ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ: ಇಬ್ಬರು ಬಿಬಿಎಂಪಿ ಅಧಿಕಾರಿಗಳ ಬಂಧನ

Last Updated 30 ಮೇ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯೊಂದರ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲು 45,000 ರೂಪಾಯಿ ಲಂಚ ಪಡೆದ ಬಿಬಿಎಂಪಿ ಜೆಪಿ ನಗರ ಕಂದಾಯ ನಿರೀಕ್ಷಕ ಶ್ರೀನಿವಾಸ್ ಮತ್ತು ಆರೋಪಿಯ ಪರವಾಗಿ ಹಣ ಪಡೆದ ತೆರಿಗೆ ನಿರೀಕ್ಷಕ ಲಿಂಗೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಲಂಚ ಪ್ರಕರಣದಿಂದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರಕ್ಕಿ ವಾರ್ಡ್ ಕಚೇರಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಹಿರಿಯ ಅಧಿಕಾರಿ ಪರವಾಗಿ ಲಂಚದ ಮೊತ್ತ ಪಡೆದು ಸದ್ದಿಲ್ಲದೇ ಪರಾರಿಯಾಗಿದ್ದ ಕಿರಿಯ ಅಧಿಕಾರಿ ಲೋಕಾಯುಕ್ತ ಪೊಲೀಸರು ಅಲ್ಲಿರುವುದು ಅರಿಯದೇ ಮತ್ತೆ ಅಲ್ಲಿಗೆ ಬಂದು ಸೆರೆಸಿಕ್ಕಾಗ ಕುತೂಹಲಕ್ಕೆ ತೆರೆಬಿತ್ತು.

ಸಾರಕ್ಕಿ ವಾರ್ಡ್ ನಿವಾಸಿ ಚಂದ್ರಪ್ಪ ಎಂಬುವರು ತೆರಿಗೆ ಪಾವತಿಗಾಗಿ ಮನೆಯ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ರೂ 50,000 ನೀಡುವಂತೆ ಶ್ರೀನಿವಾಸ್ ಒತ್ತಾಯಿಸಿದ್ದರು. ನಂತರ ಅರ್ಜಿದಾರರು ಚರ್ಚೆ ನಡೆಸಿದಾಗ ರೂ 45,000 ಪಡೆದು ಕೆಲಸ ಮಾಡಿಕೊಡುವುದಾಗಿ ತಿಳಿಸಿದ್ದರು. ಈ ಕುರಿತು ಚಂದ್ರಪ್ಪ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಬುಧವಾರ ಸಾರಕ್ಕಿ ವಾರ್ಡ್ ಕಚೇರಿಗೆ ಹಣ ತರುವಂತೆ ಆರೋಪಿ ಸೂಚಿಸಿದ್ದರು. ಅದರಂತೆ ಹಣದೊಂದಿಗೆ ಚಂದ್ರಪ್ಪ ತೆರಳಿದ್ದರು. ಆದರೆ, ನೇರವಾಗಿ ಹಣ ಪಡೆಯದೇ ಲಿಂಗೇಗೌಡರ ಬಳಿ ನೀಡುವಂತೆ ಸೂಚಿಸಿದರು. ಆ ಪ್ರಕಾರ ಅರ್ಜಿದಾರರು ಹಣ ನೀಡಿದರು. ಈ ಬೆಳವಣಿಗೆ ಕಾರ್ಯಾಚರಣೆಗೆ ತೆರಳಿದ್ದ ಲೋಕಾಯುಕ್ತ ಪೊಲೀಸರಿಗೆ ತಿಳಿದಿರಲಿಲ್ಲ. ಹಣ ಪಡೆದ ತೆರಿಗೆ ನಿರೀಕ್ಷಕ ಕಚೇರಿಯಿಂದ ಹೊರಹೋದ ಬಳಿಕ ಮಾಹಿತಿ ಗೊತ್ತಾಗಿತ್ತು. ಕೆಲ ದೂರ ಲಿಂಗೇಗೌಡರನ್ನು ಬೆನ್ನಟ್ಟಿ ಹೋದರೂ, ಹಿಡಿಯಲು ತನಿಖಾ ತಂಡಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತ ಪೊಲೀಸರು ಹಿಂಬಾಲಿಸುತ್ತಿರುವುದೂ ಆರೋಪಿಗೆ ತಿಳಿಯಲಿಲ್ಲ. ವಾಪಸಾದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳು ಮತ್ತೆ ಕಚೇರಿ ಬಳಿ ಕಾದು ನಿಂತರು. ಕೆಲ ಸಮಯದ ಬಳಿಕ ಲಿಂಗೇಗೌಡ ವಾಪಸಾದರು. ಅವರ ಗುರುತು ಹಿಡಿದ ತನಿಖಾ ತಂಡ ತಕ್ಷಣ ಬಂಧಿಸಿತು. ಶ್ರೀನಿವಾಸ್ ಅವರನ್ನೂ ವಶಕ್ಕೆ ಪಡೆಯಿತು.

ವಿಚಾರಣೆ ಆರಂಭಿಸಿದ ತನಿಖಾ ತಂಡಕ್ಕೆ ಮತ್ತೊಂದು ಆಘಾತ ಕಾದಿತ್ತು. ಲಿಂಗೇಗೌಡರ ಬಳಿ ಲಂಚದ ಹಣವೇ ಪತ್ತೆಯಾಗಲಿಲ್ಲ. ಈ ಕುರಿತು ಪ್ರಶ್ನಿಸಿದಾಗ ಜಯನಗರ `ಟಿ~ ಬ್ಲಾಕ್‌ನ ಅಂಗಡಿಯೊಂದರಲ್ಲಿ ಹಣ ಇರಿಸಿ ಬಂದಿರುವುದಾಗಿ ತಿಳಿಸಿದರು. ಅಲ್ಲಿಗೆ ತೆರಳಿ ಹಣ ವಶಕ್ಕೆ ಪಡೆದ ತನಿಖಾ ತಂಡ, ನಂತರ ಇಬ್ಬರೂ ಆರೋಪಿಗಳನ್ನು ಲೋಕಾಯುಕ್ತ ಕಚೇರಿಗೆ ಕರೆತಂದರು. ಬೆಂಗಳೂರು ನಗರ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಇನ್‌ಸ್ಪೆಕ್ಟರ್‌ಗಳಾದ ಎಸ್.ಟಿ.ಯೋಗೇಶ್ ಮತ್ತು ಸಣ್ಣತಿಮ್ಮಪ್ಪ ಒಡೆಯರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT