ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ ಬಂಧನ

ಪ್ರಜಾವಾಣಿ ವಾರ್ತೆ
Last Updated 16 ಡಿಸೆಂಬರ್ 2013, 20:24 IST
ಅಕ್ಷರ ಗಾತ್ರ

ಬೆಂಗಳೂರು: ಮನರಂಜನಾ ಕ್ಲಬ್‌ ಒಂದರ ಮಾಲೀಕರಿಂದ ₨ 10,000 ಲಂಚ ಪಡೆದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದೀಪಕ್‌ ಮತ್ತು ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಲಸೂರು ಗೇಟ್‌ ಠಾಣೆಯ ವ್ಯಾಪ್ತಿಯಲ್ಲಿರುವ ಕಬ್ಬನ್‌ಪೇಟೆಯಲ್ಲಿ ಬಾಲಾಜಿ ರಿಕ್ರಿಯೇಷನ್‌ ಕ್ಲಬ್‌ ಎಂಬ ಹೆಸರಿನಲ್ಲಿ ಮನರಂಜನಾ ಕ್ಲಬ್‌ ನಡೆಸುತ್ತಿರುವ ಮಂಜುನಾಥ್‌ ಅವರಿಂದ ಇನ್‌ಸ್ಪೆಕ್ಟರ್‌ ಮಾಸಿಕ ₨ 5,000 ಲಂಚ ಪಡೆಯುತ್ತಿದ್ದರು. ಈ ಮೊತ್ತವನ್ನು ₨ 20,000ಕ್ಕೆ ಹೆಚ್ಚಿಸುವಂತೆ ಇನ್‌ಸ್ಪೆಕ್ಟರ್‌ ಇತ್ತೀಚೆಗೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದರೆ ಕ್ಲಬ್‌ ಮುಚ್ಚಿಸುವುದಾಗಿ ಬೆದರಿಕೆ ಹಾಕಿದ್ದರು.

ಕೆಲ ದಿನಗಳ ಬಳಿ ದೀಪಕ್‌ ಅವರನ್ನು ಭೇಟಿಯಾಗಿದ್ದ ಕ್ಲಬ್‌ ಮಾಲೀಕ ಮಂಜುನಾಥ್‌ ಮಾತುಕತೆ ನಡೆಸಿದ್ದರು. ಮಾಸಿಕ ₨ 10,000 ಲಂಚ ನೀಡದಿದ್ದರೆ ಕ್ಲಬ್‌ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಇನ್‌ಸ್ಪೆಕ್ಟರ್‌ ತಿಳಿಸಿದ್ದರು. ಕಾನ್‌ಸ್ಟೆಬಲ್‌ ಮಂಜುನಾಥ್‌ ಕೂಡ ಇನ್‌ಸ್ಪೆಕ್ಟರ್‌ ಪರವಾಗಿ ಲಂಚಕ್ಕೆ ಒತ್ತಾಯಿಸಿದ್ದರು.

ಕಳೆದ ತಿಂಗಳಿನ ಬಾಬ್ತು ₨ 10,000ವನ್ನು ಸೋಮವಾರ ಠಾಣೆಗೆ ತಲುಪಿಸುವಂತೆ ದೀಪಕ್‌ ಅವರು ಕ್ಲಬ್‌ ಮಾಲೀಕರಿಗೆ ಸೂಚಿಸಿದ್ದರು. ಈ ಕುರಿತು ಕ್ಲಬ್‌ ಮಾಲೀಕ ಮಂಜುನಾಥ್‌ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮೊದಲೇ ನೀಡಿದ್ದ ಸೂಚನೆಯಂತೆ ಸೋಮವಾರ ಹಣದೊಂದಿಗೆ ಠಾಣೆಗೆ ಹೋದ ಕ್ಲಬ್‌ ಮಾಲೀಕ ಮಂಜುನಾಥ್‌ ಅವರು ಇನ್‌ಸ್ಪೆಕ್ಟರ್‌ ಅವರನ್ನು ಸಂಪರ್ಕಿಸಿದರು. ಪಕ್ಕದಲ್ಲಿದ್ದ ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರಿಗೆ ಹಣ ನೀಡುವಂತೆ ದೀಪಕ್‌ ಸೂಚಿಸಿದರು. ಅದರಂತೆ ಕ್ಲಬ್‌ ಮಾಲೀಕರು ಹಣ ನೀಡಿದರು. ತಕ್ಷಣವೇ ದಾಳಿ ಮಾಡಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಡಿ.ಫಾಲಾಕ್ಷಯ್ಯ ಮತ್ತು ಎಚ್‌.ಪಿ.ಪುಟ್ಟಸ್ವಾಮಿ ನೇತೃತ್ವದ ತಂಡ ದೀಪಕ್‌ ಮತ್ತು ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರನ್ನು ಬಂಧಿಸಿತು.

‘ಇಬ್ಬರೂ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಇಬ್ಬರನ್ನೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು’ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯಾನಾರಾಯಣ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT