ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಮಿ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೀಪಾವಳಿ ಅಂದ್ರೆ ಶುಭ ಲಾಭಗಳ ಹಬ್ಬ. ಮನೆಯ ಮುಂದೆ ದಸರೆಗೆ ಬಳಿದ ಸುಣ್ಣಕ್ಕೆ ಕೆಮ್ಮಣ್ಣು `ಜಾಜ~ದ ಅಂಚು ಬಿಡಿಸಿ ಅದರ ಮೇಲೆ ವಿಭೂತಿ ಮಿಶ್ರಣದಿಂದ ಸ್ವಸ್ತಿಕ ಚಿಹ್ನೆ, ಶುಭ-ಲಾಭಗಳನ್ನು ಮನೆ ಬಾಗಿಲಿನ ಇಬ್ಬದಿಗೆ ಬರೆಯುವದರಿಂದಲೇ ಹಬ್ಬದ ಸಡಗರ ಆರಂಭ.

ಚುಮು ಚುಮು ನಸುಕಿನ ಬೆಳಕಿನಲ್ಲಿ ಅಮ್ಮನ ಬಾಯಲ್ಲಿ `ಏನ್‌ಕೊಡ, ಏನ್‌ಕೊಡವ... ಹುಬ್ಬಳ್ಳಿ ಮಾಟದ್ದು ಏನ್ ಕೊಡ, ಏನ್ ಕೊಡವ~ ಹಾಡು. ಏದುಸಿರು ಬಂದರೂ ಒಂದು ಕೈಯಲ್ಲಿ ಹುಣಿಸೆಹಣ್ಣು, ಅದಕ್ಕೆ ಬೂದಿ ಹಚ್ಚಿ ತಿಕ್ಕುತ್ತಲೇ `ತಿಕ್ಕಲಿಲ್ಲ, ತೊಳೀಲಿಲ್ಲ..~ ಅಂತ ಹಾಡು ಮುಂದುವರೀತಿತ್ತು.

ಹಾಗೆಯೇ ಅಮ್ಮನಿಗೆ ಅಜ್ಜ ಮನೆಯಲ್ಲಿ ಕೊಟ್ಟ ತಾಮ್ರದ ಕೊಡಕ್ಕೆ ಗುಲಾಬಿ ಬಣ್ಣ ಬಂದಿರುತ್ತಿತ್ತು. ಅದಾದ ನಂತರ ಹೊಂಬಣ್ಣದ ಹಿತ್ತಾಳೆ ತಪೇಲಿ ಮಿರಿಮಿರಿ ಮಿಂಚುತ್ತಿತ್ತು. ಮತ್ತದೇ ನೀರು ಕಾಯಿಸಿ ಬುಡ ಕಪ್ಪಾದ ಹಂಡೆಯ ಕತ್ತು ಮಾತ್ರ ಗುಲಾಬಿ ಬಣ್ಣ ಮರಳಿ ಪಡೆಯುತ್ತಿತ್ತು.

ನಲ್ಲಿ ನೀರು ಬರುವ ಮುಂಚೆಯೇ ಇವುಗಳ ಮೇಕಪ್ ಮುಗಿದಿರುತ್ತಿತ್ತು. ನಂತರ ನೀರು ತುಂಬಿಸಿ, ಎಲ್ಲದರಲ್ಲೂ ತುಳಸಿ ದಳ ಹಾಕಿ, ಪೂಜೆ ಮಾಡಿದರೆ ನೀರು ತುಂಬುವ ಹಬ್ಬ ನಿರಾಳವಾಗಿ ಮುಗೀತಿತ್ತು.

ಅಷ್ಟಾದರೂ ಅಮ್ಮನ ಮುಂದೆ ಅಜ್ಜಿ ಗೊಣಗುತ್ತಿದ್ದರು. `ಬಾವಿ ಇಲ್ಲದ ಮನ್ಯಾಗ, ಭೂಮಿ ಇಲ್ಲದ ಗಂಗೀಗೆ ಎಂಥಾ ಪೂಜಿ ನಿಮ್ದು~ ಅಂತ. ಅವರು ಬಾವಿ ಪೂಜೆ ಮಾಡಿ, ಮಂಗಳ ವಾದ್ಯ ನುಡಿಸಿ, ಗಂಗೆಯನ್ನು ಬರಮಾಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ತಯಾರಿ ಮರುದಿನದ ಅಭ್ಯಂಜನಕ್ಕೆ.

ನಮಗೀಗ ನಲ್ಲಿ ನೀರು ಇಲ್ಲ. ಸಂಪಿನ ನೀರೆ ಎಲ್ಲ. ನರಕ ಚತುರ್ದಶಿ ದಿನ ಬೆಳಕು ಹರಿಯುವ ಮೊದಲೇ ಗೊಣಗುತ್ತ ಎದ್ದು, ಅಮ್ಮನ ಕೈಯಿಂದ ಎಣ್ಣೆ ಹಚ್ಚಿಸಿಕೊಂಡು ಬಿಸಿಬಿಸಿ ನೀರು ಹಾಕಿಸಿಕೊಳ್ಳುತ್ತಿದ್ದ ಆ ದಿನಗಳ ಮಜ ಈಗ್ಲ್ಲೆಲಿ? ಸೋಲಾರ್, ಹೀಟರ್ ನೀರಿನಲ್ಲಿ ಒಂದಿಷ್ಟು ಸ್ನಾನ ಮಾಡಿ ಪಟಾಕಿ ಹೊಡೆದರೆ ಅಂದಿನ ಆಚರಣೆ ಮುಗಿದಂತೆ. ಸಂಜೆ ಮನೆ ಮುಂದೆ ದೀಪಗಳ ತೋರಣ.

ದೀಪಾವಳಿ ಅಮಾವಾಸ್ಯೆ ದಿನ ಮಾತ್ರ ಲಕುಮಿಯ ಪೂಜೆಯದ್ದೇ ಖುಷಿ. ಮನೆಯೊಳಗಿನ ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಕನಿಷ್ಠದಿಂದ ಗರಿಷ್ಠ ಮೊತ್ತದ ಎಲ್ಲ ನಾಣ್ಯಗಳನ್ನೂ, ನೋಟುಗಳನ್ನೂ ಇರಿಸಿ, ಲಕ್ಷ್ಮಿಗೆ ಸೀರೆ ಉಡಿಸಿ, ಮಾವಿನೆಲೆಗಳ ಸಿಂಗಾರ ಮಾಡಲಾಗುತ್ತದೆ. ಬೆಳ್ಳಿ ಬಟ್ಟಲದೊಳು ಶ್ಯಾವಿಗೆ ಪಾಯಸದ  ನೈವೇದ್ಯ.

ಈ ಹಬ್ಬಕ್ಕೆ ಮಗಳೊಂದಿಗೆ ಅಳಿಯನೂ ಮಾವನ ಮನೆಗೆ ಬರುತ್ತಾನೆ. ಕನಕಾಂಗಿಯಂತೆ ಸಿಂಗರಿಸಿಕೊಂಡ ಹೆಂಡತಿಯನ್ನು ಕರೆ ತಂದು, ನಿಮ್ಮ ಮಗಳು ನನ್ನೊಂದಿಗೆ ನೆಮ್ಮದಿಯಿಂದ ಇರುವಳು ಎಂಬ ಭರವಸೆ ನೀಡುತ್ತಾನೆ. ಅದಕ್ಕೆ ಹಬ್ಬದ ಮೊದಲ ದಿನ ಚಿನ್ನ ಖರೀದಿ, ಎರಡನೆಯ ದಿನ ಮಾವನ ಮನೆಗೆ ಭೇಟಿ. ಅಲ್ಲಿ ಮಲಗಿದರೆ ಮನೆಯ ಲಕುಮಿ ಹೊರ ಹೋಗುವಳೆಂದು ಮಧ್ಯಾಹ್ನ ಪಗಡೆ ಆಡುತ್ತ ಕಾಲ ಕಳೆಯುವ ಸಂಭ್ರಮ.

ಸಂಜೆಗೆ ಮಕ್ಕಳೊಂದಿಗೆ ಪಟಾಕಿ ಗದ್ದಲದಲ್ಲಿ ಎಲ್ಲರೂ ಮಕ್ಕಳಾಗಿ ಬೆರೆಯುತ್ತಾರೆ. ಮತ್ತೆ ರಾತ್ರಿ ಲಕುಮಿಯನ್ನು ಕಾಯುವ ಕೆಲಸ ಗಂಡಸರದ್ದು. ಅಂದು ಜೂಜಾಡುವುದು ನಿಷಿದ್ಧವಲ್ಲ. ಮನಃಪೂರ್ತಿ ಎಲೆ ಆಡುವುದೇ ಈ ಹಬ್ಬದ ವಿಶೇಷ. ಲಕುಮಿಯೊಂದಿಗೆ ಲಕ್ ಸಹ ಬರುವುದೇ ಎಂಬುದು ತಿಳಿಯುವುದೇ ಈ ಆಟದ ಮೂಲಕ.

ಕಳೆಯುವುದು ಗಳಿಸುವುದು ಏನೇ ಇದ್ದರೂ ಕೊನೆಗೆ ಶುಭ ಲಾಭ ತರಲಿ ಎಂದು ಪ್ರಾರ್ಥಿಸುವುದೇ ಹಬ್ಬದ ಉದ್ದೇಶ. ಮೂರನೆಯ ದಿನ ಬಲಿ ಪಾಡ್ಯಮಿ. ಅಂದು ಕಿವಿ ಚುಚ್ಚಿಸುವ, ಮೂಗು ಚುಚ್ಚಿಸುವ ಕೆಲಸಗಳಿದ್ದರೆ ಯಾವುದೇ ಮುಹೂರ್ತ ನೋಡದೆ ಮಾಡಲಾಗುತ್ತದೆ.

ಚಿನ್ನದ ತಂತಿಯಿಂದ ಅಂದು ಅಂಗಚ್ಛೇದ ಮಾಡಿದರೆ ಯಾವುದೇ ವಾಮಾಚಾರಕ್ಕೂ ಬಲಿಯಾಗರು ಎಂಬುದೊಂದು ನಂಬಿಕೆ. ಹಾಗಾಗಿ ಮದುವೆ ಹೆಣ್ಣು ಮೂಗಿಗೆ ವಜ್ರದ ಮೂಗು ಬೊಟ್ಟು ಅಥವಾ ಚಿನ್ನದ ನತ್ತು ಧರಿಸುವುದು ಇದೇ ಶುಭದಿನದಂದು. ಕಿವಿ ಚುಚ್ಚಿಸದ ಎಳೆ ಮಗುವಿಗೆ ಮುತ್ತಿರುವ ಲೋಲಾಕು ಹಾಕುವುದೂ ಇದೇ ಶುಭ ಸಂದರ್ಭದಲ್ಲಿ. ದೀಕ್ಷೆ ಪಡೆದ ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವುದೂ ಇದೇ ವಿಶೇಷ ದಿನದಂದು.

ಮೂರು ದಿನಗಳೂ ಹೊಸ ಬಟ್ಟೆ, ಹೊನ್ನು, ಹಣಗಳಲ್ಲಿ, ಉಡುಗೆ-ತೊಡುಗೆಗಳಲ್ಲಿ ಮಿಂದೇಳುವ ಈ ಹಬ್ಬ ಶುಭ-ಲಾಭದ ನಿರೀಕ್ಷೆ ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT