ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲಂಕೇಶ್ ನಾಡು ಕಂಡ ಮಹಾನ್ ಪ್ರತಿಭೆ'

Last Updated 6 ಸೆಪ್ಟೆಂಬರ್ 2013, 5:37 IST
ಅಕ್ಷರ ಗಾತ್ರ

ಬಳ್ಳಾರಿ: ಗ್ರಾಮೀಣ ಪ್ರದೇಶದಿಂದ ಬಂದು, ಅಪಾರ ಕೀಳರಿಮೆ, ಸಾಮಾನ್ಯ ಮನುಷ್ಯನ ಹುಂಬತನ ಮತ್ತು ಅವನ ಎಲ್ಲಾ ಒಳ್ಳೆಯ ಮತ್ತು ಸಣ್ಣತನಗಳನ್ನು ತಮ್ಮದಾಗಿಸಿಕೊಂಡಿದ್ದ ಲಂಕೇಶ್ ನಾಡು ಕಂಡ ಮಹಾನ್ ಪ್ರತಿಭೆಯಾಗಿದ್ದರು ಎಂದು ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ `ಪಿ.ಲಂಕೇಶ್- ಒಂದು ನೆನಪು' ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಂಕೇಶರ ಬಹುಮುಖ ಪ್ರತಿಭೆಗೆ ಅವರು ತಮ್ಮನ್ನು ಜೀವನದ ಅನುಭವಗಳಿಗೆ ತೆರೆದಿಟ್ಟುಕೊಂಡ ರೀತಿ ಅಪಾರ ಕಾಣಿಕೆ ನೀಡಿತು. ಒಬ್ಬ ಶಿಕ್ಷಕನಾಗಿ, ಚಲನಚಿತ್ರ ನಿರ್ದೇಶಕನಾಗಿ, ನಾಟಕಕಾರ, ಕವಿ, ಲೇಖಕ, ಕತೆಗಾರ, ಕಾದಂಬರಿಕಾರ, ಸಾಮಾಜಿಕ ಹೋರಾಟಗಾರ, ರಾಜಕಾರಣಿ ಹಾಗೂ ಪತ್ರಿಕೋದ್ಯಮಿಯಾಗಿ ಅವರು ಜೀವನದ ವಿವಿಧ ಆಯಾಮಗಳನ್ನು ತಮ್ಮದೇ ಆದ ರೀತಿಯಲ್ಲಿ ಅನುಭವಿಸಿದರು.

ಅವಮಾನಗಳನ್ನು ಎದುರಿಸುವ ಮೂಲಕ ಯಶಸ್ಸು ಗಳಿಸಿದರಲ್ಲದೆ, ಪ್ರತಿಯೊಂದು ವಿಚಾರಗಳಲ್ಲಿ ಹಳ್ಳಿಗನ ಮುಗ್ಧತೆ, ಹುಂಬತನ, ಬೆರಗುಗಣ್ಣಿನ ನೋಟಗಳಿಂದ ಸುತ್ತಲಿನ ಆಗು- ಹೋಗುಗಳಿಗೆ ತಮ್ಮನ್ನು ತೆರೆದುಕೊಂಡ ರೀತಿ ಅವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಿತು ಎಂದು ಅವರು ಹೇಳಿದರು.

ಲಂಕೇಶ್ ಅವರು ತಮ್ಮ ಸಮಾಜ ಪ್ರೇಮ ಮತ್ತು ದಲಿತ, ಹಿಂದುಳಿದ ವರ್ಗಗಳ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತಂದು, ಲಂಕೇಶ್ ಪತ್ರಿಕೆಯನ್ನು ವೇದಿಕೆಯನ್ನಾಗಿರಿಸಿ ಅವರೆಲ್ಲರೂ ಮುಂದೆ ತಾವು ಆರಿಸಿಕೊಂಡಿದ್ದ ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರನ್ನಾಗಿಸಿತು. ಅವರ ನೆರವಿನಿಂದ ಅನೇಕ ಪ್ರತಿಭೆಗಳು ರೂಪುಗೊಂಡು, ಕನ್ನಡ ಸಾಹಿತ್ಯಕ್ಕೆ ಹೊಸತನ ನೀಡಿದವು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್, ಜೀವನದಲ್ಲಿ ನೇರ ನಡೆ, ನುಡಿ, ದಿಟ್ಟತನಗಳನ್ನು ಮೈಗೂಡಿಸಿಕೊಂಡಿದ್ದ ಪಿ.ಲಂಕೇಶ್ ಮತ್ತೊಬ್ಬರಲ್ಲಿ ಹುದುಗಿರುವ ಪ್ರತಿಭೆ ಗುರುತಿಸುವ, ಮತ್ತು ಅಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ವಿಶಾಲ ಮನೋಭಾವ ಹೊಂದಿದ್ದರು ಎಂದರು.

ಮನುಷ್ಯನ ಸಹಜ ಸಣ್ಣತನಗಳನ್ನು ಮೀರಿ ಹೆಮ್ಮರವಾಗಿ ಬೆಳೆದ ಲಂಕೇಶ್, ಅನೇಕ ಕವಿ, ಕತೆಗಾರರನ್ನು ರೂಪಿಸಿ, ಅವರಿಗೆ ಜಗತ್ತಿನ ಶ್ರೇಷ್ಠ ಸಾಹಿತ್ಯದ ಪರಿಚಯ, ಪ್ರಭಾವಗಳನ್ನು ಮೂಡಿಸಿ, ಈ ನೆಲದ ಭಾವನೆಗಳಿಗೆ ಹಾಗೂ ಸಂದರ್ಭಗಳಿಗೆ ಸೂಕ್ತವೆನಿಸುವ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಲ್ಲಂ ಕರಿಬಸಪ್ಪ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಅರವಿಂದ ಪಾಟೀಲ್, ವೀ.ವಿ. ಸಂಘದ ಉಪಾಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

ಸಿರಿಗೇರಿ ಪನ್ನರಾಜ್, ಕಲ್ಲುಕಂಬ ಪಂಪಾಪತಿ, ಹುರಕಡ್ಲಿ ಶಿವಕುಮಾರ, ಕೊಟ್ರಪ್ಪ, ಟಿ.ಗುರುರಾಜಾಚಾರ್, ಪತ್ತಾರ್ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ನಂತರ ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪಡೆದ `ಪಲ್ಲವಿ ಅನುಪಲ್ಲವಿ' ಚಿತ್ರ ಪ್ರದರ್ಶನಗೊಂಡಿತು.

ಲಂಕೇಶ್‌ಗೆ ಅವಮಾನ!
ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಆರಂಭವಾಯಿತು. ವಿಚಾರ ಸಂಕಿರಣದಲ್ಲಿ ಲಂಕೇಶ್ ಮತ್ತು ಕನ್ನಡ ಸಾಹಿತ್ಯ ವಿಷಯ ಕುರಿತು ವಿಚಾರ ಮಂಡಿಸಬೇಕಿದ್ದ ಕಥೆಗಾರ  ಚಂದ್ರಕಾಂತ ವಡ್ಡು ಕಾರ್ಯಕ್ರಮ ತಡವಾಗುವ ಲಕ್ಷಣಗಳ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಲಂಕೇಶ್ ಅವರ ನೆನಪಿನ ಈ ಕಾರ್ಯಕ್ರಮ ತಡವಾಗಿ ಆರಂಭವಾಗುತ್ತಿರುವುದು ಲಂಕೇಶ್ ಅವರಿಗೇ ಅವಮಾನ ಮಾಡಿದಂತೆ ಎಂದು ಸಭಾಂಗಣದಿಂದ ಹೊರನಡೆದರು.

ಚಂದ್ರಕಾಂತ ವಡ್ಡು ಅವರ ವಿಚಾರ ಮಂಡನೆಯನ್ನು ಅವರ ಪರವಾಗಿ ಸಂಪಿಗೆ ನಾಗರಾಜ್ ಮಾಡಿದರು. ಪಿ.ಲಂಕೇಶ್ ಮತ್ತು ರಾಜಕೀಯ ವಿಷಯ ಕುರಿತಾಗಿ ಮಾತನಾಡಬೇಕಿದ್ದ ಬಿ.ಚಂದ್ರೇಗೌಡ ಅವರೂ ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT