ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ತೆಗೆದುಕೊಳ್ಳಬೇಡಿ: ಸಲಹೆ

Last Updated 31 ಆಗಸ್ಟ್ 2011, 5:25 IST
ಅಕ್ಷರ ಗಾತ್ರ

ಮೈಸೂರು: `ಭ್ರಷ್ಟಾಚಾರ ಕ್ಯಾನ್ಸರ್ ಇದ್ದಂತೆ. ಇದಕ್ಕಿಂತ ದೊಡ್ಡ ಕಾಯಿಲೆ ಮತ್ತೊಂದಿಲ್ಲ. ಹಾಗಾಗಿ ಯಾರೂ ಲಂಚ ತೆಗೆದುಕೊಳ್ಳಬೇಡಿ~ ಎಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಪಿ.ಸಂದೇಶ್ ಇಲ್ಲಿ ತಿಳಿಸಿದರು.

ಡಿ.ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ `ಸಾಂಸ್ಕೃತಿಕ ವೇದಿಕೆ 2011-12~ ಉದ್ಘಾಟನಾ ಸಮಾರಂಭ ಹಾಗೂ `ವಿದ್ಯಾರ್ಥಿಗಳಿಗೆ ಒಂದು ದಿನದ ಕಾನೂನು ಅರಿವು ಕಾರ್ಯಕ್ರಮ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಹೋರಾಟ ನಡೆಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಭ್ರಷ್ಟಾಚಾರ, ಜಾತಿ ಮತ್ತು ಅಪರಾಧ ಈ ಮೂರು ದೇಶವನ್ನು ಆಳುತ್ತಿವೆ. ಇವುಗಳನ್ನು ತೊಲಗಿಸುವ ನಿಟ್ಟಿನಲ್ಲಿ ಯುವಕರು ಪಣ ತೊಡಬೇಕು~ ಎಂದು ಕರೆ ನೀಡಿದರು.

`ಶಿಸ್ತು, ಶ್ರಮ, ಶ್ರದ್ಧೆ, ಸರಳತೆ ಹಾಗೂ ಸಮಯಪ್ರಜ್ಞೆ ಈ ಐದು ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂತಹವರು ಎಲ್ಲೆ ಹೋದರೂ ಸ್ಥಾನ ಪಡೆಯುತ್ತಾರೆ. ಸಮಾಜಕ್ಕೆ ಕೆಡಕು ಮಾಡುವ ಕೆಲಸವನ್ನು ಎಂದಿಗೂ ಮಾಡಬಾರದು. ಯುವಕರು ಸತ್ಪ್ರಜೆಗಳಾಗಬೇಕು~ ಎಂದು ತಿಳಿಸಿದರು.

`ದೇಶದಲ್ಲಿ 120 ಕೋಟಿ ಜನಸಂಖ್ಯೆ ಇದ್ದು, ಈ ಬಗ್ಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಅದನ್ನು ಸರಿಯಾಗಿ ಬಳಸಿಕೊಂಡಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಅನುಮಾನ ಇಲ್ಲ. ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳಬೇಕು. 18 ವರ್ಷ ಕೆಳಗಿನ ಮಕ್ಕಳು ಚಾಲನಾ ಪರವಾನಗಿ ಇಲ್ಲದೆ ಬೈಕ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ. ಇದು ಅಪಾಯಕಾರಿ. ಈ ಬಗ್ಗೆ ಪೋಷಕರು, ಹಿರಿಯರು ಗಮನ ಹರಿಸಿ ಮಕ್ಕಳಿಗೆ ತಿಳಿ ಹೇಳಬೇಕು~ ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಆರ್.ರಾಜಾ ಸೋಮ ಶೇಖರ್, ಬನುಮಯ್ಯ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಪಿ.ವಿ .ನರಹರಿ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT