ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾಕ್ಕೆ ಸುಲಭ ತುತ್ತಾದ ಕೆನಡಾ

Last Updated 20 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ಹಂಬಂಟೋಟಾ, ಶ್ರೀಲಂಕಾ (ಪಿಟಿಐ): ತನ್ನ ಮುಂದಿದ್ದ ಬೃಹತ್ ಮೊತ್ತವನ್ನು ನೋಡಿಯೇ ಬೆದರಿದ್ದ ಕೆನಡಾ ತಂಡ ಹೆಚ್ಚಿನ ಪ್ರತಿರೋಧ ತೋರದೆ ಶರಣಾಯಿತು. ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಲಭಿಸಿದ್ದು 210 ರನ್‌ಗಳ ಭರ್ಜರಿ ಗೆಲುವು.

ಹಂಬಂಟೋಟಾದಲ್ಲಿರುವ ಮಹಿಂದಾ ರಾಜಪಕ್ಷೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದದ್ದು ಏಕಪಕ್ಷೀಯ ಹೋರಾಟ. ಮೊದಲು ಬ್ಯಾಟ್ ಮಾಡಿದ ಲಂಕಾ 7 ವಿಕೆಟ್‌ಗೆ 332 ರನ್ ಪೇರಿಸಿದಾಗಲೇ ಪಂದ್ಯದ ಫಲಿತಾಂಶ ಹೆಚ್ಚುಕಡಿಮೆ ಹೊರಬಿದ್ದಿತ್ತು. ಕೆನಡಾ ತಂಡ 36.5 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲೌಟಾಯಿತು.

ಆಕರ್ಷಕ ಶತಕ ಗಳಿಸಿದ ಮಾಹೇಲ ಜಯವರ್ಧನೆ (100, 81 ಎಸೆತ, 9 ಬೌಂ, 1 ಸಿಕ್ಸರ್) ಮತ್ತು ಜಬಾಬ್ದಾರಿಯುತ ಇನಿಂಗ್ಸ್ ಕಟ್ಟಿದ ನಾಯಕ ಕುಮಾರ ಸಂಗಕ್ಕಾರ (92, 87 ಎಸೆತ, 7 ಬೌಂ, 1 ಸಿಕ್ಸರ್) ಅವರು ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನುವಾನ್ ಕುಲಶೇಖರ (16ಕ್ಕೆ 3), ತಿಸಾರ ಪೆರೇರಾ (24ಕ್ಕೆ 3) ಮತ್ತು ಮುತ್ತಯ್ಯ ಮುರಳೀಧರನ್ (38ಕ್ಕೆ 2) ತಮ್ಮ ಮೊನಚಾದ ಬೌಲಿಂಗ್ ಮೂಲಕ ಕೆನಡಾ ತಂಡವನ್ನು ಬೇಗನೇ ಕಟ್ಟಿಹಾಕಿದರು.

12 ರನ್‌ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡ ಕೆನಡಾ ತಂಡ ಯಾವ ಹಂತದಲ್ಲೂ ತಲೆ ಎತ್ತಿ ನಿಲ್ಲಲಿಲ್ಲ.ರಿಜ್ವಾನ್ ಚೀಮಾ (37, 35 ಎಸೆತ, 4 ಬೌಂ, 2 ಸಿಕ್ಸರ್) ಮತ್ತು ನಾಯಕ ಆಶಿಶ್ ಬಾಗೈ (22) ಅವರಿಂದಾಗಿ ತಂಡದ ಮೊತ್ತ 100ರ ಗಡಿ ದಾಟಿತು. ಎರಡಂಕಿಯ ಮೊತ್ತ ತಲುಪಿದ ಇನ್ನೊಬ್ಬ ಆಟಗಾರ ಹರ್ವಿರ್ ಬೈಡ್ವಾನ್ (ಔಟಾಗದೆ 16). ತಂಡದ ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಬೃಹತ್ ಮೊತ್ತ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ತಂಡ ನಿರೀಕ್ಷೆಯಂತೆಯೇ ಬೃಹತ್ ಮೊತ್ತ ಪೇರಿಸಿತು. ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರ ಕಲಾತ್ಮಕ ಬ್ಯಾಟಿಂಗ್ ಇದಕ್ಕೆ ಕಾರಣ.

ಮೂರನೇ ವಿಕೆಟ್‌ಗೆ ಇವರಿಬ್ಬರು 22 ಓವರ್‌ಗಳಲ್ಲಿ 179 ರನ್‌ಗಳನ್ನು ಸೇರಿಸಿದರು. ಅನುಭವಿ ಆಟಗಾರರ ನಡುವಿನ ಜೊತೆಯಾಟ ನೆರೆದ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿತು. ಕೆನಡಾದ ಅನನುಭವಿ ಬೌಲಿಂಗ್ ದಾಳಿ ಇವರಿಗೆ ಸವಾಲಾಗಿ ಕಾಣಲೇ ಇಲ್ಲ.

ಜಯವರ್ಧನೆ ಏಕದಿನ ಕ್ರಿಕೆಟ್‌ನಲ್ಲಿ 12ನೇ ಶತಕ ಪೂರೈಸಿದರು. ಮಾತ್ರವಲ್ಲ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪರ ಅತಿವೇಗದ ಶತಕ ಗಳಿಸಿದ ಸಾಧನೆ ಮಾಡಿದರು. ಆದರೆ ಸಂಗಕ್ಕಾರ ಅವರಿಗೆ ಮೂರಂಕಿಯ ಗಡಿದಾಟುವ ಅದೃಷ್ಟ ಇರಲಿಲ್ಲ. ಶತಕಕ್ಕೆ ಕೇವಲ ಎಂಟು ರನ್ ಬೇಕಿದ್ದಾಗ ಜಾನ್ ಡೇವಿಸನ್‌ಗೆ ವಿಕೆಟ್ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT