ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆಯಲು ಹೋಗಿ ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದ ಅಧೀನ ಕಾರ್ಯದರ್ಶಿ!

Last Updated 5 ಜುಲೈ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಮಾಜಿ ನೌಕರರೊಬ್ಬರಿಂದ ಲಂಚ ಕೇಳಿದ ಹಾಲಿ ನೌಕರರೊಬ್ಬರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ! ಇವರು ಲಂಚ ಪಡೆಯಲು ಆಯ್ಕೆ ಮಾಡಿಕೊಂಡ ಸ್ಥಳ ಬೆಂಗಳೂರಿನ ನಗರ ರೈಲು ನಿಲ್ದಾಣ. ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಎಳೆದು ತಂದಿದ್ದಾರೆ.

ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ. ರಾಜಣ್ಣ ತಮ್ಮದೇ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದ ಡಿ. ವೆಂಕಟಾಚಲಯ್ಯ ಅವರಿಂದ ರೂ 4,000 ಲಂಚ ಕೇಳಿದ್ದರು.

ವೆಂಕಟಾಚಲಯ್ಯ ಹಿಂದೆ ಮಂಡ್ಯದಲ್ಲಿದ್ದಾಗ ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಇಲಾಖಾ ತನಿಖೆಗೆ ಸಿದ್ಧತೆಗಳು ನಡೆದಿವೆ. ಆದರೆ ವೆಂಕಟಾಚಲಯ್ಯ ಕರ್ತವ್ಯದಿಂದ ನಿವೃತ್ತರಾಗಿದ್ದಾರೆ. ಈ ನಡುವೆ ರಾಜಣ್ಣ ಅವರು, `ನಿಮ್ಮ ವಿರುದ್ಧ ಇರುವ ಇಲಾಖಾ ವಿಚಾರಣೆ ಪ್ರಸ್ತಾವನೆ ಕೈಬಿಡಲಾಗುವುದು. ಅದಕ್ಕೆ ರೂ5,000 ಲಂಚ ಕೊಡಿ' ಎಂಬ ಬೇಡಿಕೆ ಇಟ್ಟರು.

ವೆಂಕಟಾಚಲಯ್ಯ ಅವರಿಂದ ರೂ1,225 ಲಂಚ ಪಡೆದುಕೊಂಡರು. ಆದರೆ ಉಳಿದ ಹಣ ಕೊಟ್ಟರೆ ಮಾತ್ರ, ಕೆಲಸ ಮಾಡಿಕೊಡಲಾಗುವುದು ಎಂದು ಹೇಳಿದರು. ಲಂಚ ಕೊಡಲು ಮುಂದಾಗದ ವೆಂಕಟಾಚಲಯ್ಯ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ರಾಜಣ್ಣ ಬಂಧನಕ್ಕೆ ಬಲೆ ಬೀಸಿದ ಬೆಂಗಳೂರು ನಗರ ಲೋಕಾಯುಕ್ತ ವಿಭಾಗದ ಡಿಸಿಪಿ ಎಂ. ನಾರಾಯಣ ಮತ್ತು ಅವರ ತಂಡ, ಗುರುವಾರ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲೇ ರಾಜಣ್ಣ ಅವರನ್ನು ವಶಕ್ಕೆ ತೆಗೆದುಕೊಂಡಿತು.

ಲಂಚದ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT