ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ಲಕ್ಷ ಗಳಿಸಿಕೊಟ್ಟ, ಲಕ್ಷ್ಮಿ;

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಎರಡು ದಶಕಗಳ ಹಿಂದೆ ಕೇವಲ 400 ರೂಪಾಯಿಗಳಿಗೆ ರೈತ ಮಲ್ಲಿಕಾರ್ಜುನ ಅವರ ಮನೆ ಸೇರಿದ್ದ `ಲಕ್ಷ್ಮಿ~ ಈಗ ಅವರನ್ನು ಲಕ್ಷಾಧಿಪತಿಯನ್ನಾಗಿಸಿದ್ದಾಳೆ. 16 ಮಕ್ಕಳನ್ನು ಹೆತ್ತು ಮಕ್ಕಳು ಮೊಮ್ಮಕ್ಕಳ ಮರಿಮಕ್ಕಳ ಜೊತೆ ಸುಖ ಸಂಸಾರ ನಡೆಸುತ್ತಿದ್ದಾಳೆ. 17ನೆಯ ಮಗುವಿಗೆ ಗರ್ಭವನ್ನೂ ಧರಿಸಿದ್ದಾಳೆ!

ಈಕೆ ಇನ್ನಾರೂ ಅಲ್ಲ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿ ಭೀಮಸಂದ್ರ ಗ್ರಾಮದ ಮಲ್ಲಿಕಾರ್ಜುನ ಅವರ ಮನೆ ಸೇರಿರುವ ಜರ್ಸಿ ಮಿಶ್ರತಳಿಯ ಹಸು. 22 ವರ್ಷದ ಈ ಹಸು ಎಂಟು ಹೆಣ್ಣು ಕರುಗಳನ್ನು ಹೆತ್ತಿದೆ. ಅವುಗಳ ಪೈಕಿ ಎರಡು ಮಾರಾಟ ಮಾಡಲಾಗಿದೆ. ಉಳಿದ ಆರು ಕರುಗಳಿಂದಲೇ ಇವತ್ತು ಇವರ ಕೊಟ್ಟಿಗೆಯಲ್ಲಿ ಲಕ್ಷ್ಮಿಯ ಸಂತಾನ ಬೆಳಿದಿದೆ. ಈಗ ಒಟ್ಟು 11 ಹಸು ಹಾಗೂ 3 ಕರುಗಳು ಇವೆ.

ತುಮಕೂರು ಹಾಲು ಒಕ್ಕೂಟದ ಭೀಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲನ್ನು ಸರಬರಾಜು ಮಾಡುವ ಇವರ ವರ್ಷದ ಅಂದಾಜು ಆದಾಯ 4 ಲಕ್ಷ 18 ಸಾವಿರ ರೂಪಾಯಿ.

ವರ್ಷ ಪೂರ್ತಿ ದಿನವಹಿ ಸರಾಸರಿ 64ಲೀಟರ್ ಹಾಲು ಸರಬರಾಜು ಮಾಡುತ್ತಿರುವ ಇವರು ತುಮಕೂರು ಹಾಲು ಒಕ್ಕೂಟದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅತಿ ಹೆಚ್ಚು ಹಾಲು ಸರಬರಾಜು ಮಾಡಿರುವ ಉತ್ಪಾದಕರೆಂದು ಪ್ರಶಸ್ತಿ ಪಡೆದು ಸನ್ಮಾನಿತರಾಗಿದ್ದಾರೆ.

ಪುತ್ರನಿಂದ ಆರೈಕೆ
ಈಗ ಈ ರಾಸುಗಳ ಜವಾಬ್ದಾರಿ ಹೊತ್ತಿರುವುದು 36 ವಯಸ್ಸಿನ ಬಿಎಸ್ಸಿ ಪದವೀಧರ ಕಲ್ಲೇಶ್, ಮಲ್ಲಿಕಾರ್ಜುನ ಅವರ ಮಗ. ಇವರಿಗೆ ಹೈನುಗಾರಿಕೆ, ಪಶುಪಾಲನೆ ಬಗ್ಗೆ ತುಂಬಾ ಆಸಕ್ತಿ. ರಾಸುಗಳ ಪೋಷಣೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ.

ತಮ್ಮಲ್ಲಿರುವ 6-7 ಎಕರೆ ತೆಂಗು ಹಾಗೂ ಅಡಕೆ ತೋಟದ ಮಧ್ಯ ಮೇವು ಬೆಳೆಯುವ ಇವರು ಅದನ್ನು ಹಸುಗಳಿಗೆ ನೀಡುತ್ತಿದ್ದಾರೆ. ಹನಿ ನೀರಾವರಿ, ಸ್ಪ್ರಿಂಕ್ಲರ್ ವ್ಯವಸ್ಥೆಯಿಂದ ನೀರಾವರಿ ಸೌಲಭ್ಯ ಹೊಂದಿರುವ ಇವರು ತೋಟದಲ್ಲಿಯೇ ಹಸುಗಳನ್ನು ಮೇಯಲು ಬಿಡುತ್ತಾರೆ. ಇದರಿಂದ ಸಗಣಿ ಗಂಜಲ ಅಲ್ಲೇ ಗೊಬ್ಬರವಾಗಿ ಉಪಯೋಗವಾಗುತ್ತಿದೆ. ವರ್ಷಕ್ಕೆ 25 ಲೋಡ್ ಕೊಟ್ಟಿಗೆ ಗೊಬ್ಬರ ಲಭ್ಯವಾಗುತ್ತಿದ್ದು, ಅವುಗಳನ್ನೂ ತಮ್ಮ ತೋಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಕಾಲ ಕಾಲಕ್ಕೆ ರಾಸುಗಳ ಲಸಿಕೆ ಹಾಗೂ ಜಂತು ನಿವಾರಕ ಔಷಧಿಗಳನ್ನು ನೀಡುತ್ತಾರೆ ಹಾಗೂ ವಾರಕೊಮ್ಮೆ ಎಲ್ಲ ರಾಸುಗಳಿಗೆ ಮೊಳಕೆ ಭರಿಸಿದ ದ್ವಿದಳ ಧಾನ್ಯಗಳನ್ನು ನೀಡುತ್ತಾರೆ. ಪಶು ಆಹಾರಗಳನ್ನು ನಿಯಮಿತವಾಗಿ ನೀಡುತ್ತಿದ್ದು, ಯಾವುದೇ ಕಾಯಿಲೆ ಇಲ್ಲ ಎನ್ನುತ್ತಾರೆ ಕಲ್ಲೇಶ್.

ಹಾಲು ಕರೆಯಲು ಕೈಚಾಲಿತ ಯಂತ್ರವನ್ನು ಉಪಯೋಗಿಸಲಾಗುತ್ತಿದೆ. ಹಸುಗಳ ಸಕಲ ಕೆಲಸಗಳನ್ನು ಇವರ ಮನೆಯಲ್ಲಿ ಸಾಕು ಮಕ್ಕಳಾಗಿ ಬೆಳೆದ ರತ್ನಮ್ಮ ಹಾಗೂ ಜಯಮ್ಮ ಅವರೇ ನಿರ್ವಹಿಸುತ್ತಾರೆ.

ಉದ್ಯೋಗ ಅರಸಿ ಪಟ್ಟಣಗಳಿಗೆ ಹೋಗುತ್ತಿರುವ ಯುವ ಜನರು, ಗ್ರಾಮೀಣ ಸೌಲಭ್ಯಗಳನ್ನೇ ಬಳಸಿಕೊಂಡು ಆರ್ಥಿಕ ಉನ್ನತಿ ಸಾಧಿಸಬಹುದು ಎನ್ನುವುದಕ್ಕೆ ಕಲ್ಲೇಶ್ ಅವರೇ ಸಾಕ್ಷಿ.

ಡಾ. ಸುಬ್ರಾಯ ಭಟ್ ಮುದ್ದಿನಪಾಲು 
 (ಲೇಖಕರು:  ತುಮಕೂರು ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರು (ಪ.ವೈ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT