ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕೇಶರ ಸಾಹಿತ್ಯಕ್ಕೆ ಕನ್ನಡದಲ್ಲಿ ಅಪರೂಪದ ಸ್ಥಾನ

Last Updated 23 ಜನವರಿ 2012, 8:10 IST
ಅಕ್ಷರ ಗಾತ್ರ

ಸಾಗರ: ಕೇಂದ್ರ ಪಾತ್ರಗಳು ಸೇರಿದಂತೆ ತಮ್ಮ ಕೃತಿಗಳಲ್ಲಿನ ಎಲ್ಲಾ ಪಾತ್ರಗಳನ್ನು ಪರೀಕ್ಷಕ ಗುಣದಿಂದ ನೋಡುವ ಕಾರಣಕ್ಕೆ ಲಂಕೇಶರ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಪರೂಪದ ಸ್ಥಾನ ಪಡೆದಿದೆ ಎಂದು ವಿಮರ್ಶಕ ನಟರಾಜ್ ಹುಳಿಯಾರ್ ಹೇಳಿದರು.

ತಾಲ್ಲೂಕಿನ ಹೆಗ್ಗೋಡು ಗ್ರಾಮದಲ್ಲಿ ಚರಕ ಉತ್ಸವದ ಅಂಗವಾಗಿ ಭಾನುವಾರ ನಡೆದ `ಲಂಕೇಶ್, ನಾಡು-ನುಡಿ~ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಡಿನ ಬಗ್ಗೆ ಗ್ರಹಿಕೆ ಇದ್ದಾಗ ಮಾತ್ರ ಮುಗ್ಧತೆ ಪಡೆಯಲು ಸಾಧ್ಯ ಎಂಬ ನಂಬಿಕೆಯಿಂದ ಬರೆದ ಲಂಕೇಶ್‌ರನ್ನು ಈ ಕಾರಣಕ್ಕೆ ನಿರಾಶವಾದಿ ಎಂದು ಕರೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

`ಲಂಕೇಶರ ಕೃತಿಗಳಲ್ಲಿ ಮಹಿಳೆ~ ಎಂಬ ವಿಷಯದ ಕುರಿತು ಲೇಖಕಿ ಸಬಿತಾ ಬನ್ನಾಡಿ ಮಾತನಾಡಿ, ಲಂಕೇಶರು ತಮ್ಮ ಕೃತಿಗಳಲ್ಲಿ ಹೆಣ್ಣನ್ನು ಭೋಗದ ಭಾಗಿಯಾಗಿ ನೋಡಿದ್ದಾರೆ ವಿನಾ ಭೋಗದ ವಸ್ತುವಾಗಿ ಕಂಡಿಲ್ಲ. ಹೆಣ್ಣಿನ ವ್ಯಕ್ತಿತ್ವದ ವಿಭಿನ್ನ ಆಯಾಮಗಳ ಸಾಚಾ ವಿಶ್ಲೇಷಣೆ ಅವರ ಕೃತಿಗಳಲ್ಲಿ ಕಾಣಬಹುದು ಎಂದರು.

ಹೆಣ್ಣಿನ ತಾಯಿ ಗುಣದ ಸೆಳೆತದ ಮೂಲಕ ಆಕೆಯ ವ್ಯಕ್ತಿತ್ವದ ಕುರಿತು ಹೊಸ ದರ್ಶನ ಮೂಡಿಸುವ ಲಂಕೇಶ್ ಅದೇ ಹೊತ್ತಿಗೆ ತಾಯಿಯ ಬಗ್ಗೆ ಇದ್ದ ಸಿದ್ಧ ಮಾದರಿಯ ವ್ಯಕ್ತಿತ್ವವನ್ನು ಒಡೆದರು. ಮನುಷ್ಯ ತನ್ನಲ್ಲಿರುವ ತಾಯಿ ಗುಣಗಳನ್ನು ಕಂಡುಕೊಂಡಾಗ ಮಾತ್ರ ಆತ ತನ್ನೆಲ್ಲಾ ಕಾಯಿಲೆಗಳಿಂದ ದೂರಾಗುತ್ತಾನೆ ಎಂಬ ಅಂಶ `ಗುಣಮುಖ~ ನಾಟಕದಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.

ಲಂಕೇಶರ ನಾಟಕಗಳ ಕುರಿತು ರಂಗಕರ್ಮಿ ಕೆ.ವಿ. ಅಕ್ಷರ ಮಾತನಾಡಿ, ಆತ್ಮವಿಮರ್ಶೆ ಸಂದರ್ಭದಲ್ಲಿ ಎದುರಾಗುವ ಸಂಕಟ, ಸವಾಲುಗಳ ಸಂಕೀರ್ಣತೆಯ ಪರೀಕ್ಷೆಯನ್ನು ಲಂಕೇಶರ ನಾಟಕಗಳಲ್ಲಿ ಕಾಣಬಹುದು. ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುವ ಒಳಗಿನ ಎಚ್ಚರವನ್ನು ಪ್ರಶ್ನಿಸಿ ಜಾಗೃತಗೊಳಿಸುವ ಗುಣ ಅವರ ನಾಟಕಗಳಿಗೆ ಇದೆ ಎಂದರು.

ಲಂಕೇಶರ ಪತ್ರಿಕಾ ಬರಹಗಳ ಕುರಿತು ವಿಮರ್ಶಕ ಸಿರಾಜ್ ಅಹಮದ್ ಮಾತನಾಡಿ, ವ್ಯಕ್ತಿಯಲ್ಲಿನ ಬದಲಾವಣೆಯ ಹಂಬಲಗಳು ತೀವ್ರಗೊಳ್ಳುವಂತೆ ಪ್ರಚೋದಿಸಿದ್ದು, ಲಂಕೇಶರ ಪತ್ರಿಕಾ ಬರವಣಿಗೆಗಳ ವೈಶಿಷ್ಟವಾಗಿದೆ. ಅವರ ಪತ್ರಿಕಾ ಬರವಣಿಗೆಯಿಂದ ಸಣ್ಣಪುಟ್ಟ ಊರುಗಳಲ್ಲೂ ಚಿಂತನಶೀಲವಾಗಿ, ವೈಚಾರಿಕವಾಗಿ ಯೋಚಿಸುವ ಒಂದು ಸಮುದಾಯ ಬೆಳೆಯಿತು ಎಂಬುದು ಗಮನಾರ್ಹ ಎಂದು ಹೇಳಿದರು.

`ಲಂಕೇಶ್ ಮತ್ತು ಯುವಜನ~ ಎಂಬ ವಿಷಯದ ಕುರಿತು ಲೇಖಕ ವಿಠ್ಠಲ ಭಂಡಾರಿ ಮಾತನಾಡಿ, ಗಂಭೀರ ಸಂಗತಿಗಳನ್ನೂ ಇದು ನನ್ನೊಳಗೆ ನಡೆಯುವ ಸಂಗತಿ ಮತ್ತು ಕ್ರಿಯೆ ಎಂದು ಯುವಜನರಿಗೆ ಅನಿಸುವ ಹಾಗೆ ಬರೆಯುತ್ತಿದ್ದ ಕಾರಣಕ್ಕೆ ಲಂಕೇಶ್ ಯುವಜನರಿಗೆ ಹತ್ತಿರವಾಗಿದ್ದರು. ಹಳ್ಳಿಯ ಮುಗ್ಧತೆ, ನಗರದ ವರಸೆ ಇವೆರಡೂ ಮಿಳಿತಗೊಂಡ ಜತೆಗೆ ಪ್ರಭುತ್ವವನ್ನು ಪ್ರಶ್ನಿಸುವ ಅವರ ಧೋರಣೆ ಯುವಜನರಿಗೆ ಇಷ್ಟವಾಗಿತ್ತು ಎಂದರು.

ಹಿರಿಯ ಸಮಾಜವಾದಿ ಪ. ಮಲ್ಲೇಶ್ ಮಾತನಾಡಿ, ಲಂಕೇಶ್ ಅವರಿಂದ ಪ್ರಭಾವಿತರಾದ ಯುವ ಸಮುದಾಯ ಈಗಿನ ಭ್ರಷ್ಟ ವ್ಯವಸ್ಥೆಯನ್ನು ನೋಡಿ ಸುಮ್ಮನೆ ಕುಳಿತಿರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ಹೇಳಿದರು.

ಎನ್.ಎಂ. ಕುಲಕರ್ಣಿ ಗೋಷ್ಠಿಯನ್ನು ನಿರ್ವಹಿಸಿದರು. ಮಧ್ಯಾಹ್ನ ನಡೆದ ಕವಿಗೋಷ್ಠಿಯಲ್ಲಿ ಸವಿತಾ ನಾಗಭೂಷಣ, ಸುಬ್ಬು ಹೊಲೆಯಾರ್, ಜ.ನಾ. ತೇಜಶ್ರೀ, ಕೆ. ಅಕ್ಷತಾ, ಮಾಧವಿ ಭಂಡಾರಿ ತಮ್ಮ ಕವಿತೆ ವಾಚಿಸಿದರು. ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ನಿರ್ವಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT