ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕಮನಹಳ್ಳಿಗೆ ಬರಲು ನಾ ಒಲ್ಲೆ!

Last Updated 20 ಜುಲೈ 2012, 7:35 IST
ಅಕ್ಷರ ಗಾತ್ರ

ಧಾರವಾಡ: ನೋಡಲು ಸುಂದರ ಪರ್ವತ ಪ್ರದೇಶದಂತೆ ಕಾಣುವ ಲಕಮನಹಳ್ಳಿಯಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಪ್ರಾಧಿಕಾರ (ಹುಡಾ) ರಚಿಸಿದ ವಸತಿ ವಿನ್ಯಾಸಕ್ಕೆ ಮೂಲ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ನಿವೇಶನಗಳನ್ನು ಖರೀದಿ ಮಾಡಿದವರು ಬಾರದಿರುವುದರಿಂದ ಸುಮಾರು 1800ಕ್ಕೂ ಅಧಿಕ ನಿವೇಶನಗಳು ಹಾಗೆಯೇ ಉಳಿದಿವೆ. 

ಈ ವಸತಿ ವಿನ್ಯಾಸದ ಇತಿಹಾಸ ಕೆದಕುತ್ತಾ ಹೋದರೆ ಹುಡಾ ಇಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಮನೆಗಳನ್ನು ಕಟ್ಟಿಕೊಳ್ಳದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದು ಇಂದಿನ ಸಮಸ್ಯೆಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ.

ಯಾವುದೇ ನಿವೇಶನಗಳನ್ನು ಖರೀದಿಸಿ ಐದು ವರ್ಷದೊಳಗೆ ಮನೆ ಕಟ್ಟಿಕೊಳ್ಳದೇ ಇದ್ದರೆ ಅಂಥವರಿಂದ ನಿವೇಶನ ವಾಪಸ್ ಪಡೆದು ಬೇರೆಯವರಿಗೆ ಮರು ಹಂಚಿಕೆ ಮಾಡುವ ಅಧಿಕಾರ ಹುಡಾಗೆ ಇದೆ. ಆದರೆ ರಾಜಕೀಯ ಒತ್ತಡಗಳು ಹಾಗೂ ರದ್ದುಪಡಿಸಲು ಹೋದರೆ `ಮೂಲಸೌಕರ್ಯವೇ ಕಲ್ಪಿಸಿಲ್ಲವಲ್ಲ~ ಎಂದು ಜನರೇ ಕೇಳಿಯಾರು ಎಂಬ ಹಿಂಜರಿಕೆಯಿಂದ ಇಲ್ಲಿಯವರೆಗೂ ಹುಡಾ ಅಧ್ಯಕ್ಷರಾದವರು ಕ್ರಮ ಕೈಗೊಂಡಿಲ್ಲ.

ಇಷ್ಟಾಗಿಯೂ ಕಾಲಕಾಲಕ್ಕೆ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣ, ಚರಂಡಿ ನಿರ್ಮಾಣ, ವಿದ್ಯುತ್ತೀಕರಣ ಕಾಮಗಾರಿ, ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿ ಹಾಗೂ ವಸತಿ ವಿನ್ಯಾಸ ರಕ್ಷಣೆಗೆ ಸುಮಾರು ಏಳು ಕೋಟಿ ರೂಪಾಯಿ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ಮಾಹಿತಿಯಿಂದ ಬಹಿರಂಗವಾಗಿದೆ!

ನಗರದ ಸಾಲಗಟ್ಟಿಚಾಳದ ನಿವಾಸಿ ಮೈಲಾರಪ್ಪ ಎಂ.ದೇವಗಿರಿ ಅವರು ಕೇಳಿದ ಮಾಹಿತಿ ಹುಡಾ ಉತ್ತರ ನೀಡಿದ್ದು, ಈ ವಿನ್ಯಾಸದ ರಕ್ಷಣೆಗೆಂದೇ 28.80 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಆದರೆ ಬುಧವಾರ `ಪ್ರಜಾವಾಣಿ~ ಸರ್ವೆ ನಂ. 165ಅ ಹಾಗೂ 166ನ ಲಕಮನಹಳ್ಳಿ ವಸತಿ ವಿನ್ಯಾಸಕ್ಕೆ ಭೇಟಿ ನೀಡಿ ನೀಡಿದಾಗ ಯಾರೊಬ್ಬ `ಕಾವಲು~ಗಾರರೂ ಅಲ್ಲಿರಲಿಲ್ಲ!

1992-93ರ ಅವಧಿಯಲ್ಲಿ ಪಿ.ಎಸ್.ಶೂರಪಾಲಿ ಎಂಬುವವರು ಹುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು 180 ಎಕರೆಯಲ್ಲಿ ಸಾವಿರಾರು ನಿವೇಶನಗಳನ್ನು ಹಂಚಲಾಯಿತು. ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಈ ವಿನ್ಯಾಸವನ್ನು ಉದ್ಘಾಟಿಸಿದ್ದರು.

“ಬಹುತೇಕ ಶ್ರೀಮಂತರು, ಒಂದು ಸ್ವಂತ ಮನೆ ಇದ್ದವರೇ ಇಲ್ಲಿ ನಿವೇಶನಗಳನ್ನು ಖರೀದಿ ಮಾಡಿದ್ದರಿಂದ ಅವರು ಇಲ್ಲಿ ಮನೆ ನಿರ್ಮಿಸಿಲ್ಲ. ಅವರಿಗೆ ಮನೆ ನಿರ್ಮಿಸುವ ತುರ್ತೂ ಇರಲಿಕ್ಕಿಲ್ಲ. ಆದ್ದರಿಂದ ಅವರಿಗೆ ಹಂಚಿಕೆ ಮಾಡಲಾದ ನಿವೇಶನಗಳನ್ನು ವಾಪಸ್ ಪಡೆದು ನಮ್ಮಂಥ ಬಡವರು, ನಿರ್ಗತಿಕರಿಗೆ ನೀಡಬೇಕು” ಎನ್ನುತ್ತಾರೆ ಮೈಲಾರಪ್ಪ.

`ಹುಬ್ಬಳ್ಳಿ-ಧಾರವಾಡ ನಿವೇಶನರಹಿತರ ಆಂದೋಲನ~ದ ಸಂಚಾಲಕ ನಾಗರಾಜ ಗುರಿಕಾರ ಮಾತನಾಡಿ, “1991ರಲ್ಲಿ ಈ ಜಾಗವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ ಹುಡಾ ಇದಾವುದನ್ನೂ ಲೆಕ್ಕಿಸದೇ ಶ್ರೀಮಂತರಿಗೂ ಮಾರಾಟ ಮಾಡಿತು. ಮೂಲಸೌಕರ್ಯ ಕಲ್ಪಿಸಲು ಆಗದೇ ಇರುವುದರಿಂದಲೇ ನಿವೇಶನ ಖರೀದಿಸಿದವರು ಅಲ್ಲಿಗೆ ಬಂದಿಲ್ಲ. ಈ ನಿವೇಶನ ಅಭಿವೃದ್ಧಿಗೊಳಿಸಲು ಗಟ್ಟಿ ಮನಸ್ಸು ಮಾಡುವ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಅಲ್ಲಿ ಪ್ಲಾಟಿನ ನಂಬರ್‌ಗಳೂ ಅಳಿಸಿ ಹೋಗಿವೆ” ಎಂದು ಆರೋಪಿಸಿದರು.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, “ನಿವೇಶನದಾರರು ಮನೆ ಕಟ್ಟಿಕೊಳ್ಳಲು ಮುಂದಾದರೆ ನೀರು ಪೂರೈಕೆ ಹಾಗೂ ರಸ್ತೆಗಳನ್ನು ಹಾಕಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಒಂದು ಹತ್ತು ಜನ ಧೈರ್ಯ ಮಾಡಿ ಮನೆಕಟ್ಟಿಕೊಳ್ಳಲು ಮುಂದಾದರೂ ಸಾಕು, ಉಳಿದವರು ಬರುತ್ತಾರೆ. ಈ ಬಗ್ಗೆ ಈಗಾಗಲೇ ನಿವೇಶನ ಪಡೆದೂ ಮನೆ ಕಟ್ಟಿಕೊಳ್ಳದವರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ಲಕಮನಹಳ್ಳಿಗೆ ಇದೇ 20ರಂದು ಭೇಟಿ ನೀಡಲಿದ್ದೇನೆ” ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT