ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ಒಲಿಂಪಿಕ್ಸ್‌ಗೆ ದಕ್ಷಿಣ ಆಫ್ರಿಕಾ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಆನಂದದ ಹೊಳೆಯಲ್ಲಿ ತೇಲಬೇಕಿದ್ದ ಭಾರತದ ಹಾಕಿ ಆಟಗಾರ್ತಿಯರು ಶನಿವಾರ ರಾತ್ರಿ ಸೋಲಿನ ಕಣ್ಣೀರಿನಲ್ಲಿ ಮುಳುಗಿದರು.

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ  ನಡೆದ ಒಲಿಂಪಿಕ್ ಅರ್ಹತಾ ಹಾಕಿ ಟೂರ್ನಿ ಮಹಿಳೆಯರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3-1ರಿಂದ ಗೆಲ್ಲುವುದರೊಂದಿಗೆ ಭಾರತದ ವನಿತೆಯರ ಒಲಿಂಪಿಕ್ಸ್ ಕನಸು ಭಗ್ನವಾಯಿತು.

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿ ದಕ್ಷಿಣ ಆಫ್ರಿಕಾದ ಮಾರ್ಷಾ ಮಾರ್ಸೇಯಾ ನೇತೃತ್ವದ ಬಳಗವು ಪಂದ್ಯ ಗೆದ್ದು ಮೈದಾನದಲ್ಲಿ ಪ್ರೇಕ್ಷಕರತ್ತ ಕೈಬೀಸುತ್ತ, ನರ್ತಿಸುತ್ತಿದ್ದರು. ಇತ್ತ 32 ವರ್ಷಗಳ ನಂತರ ಒಲಿಂಪಿಕ್ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡ ಅಸುಂತಾ ಲಕ್ರಾ ಬಳಗ ಕಣ್ಣೀರು ಸುರಿಸುತ್ತಿತ್ತು.

ಕೋಚ್ ಸಿ.ಆರ್. ಕುಮಾರ್ ಮುಖ ಬಾಡಿತ್ತು. ತ್ರಿವರ್ಣ ಧ್ವಜವನ್ನು ಹಿಡಿದು ಬಂದಿದ್ದ ನೂರಾರು ಪ್ರೇಕ್ಷಕರು ನಿರಾಸೆಯಿಂದ ಮರಳಿದರು.  ಈ ಸಂದರ್ಭದಲ್ಲಿ ಗಣ್ಯರ ಗ್ಯಾಲರಿಯಲ್ಲಿ ಒಲಿಂಪಿಯನ್ ಹಾಕಿ ಆಟಗಾರ್ತಿ ರೇಖಾ ಭಿಡೆ, ಒಲಿಂಪಿಯನ್ ಪರ್ಗತ್‌ಸಿಂಗ್, ಎಬಿ ಸುಬ್ಬಯ್ಯ ಮತ್ತಿತರರು ಮೂಕಪ್ರೇಕ್ಷಕರಾಗಿದ್ದರು.

2008ರಲ್ಲಿಯೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತದ ವನಿತೆಯರು ಲೀಗ್ ಹಂತದಲ್ಲಿ ಕಷ್ಟದ ಹಾದಿ ಸವೆಸಿ ಫೈನಲ್‌ಗೆ ಬಂದಿದ್ದರು. ಆದರೆ 12ನೇ ರ‌್ಯಾಂಕಿನ ದಕ್ಷಿಣ ಆಫ್ರಿಕಾ ಕಳೆದ ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲಿದೆ.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅದು 11ನೇ ಸ್ಥಾನ ಪಡೆದಿತ್ತು. 2008ರ ಅರ್ಹತಾ ಸುತ್ತಿನಲ್ಲಿ ಭಾರತ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಎರಡನೇ ಸ್ಥಾನ ಪಡೆದಿದೆ!

ಆರಂಭದ ಆಘಾತ: ಪ್ರಥಮಾರ್ಧದಲ್ಲಿ 2-0ಯಿಂದ ಸಂಪೂರ್ಣ ಮೇಲುಗೈ ಸಾಧಿಸಿದ ದಕ್ಷಿಣ ಆಫ್ರಿಕಾದ ವನಿತೆಯರು ಆರಂಭದಲ್ಲಿಯೇ ಆಘಾತ ನೀಡಿದರು. ಪಂದ್ಯದ ಮೂರನೇ ನಿಮಿಷದಲ್ಲಿಯೇ ಮೊದಲ ಗೋಲು ಗಳಿಸಿ ಆತಿಥೇಯ ಬಳಗದ ರಕ್ಷಣಾ ಕೋಟೆಯನ್ನು ಕೆಡವಿದರು.

ಆರಂಭಿಕ ಹಂತದಲ್ಲಿಯೇ ದಾಳಿ ಆರಂಭಿಸಿದ ಅಗ್ರತಂಡ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ಮೂರನೇ ನಿಮಿಷದಲ್ಲಿ  ಗೋಲು ವಲಯಕ್ಕೆ ದಾಳಿಯಿಟ್ಟರು. ಈ ಸಂದರ್ಭದಲ್ಲಿ ಡಿಫೆಂಡರ್ ರಿತು ರಾಣಿ ಎದುರಾಳಿ ಆಟಗಾರ್ತಿಯಿಂದ ಚೆಂಡನ್ನು ಕಸಿಯುವ ಯತ್ನದಲ್ಲಿ ವಿಫಲರಾದರು. ಬಲಬದಿಯಲ್ಲಿದ್ದ  ಶೆಲ್ಲಿ ರಸೆಲ್ ಗೋಲುಪೆಟ್ಟಿಗೆಯತ್ತ ಚೆಂಡನ್ನು ಹಿಟ್ ಮಾಡಿದರು. ಗೋಲ್‌ಕೀಪರ್ ಯೋಗಿತಾ ಬಾಲಿ ದುಡುಕಿದ್ದು ಮುಳುವಾಯಿತು.

ನಂತರ ಲಕ್ರಾ ಬಳಗ ನಿರಂತರವಾಗಿ ದಾಳಿ ಮಾಡಲು ಆರಂಭಿಸಿತು. ದಕ್ಷಿಣ ಆಫ್ರಿಕಾದ ಡಿಫೆಂಡರ್‌ಗಳು ಚಾಕಚಕ್ಯತೆ ಪ್ರದರ್ಶಿಸಿದರು. 9ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ತಡೆಯುವಲ್ಲಿ ಸುಶೀಲಾ ಚಾನುಗೆ ಸಾಧ್ಯವಾಗದ ಕಾರಣ ಅಸುಂತಾ ಲಕ್ರಾಗೆ ಫ್ಲಿಕ್ ಮಾಡಲು ಸಾಧ್ಯವಾಗಲಿಲ್ಲ. ಮತ್ತೆ ಎದುರಾಳಿ ಡಿಫೆಂಡರ್‌ಗಳು ಮಿಂಚಿದರು.

ನಂತರ ಭಾರತದ ದಾಳಿಯನ್ನು ಸಮರ್ಥವಾಗಿ ತಡೆದ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ತಮಗೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ವಿಫಲರಾಗಿದ್ದು ಆತಿಥೇಯ ತಂಡದ ಅದೃಷ್ಟವಾಗಿತ್ತು. ಆದರೆ 29ನೇ ನಿಮಿಷದಲ್ಲಿ ಸಿಕ್ಕ ಮೂರನೇ ಅವಕಾಶದಲ್ಲಿ `ವಿಶ್ವದಾಖಲೆ~ ಆಟಗಾರ್ತಿ ಪೈಟಿ ಕೋಝಿ ಹಿಟ್ ತಡೆಯುವಲ್ಲಿ ಗೋಲ್‌ಕೀಪರ್ ಯೋಗಿತಾ ಬಾಲಿ ಮತ್ತು ನಾಲ್ಕು ಡಿಫೆಂಡರ್‌ಗಳು ವಿಫಲರಾದರು.

ದ್ವಿತಿಯಾರ್ಧದಲ್ಲಿಯೂ ಎದುರಾಳಿಗಳು ತಮ್ಮ ಹಿಡಿತ ಸಡಿಲಿಸಲಿಲ್ಲ. ಆದರೂ ಆತಿಥೇಯ ಬಳಗ ಕೆಲವು ಉತ್ತಮ ದಾಳಿಗಳನ್ನು ನಡೆಸಿತು. ಆದರೆ ಒತ್ತಡವಿದ್ದ ಕಾರಣ ಮತ್ತೆ ಬ್ಲಾಕಿಂಗ್, ಪಾಸಿಂಗ್‌ಗಳಲ್ಲಿ ವಿಫಲವಾಯಿತು. 53ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ನಾಯಕಿ ಮಾರ್ಷಾ ಗೋಲಿನಲ್ಲಿ ಪರಿವರ್ತಿಸಿ, ಭಾರತದ ಗೆಲುವನ್ನು ಮತ್ತಷ್ಟು ಕಠಿಣಗೊಳಿಸಿದರು.  57ನೇ ನಿಮಿಷದಲ್ಲಿ ಆಫ್ರಿಕಾದ ರಕ್ಷಣಾ ಆಟಗಾರ್ತಿ ಮಾಡಿದ ತಪ್ಪಿನಿಂದ ಪೆನಾಲ್ಟಿ ಕಾರ್ನರ್ ಸಿಕ್ಕಿತು.

ಇದನ್ನು ವ್ಯರ್ಥ ಮಾಡದ ಜಸಪ್ರೀತ್ ಕೌರ್ ಭಾರತಕ್ಕೆ ಗೋಲು ಗಳಿಸಿಕೊಟ್ಟರು. ಆದರೆ ನಂತರದ ಅವಧಿಯ ಹೆಚ್ಚು ಹೊತ್ತು ಚೆಂಡನ್ನು ಮೈದಾನದ ಮಧ್ಯದಲ್ಲಿಯೇ ಉರುಳುವಂತೆ ನೋಡಿಕೊಳ್ಳುವಲ್ಲಿ ಎದುರಾಳಿ ಆಟಗಾರ್ತಿಯರು ಸಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT