ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ನಿರ್ಮೂಲನೆ ಸಿಎಂ ಕಚೇರಿಯಿಂದಲೇ ಆರಂಭವಾಗಲಿ :ಡಿವಿಎಸ್

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ವಿಧಾನಸೌಧದ ಮೂರನೇ ಮಹಡಿಯಿಂದ, ಮುಖ್ಯಮಂತ್ರಿ ಕಚೇರಿಯಿಂದಲೇ ಭ್ರಷ್ಟಾಚಾರ ನಿರ್ಮೂಲನ ಕಾರ್ಯ ಆರಂಭವಾಗಬೇಕು. ಆಗಲೇ ರಾಜ್ಯದ ಇತರೆ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು ಸಾಧ್ಯವಾಗುತ್ತದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಇಲ್ಲಿ ಹೇಳಿದರು.

ಸರ್ ಸಿ.ವಿ.ರಾಮನ್‌ನಗರದ ವಿಧಾನಸಭಾ ಕ್ಷೇತ್ರದ ಹೊಸ ತಿಪ್ಪಸಂದ್ರದ ಶಿಶುಗೃಹ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ, ಸ್ಥಳೀಯ ನಿವಾಸಿಗಳಿಗೆ 3000 ಸಸಿಗಳನ್ನು ನೀಡುವ ಕಾರ್ಯಕ್ರಮ, ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ತಮ್ಮ ಅಧಿಕಾರವನ್ನು ಭ್ರಷ್ಟಾಚಾರಕ್ಕಾಗಿ ಅಥವಾ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು~ ಎಂದರು.

`ಮುಖ್ಯಮಂತ್ರಿಯಿಂದ ಹಿಡಿದು ಹಿರಿಯ ಅಧಿಕಾರಿಗಳು ಮತ್ತು ಸಮಾಜದ ಗ್ರಾಮ ಪಂಚಾಯಿತಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡದೆ, ಜನಪರ ಕಾಳಜಿಗೆ ಉಪಯೋಗಿಸಬೇಕು~ ಎಂದರು.

`ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು `ಸಕಾಲ~ ಯೋಜನೆಯನ್ನು ಜಾರಿಗೊಳಿಸಿದೆ. ಈಗಿನ ಮೂರು ತಿಂಗಳಿನಲ್ಲಿ 47 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ 46 ಲಕ್ಷ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ವರ್ಗಾಯಿಸಿ ರಾಜ್ಯದ ಭ್ರಷ್ಟಾಚಾರ ಕಡಿಮೆಗೊಳಿಸಲು ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ~ ಎಂದರು.

`ಯಾವುದೇ ಸರ್ಕಾರ ಅಥವಾ ಜನಪ್ರತಿನಿಧಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟಿ ಅವನ ಕಷ್ಟಗಳನ್ನು ಪರಿಹರಿಸಲು ಸಮರ್ಥವಾದಾಗಲೇ ಆ ಸರ್ಕಾರ, ಜನಪ್ರತಿನಿಧಿಯ ಆಡಳಿತ ಸಾರ್ಥಕವಾಗಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.

`ರಾಜ್ಯದ ಮುಖ್ಯಮಂತ್ರಿಯ ಜತೆಗೆ ಒಬ್ಬ ಬಡ ಕೂಲಿ ಕಾರ್ಮಿಕನು ಮಾತಾಡಲು ಸಾಧ್ಯವಾಗುವಂತೆ ಪರಿಸ್ಥಿತಿ ನಿರ್ಮಾಣವಾಗಬೇಕು. ಜನಪ್ರತಿನಿಧಿ ಮತ್ತು ಜನರ ಮಧ್ಯೆ ಅಂತರ ಆದಷ್ಟು ಕಡಿಮೆಯಾಗಬೇಕು~ ಎಂದರು.

`ಯಾವುದೇ ಕಾರ್ಯಕ್ರಮಗಳು, ಆಶ್ವಾಸನೆಗಳು ಬರೀ ಘೋಷಣೆಗಳಾಗಿರಬಾರದು ಬದಲಿಗೆ ಜನರ ಉಪಯೋಗಕ್ಕಾಗಿ ಅವುಗಳನ್ನು ಅನುಷ್ಠಾನಗೊಳಿಸಬೇಕು. ಎಲ್ಲ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟಿ ಅವನು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡುವಂತಹ ಕೆಲಸಗಳು ಆಗಬೇಕು~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ರಘು, ಮೇಯರ್ ಡಿ.ವೆಂಕಟೇಶ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT