ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ತೀರ್ಥ ಪ್ರವಾಹ ನೀರು ನುಗ್ಗಿ ಬೆಳೆ ನಾಶ

Last Updated 4 ಆಗಸ್ಟ್ 2013, 6:39 IST
ಅಕ್ಷರ ಗಾತ್ರ

ಹುಣಸೂರು: ಕೊಡಗಿನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ ಒಳಹರಿವಿನ ಮಟ್ಟ ಏರಿಕೆಯಾಗಿ ಹನಗೋಡು ಅಣೆಕಟ್ಟೆ ಹಿನ್ನಿರು ಹೆಚ್ಚಾಗಿ ನದಿ ಪಾತ್ರದ ಹೊಲ ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿದೆ.

ಹನಗೋಡು ಹೋಬಳಿಯ ಸಿಂಡೇನಹಳ್ಳಿ, ನೇಗತ್ತೂರು,ಬಿಲ್ಲೇನಹಳ್ಳಿ, ಬಿ.ಜಿ.ಹೆಬ್ಬನಕುಪ್ಪೆ, ಹಿಂಡಗೂಡ್ಲು,  ದೊಡ್ಡಹೆಜ್ಜೂರು, ಮುದಗನೂರು, ಕಿರಂಗೂರು, ಕೊಣನಹೊಸಹಳ್ಳಿ,  ಕೊಳವಿಗೆ,  ಹೆಗ್ಗಂದೂರು,ದಾಸನಪುರ, ಚಿಕ್ಕಹೆಜ್ಜೂರು,  ವಂಡಂಬಾಳು ಗ್ರಾಮಗಳಿಗೆ ನದಿ ನೀರು ಹರಿದು ರೈತ ಬೆಳೆದಿದ್ದ ಮುಸುಕಿನ ಜೋಳ, ಶುಂಠಿ, ಅರಿಶಿನ, ತಂಬಾಕು, ಬತ್ತ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳು ನೀರಿನಲ್ಲಿ ಮುಳುಗಡೆಯಾಗಿ ಕೊಳೆತು ನಾಶವಾಗಿದೆ.

ನದಿ ನೀರಿನಲ್ಲಿ ಮುಳುಗಡೆಗೊಂಡ ಹೊಲದಲ್ಲಿ ಬೆಳೆದಿದ್ದ ಫಸಲು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ವಾಣಿಜ್ಯ ಬೆಳೆಗಳಿಗೂ ಪ್ರಕೃತಿ ವಿಕೋಪ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಹಶೀಲ್ದಾರ್‌ಭೇಟಿ: ತಾಲ್ಲೂಕು   ತಹಶೀಲ್ದಾರ್ ಶಿವಾನಂದಮೂರ್ತಿ ಮತ್ತು ಉಪವಿಭಾಗಾಧಿಕಾರಿ ವಿನೂತ್‌ಪ್ರಿಯಾ ಹನಗೋಡು ಹೋಬಳಿಯ ನದಿ ಪಾತ್ರದಲ್ಲಿ ಮುಳುಗಡೆಯಾಗಿರುವ ಹೊಲ ಗದ್ದೆ ಪ್ರದೇಶಕ್ಕೆ ಭೇಟಿ ನೀಡಿದರು.

ಉಪವಿಭಾಗಾಧಿಕಾರಿ ವಿನೂತ್‌ಪ್ರಿಯಾ ರೈತರೊಂದಿಗೆ ಮಾತನಾಡಿ, ಸರ್ಕಾರಕ್ಕೆ ನದಿ ಪಾತ್ರದಲ್ಲಿ ಸಂಭವಿಸಿರುವ ನಷ್ಟದ ವರದಿಯನ್ನು ಕಳುಹಿಸಿ ಪರಿಹಾರ ನೀಡಲು ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಹರಿದು ಬಂದ ದಿಮ್ಮಿಗಳು: ನಾಗರಹೊಳೆ ಅರಣ್ಯದೊಳಗಿನಿಂದ ಹರಿದು ಬರುತ್ತಿರುವ ಲಕ್ಷ್ಮಣತೀರ್ಥ ನದಿಯಲ್ಲಿ ಕಾಡಿನಿಂದ ಮರದ ದಿಮ್ಮಿ ಹಾಗು ಬಿದಿರಿನ ಗುತ್ತಿಗಳು ತೇಲಿ ಬರುತ್ತಿದೆ. ಕಳೆದ ಸಾಲಿನಲ್ಲಿ ಕಾಡಿನಲ್ಲಿ ಬಿದಿರಿನ ಮೆಳೆ ಒಣಗಿದ್ದು, ಈ ಭಾರಿಯ ಮಳೆಗೆ ಕೊಚ್ಚಿಕೊಂಡು ಬರುತ್ತಿದೆ.

ಬಾಗಿದ ವಿದ್ಯುತ್ ಕಂಬಗಳು: ನೇರಳಕುಪ್ಪೆ ಗ್ರಾಮ ಪಂಚಾಯಿತಿಯ ಅಬ್ಬೂರು, ನೇರಳಕುಪ್ಪೆ, ದಾಸನಪುರ ಗ್ರಾಮಗಳ  ವ್ಯಾಪ್ತಿಯಲ್ಲಿ ನಿರಂತರ ಮಳೆ ಬೀಳುತ್ತಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ವಿದ್ಯುತ್ ಕಂಬಗಳು ಅಪಾಯಕಾರಿ ರೀತಿಯಲ್ಲಿ ಬಾಗುತ್ತಿವೆ. ಇವುಗಳಿಂದ ಅಪಾಯ ಕಾದಿದೆ ಎಂದು ನೇರಳಕುಪ್ಪೆ ಮಹದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT