷ್ಕರ್ಮಿಗಳು ಪಶ್ಚಿಮದತ್ತ ಮುಖಮಾಡಿದ್ದಾರೆ.

ಸದ್ಯ ಯೂರೊಪಿನಾದ್ಯಂತ 16 ಸುಸಜ್ಜಿತ ದುಷ್ಕರ್ಮಿಗಳ ಗುಂಪು, ಹೆಚ್ಚು ಜಾಗ್ರತೆ ವಹಿಸದ ಕಂಪ್ಯೂಟರ್ ಬಳಕೆದಾರರಿಂದ ಲಕ್ಷಾಂತರ ಹಣ ಸುಲಿಯುತ್ತಿದೆ. ಇದಕ್ಕಾಗಿ `ರ‌್ಯಾನ್ಸಮ್ ವೇರ್' (ಅಪಹರಣಕ್ಕೆ ಒಳಗಾದ ವ್ಯಕ್ತಿಯ ಬಿಡುಗಡೆಗೆ ನೀಡಬೇಕಾದ ಹಣಕ್ಕೆ ರ‌್ಯಾನ್ಸಮ್ ಎನ್ನಲಾಗುತ್ತದೆ) ಎಂಬ ವೈರಸ್ ಬಳಸಿಕೊಳ್ಳುತ್ತಿದೆ.

ಆನ್‌ಲೈನ್ ಸುಲಿಗೆ ಸಾಧನವಾದ `ರ‌್ಯಾನ್ಸಮ್ ವೇರ್', ಸುಲಭಕ್ಕೆ ನಿಲುಕುವ ಕಂಪ್ಯೂಟರ್‌ಗಳನ್ನು ಲಾಕ್ ಮಾಡುವ ವೈರಸ್ ಆಗಿದೆ. ಹೀಗೆ ಸ್ಥಗಿತವಾದ ಕಂಪ್ಯೂಟರ್‌ಗಳನ್ನು ಮತ್ತೆ ಅನ್‌ಲಾಕ್ ಮಾಡಲು ಹ್ಯಾಕರ್ಸ್‌ಗಳು ಆನ್‌ಲೈನ್‌ನಲ್ಲಿಯೇ ಮುಂಗಡ ಹಣದ ಬೇಡಿಕೆ ಇಡುತ್ತಾರೆ. ಹಣ ಪಾವತಿಸಿದರೂ ಅನ್‌ಲಾಕ್ ಮಾಡದೇ ವಂಚಿಸುತ್ತಾರೆ. ಕಂಪ್ಯೂಟರ್ ಸುರಕ್ಷತಾ ವ್ಯವಸ್ಥೆಯ ಸಂಶೋಧಕರ ಪ್ರಕಾರ, ಕಂಪ್ಯೂಟರ್ ಮಾಲೀಕರಲ್ಲಿ ಶೇ 2.9ರಷ್ಟು ಮಂದಿ ಹಣ ಪಾವತಿಸಿಯೂ ಮೋಸ ಹೋಗುತ್ತಾರೆ. ಕೆಲವು ದೇಶಗಳಲ್ಲಂತೂ ಇದರ ಪ್ರಮಾಣ ಶೇ 20ರಷ್ಟಿದೆ. ಹಾಗಾಗಿ ಕಂಪ್ಯೂಟರ್ ವೈರಸ್ ತೆಗೆಸಲು ಪರಿಚಯದ ಸ್ಥಳೀಯ ತಂತ್ರಜ್ಞರನ್ನೇ ಅವಲಂಬಿಸುವುದು ಒಳಿತು.

ಕಂಪ್ಯೂಟರ್‌ನಿಂದ ವೈರಸ್ ತೆಗೆಯುವ ಕಟ್ಟಕಡೆಯ ಉಪಾಯವೆಂದರೆ `ಫಾರ್ಮ್ಯೋಟ್'. ಆಗ ಕಂಪ್ಯೂಟರ್‌ನ ಚಾಲನೆ ಸಾಧ್ಯವಾದರೂ ಅದರಲ್ಲಿದ್ದ ಅಮೂಲ್ಯ ಕಡತ ಮತ್ತು ದತ್ತಾಂಶಗಳನ್ನು(ಡೇಟಾ) ಕಳೆದುಕೊಳ್ಳಬೇಕಾಗುತ್ತದೆ. ಹೊಸದಾಗಿ ಆಪರೇಟಿಂಗ್ ಸಿಸ್ಟೆಂ ಸಹ ಅಳವಡಿಸಬೇಕಾಗುತ್ತದೆ. ಹಣ ವೆಚ್ಚ ಅನಿವಾರ್ಯ ಕರ್ಮ.

ಹ್ಯಾಕರ್ಸ್‌ಗಳು ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಬೆದರಿಕೆ ವಿಧಾನ ಬಳಸಲಾರಂಭಿಸಿದ್ದಾರೆ. `ರ‌್ಯಾನ್ಸಮ್ ವೇರ್'ನಿಂದ ಲಾಕ್ ಆದ ಕಂಪ್ಯೂಟರ್‌ನಲ್ಲಿ ಅಶ್ಲೀಲ ಚಿತ್ರಗಳು ದಿಢೀರ್ ಕಾಣಿಸಿಕೊಳ್ಳುವಂತೆ ಮಾಡುತ್ತಾರೆ. ಆಗ ಸಭ್ಯ ಬಳಕೆದಾರ ಕಂಪ್ಯೂಟರ್ ಆನ್ ಮಾಡಲೇ ಹೆದರುವಂತಾಗುತ್ತದೆ. ಇಂಥ ಸಂದರ್ಭಗಳಲ್ಲಿ ಹ್ಯಾಕರ್ಸ್, ಅಶ್ಲೀಲ ಚಿತ್ರ ನಿವಾರಣೆಗೆ 400 ಡಾಲರ್(ರೂ. 25000)ವರೆಗೂ `ರ‌್ಯಾನ್ಸಮ್'ಗೆ ಒತ್ತಾಯಿಸಿದ ಉದಾಹರಣೆಗಳೂ ಇವೆ. ಆದರೆ, ಇಷ್ಟೇ ಹಣಕ್ಕೆ ಹೊಸ ಕಂಪ್ಯೂಟರನ್ನೇ ಈಗ ಖರೀದಿಸಬಹುದಾಗಿದೆ!

ಈ ಹ್ಯಾಕರ್ಸ್‌ಗಳ ಇಂಟರ್‌ನೆಟ್ ವಿಳಾಸ ಪತ್ತೆ ಹಚ್ಚಿದರೂ ಸೆರೆ ಹಿಡಿಯುವುದು ಕಷ್ಟ. ಬಂಧಿಸಿದರೂ ಶಿಕ್ಷೆಗೊಳಪಡಿಸುವುದು ಸುಲಭದ ಕೆಲಸವಲ್ಲ. ಕಾರಣ ಇವರು ಸಾಕ್ಷ್ಯನಾಶದಲ್ಲಿಯೂ ನಿಪುಣರು ಎಂದಿದ್ದಾರೆ ಸೆಮ್ಯೋಂಟೆಕ್ ಸಂಶೋಧಕರು. ಹ್ಯಾಕರ್‌ಗಳ ವಂಚನೆಯ ಭಿನ್ನ ಶೈಲಿಗಳನ್ನು ತಿಳಿಯಲು ಮುಂದಾದ ಫ್ರಾನ್ಸ್‌ನ ಕಂಪ್ಯೂಟರ್ ಸೆಕ್ಯುರಿಟಿ ಸಂಶೋಧಕ ಚಾರ್ಲಿ ಹುರೆಲ್, ಸ್ವತಃ ಕೆಲವು ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದರು. ಆಗ ತಿಳಿದುಬಂದಿದ್ದು, `ಅಶ್ಲೀಲ ವೆಬ್‌ಸೈಟ್‌ಗಳ ಮೂಲಕ ಹ್ಯಾಕ್ ಮಾಡುವುದು ಸುಲಭ. ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಬಳಕೆದಾರರು ಮುಜುಗರದಿಂದ ಹ್ಯಾಕರ್ಸ್‌ಗಳು ಕೇಳಿದಷ್ಟು ಹಣ ಕೊಟ್ಟು ಕೈತೊಳೆದು ಕೊಳ್ಳಲು ಸಿದ್ಧರಿರುತ್ತಾರೆ' ಎನ್ನುತ್ತಾರೆ ಚಾರ್ಲಿ.

`ಗೋ ಡ್ಯಾಡಿ' ಎಂಬ ನಕಲಿ ವೆಬ್‌ಸೈಟ್ ಮೂಲಕವೂ `ರ‌್ಯಾನ್ಸಮ್ ವೇರ್' ಬರುತ್ತಿವೆ. ಈ ಸಂಸ್ಥೆ 5 ಕೋಟಿ ಡೊಮೈನ್ ನೇಮ್ಸ ನಿರ್ವಹಿಸುತ್ತಿದೆ. ಅದರ ಸರ್ವರ್‌ನಲ್ಲಿಯೇ 50 ಲಕ್ಷ ವೆಬ್‌ಸೈಟ್‌ಗಳಿವೆ ಎನ್ನುತ್ತಾರೆ ಸೋಪೊಸ್, ಬ್ರಿಟಿಷ್ ಕಂಪ್ಯೂಟರ್ ಸುರಕ್ಷತಾ ಸಂಸ್ಥೆ ಸಂಶೋಧಕರು.ಸೋಪೊಸ್ ಹೇಳುವಂತೆ ಹ್ಯಾಕರ್ಸ್‌ಗಳು ಅಕ್ರಮವಾಗಿ ಕದ್ದಿರುವ ಪಾಸ್‌ವರ್ಡ್‌ಗಳನ್ನು ಉಪಯೋಗಿಸಿಕೊಂಡು ಗೋ ಡ್ಯಾಡಿ ಬಳಕೆದಾರರ ಖಾತೆಗಳನ್ನು ಭೇದಿಸಿ ಸಬ್ಡೊ ಮೈನ್‌ಗಳನ್ನು ಸೃಷ್ಟಿಸುತ್ತಾರೆ. ಉದಾಹರಣೆಗೆ, www.name­osite.com ಬದಲಾಗಿ ಹ್ಯಾಕರ್‌ಗಳು ವೆಬ್ ವಿಳಾಸವನ್ನು nameofsite.blog.com ಎಂದು ಬದಲಾಯಿಸಿ, ನಂತರ ಗ್ರಾಹಕರಿಗೆ ಬದಲಾಯಿಸಿದ ಸಬ್ ಡೊಮೈನ್ ಲಿಂಕ್‌ಗಳೊಂದಿಗೆ ಇ-ಮೇಲ್ ಕಳುಹಿಸುತ್ತಾರೆ. ಗ್ರಾಹಕರು ಇ-ಮೇಲ್‌ನಿಂದ ಬಂದಿರುವ ಲಿಂಕ್ ಕ್ಲಿಕ್ ಮಾಡಿದಾಗ ಕಂಪ್ಯೂಟರ್‌ಗೆ `ರ‌್ಯಾನ್ಸಮ್ ವೇರ್' ಆಕ್ರಮಣ ನಡೆಸುತ್ತದೆ.

ಹ್ಯಾಕರ್ಸ್‌ಗಳು ಈ ಕಂಪ್ಯೂಟರ್‌ಗಳನ್ನು ತಮ್ಮಷ್ಟಿದಂತೆ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ, ಬಳಕೆದಾರರ ಆನ್‌ಲೈನ್ ಬ್ಯಾಂಕ್ ಖಾತೆ ಪಾಸ್‌ವರ್ಡ್ ಕದ್ದು ಹಣ ಲಪಟಾಯಿಸುವ ಅಪಾಯವೂ ಇದೆ. ಕಂಪ್ಯೂಟರ್ ಹ್ಯಾಕ್ ಆಗಿ ಸ್ಥಗಿತವಾಗಿದ್ದರೂ ಬಳಕೆದಾರರು ರ‌್ಯಾನ್ಸಮ್ ಪಾವತಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಸೆಮಾಂಟೆಕ್, ಸೋಫೊಸ್ ಮತ್ತು ಎಫ್-ಸೆಕ್ಯೂರ್ ಕಂಪೆನಿ ಸೇರಿದಂತೆ ಹಲವು ಮಾರಾಟಗಾರರು ಲಾಕ್ ಆಗಿರುವ ಕಂಪ್ಯೂಟರ್‌ಗಳನ್ನು ರ‌್ಯಾನ್ಸಮ್ ನೀಡದೆ ಅನ್‌ಲಾಕ್ ಮಾಡುವ ಪರಿಹಾರ ಒದಗಿಸುತ್ತಿದ್ದಾರೆ.ಕಂಪ್ಯೂಟರ್ ರಿಪೇರಿ ಮಾಡುವ ಸ್ಥಳೀಯ ತಜ್ಞರಿಂದ `ಫಾರ್ಮ್ಯೋಟ್' ಮಾಡಿಸಿ, ಬ್ಯಾಕಪ್ ಫೈಲ್ಸ್ ಮತ್ತು ಸಾಫ್ಟ್‌ವೇರ್‌ಗಳನ್ನು ಮತ್ತೆ ಇನ್‌ಸ್ಟಾಲ್ ಮಾಡಿಸಿಕೊಳ್ಳುವುದೂ ಸಹ ಉತ್ತಮ ಪರಿಹಾರ ಮತ್ತು ಕಡಿಮೆ ವೆಚ್ಚದ್ದಾಗಿದೆ.

ಹ್ಯಾಕರ್ಸ್‌ಗಳ ಹೊಸ ತಂತ್ರ
`ಹ್ಯಾಕರ್ಸ್‌ಗಳು ಈಗ ಧ್ವನಿಮುದ್ರಿತ ಸಂದೇಶ ಇಲ್ಲವೇ ವೆಬ್‌ಕ್ಯಾಮ್ ದೃಶ್ಯಾವಳಿ ತೋರಿಸಿ ಬೆದರಿಸುವಷ್ಟು ಅಪ್‌ಡೇಟ್ ಆಗಿದ್ದಾರೆ. ಜತೆಗೆ 48 ಗಂಟೆಯಲ್ಲಿ ಹಣ ಪಾವತಿಸದೇ ಇದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಅಧಿಕಾರಿಗಳಂತೆ ಹೆದರಿಸುವ ಮಟ್ಟಕ್ಕೂ ಹೋಗಿದ್ದಾರೆ. ಯೂರೋಪ್ ದೇಶಗಳಲ್ಲಿ ನವೆಂಬರ್‌ನಲ್ಲಿ ಒಂದೇ ದಿನ 18,941 ಕಂಪ್ಯೂಟರ್ ಹ್ಯಾಕ್ ಆಗಿದ್ದವು. ಇದರಲ್ಲಿ ಶೇ 15ರಷ್ಟು ಬಳಕೆದಾರರು ಹ್ಯಾಕರ್ಸ್‌ಗಳ ಖಾತೆಗೆ ಹಣ ಪಾವತಿಸಿದ್ದರು. ಈ ಹ್ಯಾಕರ್ಸ್‌ಗಳ ಪತ್ತೆ ಕಾರ್ಯ ಶುರುವಾಗಿದೆ.  18 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದ್ದ ಗುಂಪನ್ನು ಪತ್ತೆ ಹಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT