ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ ಕಟಾಕ್ಷ ವಂಚಿತ ಷೇರುಪೇಟೆ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸಂಪತ್ತಿನ ಅಧಿದೇವತೆ ಲಕ್ಷ್ಮೀಳನ್ನು ವರ್ತಕರು ದೀಪಾವಳಿ ಸಂದರ್ಭದಲ್ಲಿ ಪೂಜಿಸಿ ಸಂಪತ್ತು ವೃದ್ಧಿಗೆ ಬೇಡಿಕೊಳ್ಳುತ್ತಿದ್ದರೂ, ಕಳೆದ ದೀಪಾವಳಿ ಇಂದೀಚೆಗೆ ಷೇರುಪೇಟೆ ವಹಿವಾಟು ವರ್ತಕರ ಪಾಲಿಗೆ ಉತ್ತೇಜನಕಾರಿಯಾಗಿಲ್ಲ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಷೇರುಗಳ ಒಟ್ಟಾರೆ ಮಾರುಕಟ್ಟೆ ಲೆಕ್ಕದಲ್ಲಿ ಕಳೆದ ಒಂದು ವರ್ಷದಲ್ಲಿ ಎಲ್ಲ ಹೂಡಿಕೆದಾರರ ಒಟ್ಟು ಸಂಪತ್ತು ರೂ 17 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ.

2010ರ ನವೆಂಬರ್ 5 ರಿಂದ ಇಲ್ಲಿಯವರೆಗೆ ನಡೆದ ಒಟ್ಟು 239  ವಹಿವಾಟು ದಿನಗಳಲ್ಲಿ ಪ್ರತಿ ದಿನ ಸರಾಸರಿ ಆರೂವರೆ ಗಂಟೆಗಳ ಕಾಲ ನಡೆದ ವಹಿವಾಟಿನಲ್ಲಿ ಪ್ರತಿ ಗಂಟೆಗೆ ಸರಾಸರಿ ್ಙ 1,094 ಕೋಟಿಗಳಷ್ಟು ನಷ್ಟ ಉಂಟಾಗಿದೆ.

ಈ ವರ್ಷ ಸಂವೇದಿ ಸೂಚ್ಯಂಕವು ಇದುವರೆಗೆ ಶೇ 20ರಷ್ಟು ಕುಸಿತ ಕಂಡಿದೆ. ಕಳೆದ ದೀಪಾವಳಿ ಹೊತ್ತಿಗೆ ಇದ್ದ ಸಂಪತ್ತಿನಲ್ಲಿ ಹೂಡಿಕೆದಾರರು ಒಂದು ಐದಾಂಶದಷ್ಟು ಸಂಪತ್ತು ಕಳೆದುಕೊಂಡಿದ್ದಾರೆ. ಸದ್ಯಕ್ಕೆ 16,785.64 ಅಂಶಗಳಿರುವ ಸಂವೇದಿ ಸೂಚ್ಯಂಕವು ಒಂದು ವರ್ಷದಲ್ಲಿ 4,219.32 ಅಂಶಗಳಿಗೆ ಎರವಾಗಿದೆ. ಕಳೆದ ದೀಪಾವಳಿಯ ಮುಹೂರ್ತ ವ್ಯಾಪಾರದಲ್ಲಿ ಸೂಚ್ಯಂಕವು 21,004.96 ಅಂಶಗಳವರೆಗೆ ಏರಿಕೆಯಾಗಿತ್ತು.

ನಿರುತ್ಸಾಹದ ವಹಿವಾಟಿನಲ್ಲಿ  ಅನೇಕ ಷೇರುಗಳ ಬೆಲೆಗಳು 52 ವಾರಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಹೀಗಾಗಿ ಹೂಡಿಕೆದಾರರ ಪಾಲಿಗೆ ವಹಿವಾಟಿನ ಅನುಭವವು ತುಂಬ ಗೊಂದಲಕಾರಿಯಾಗಿತ್ತು ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಗರಿಷ್ಠ ಮಟ್ಟದ ಹಣದುಬ್ಬರ, ಹೆಚ್ಚುತ್ತಿರುವ ಬಡ್ಡಿ ದರಗಳು, ಉದ್ದಿಮೆ ಸಂಸ್ಥೆಗಳ ಹಣಕಾಸು ಸಾಧನೆ ಕುಸಿದಿರುವುದು, ಆರ್ಥಿಕ ವೃದ್ಧಿ ದರ ಕುಂಠಿತಗೊಂಡಿರುವುದು, ರಾಜಕೀಯ ವಿದ್ಯಮಾನಗಳು ಮಾರುಕಟ್ಟೆಯಲ್ಲಿನ ಉತ್ಸಾಹ ಉಡುಗಿಸಿವೆ.

ವರ್ತಕರು ಮತ್ತು ಷೇರು ದಲ್ಲಾಳಿಗಳಿಗೆ ಈ ದೀಪಾವಳಿಯ ಹೊಸ ವರ್ಷವು ಕೆಲ ಮಟ್ಟಿಗೆ ಅದೃಷ್ಟ ತಂದುಕೊಡಲಿದೆ ಎಂದೂ ನಿರೀಕ್ಷಿಸಲಾಗಿದೆ.

ದೀಪಾವಳಿಯ ಹೊಸ ವರ್ಷದ ದ್ವಿತೀಯ ತ್ರೈಮಾಸಿಕದ ನಂತರ ಪೇಟೆಯಲ್ಲಿ ಖರೀದಿ ಉತ್ಸಾಹ ಮರಳಲಿದೆ. ಮುಂದಿನ ದೀಪಾವಳಿ ಹೊತ್ತಿಗೆ ಸಂವೇದಿ ಸೂಚ್ಯಂಕವು 18,500 ರಿಂದ 18,700 ಅಂಶಗಳಿಗೆ ಏರಿಕೆಯಾಗಬಹುದು ಎಂದು ಕೇಜ್ರಿವಾಲ್ ರಿಸರ್ಚ್ ಆಂಡ್ ಇನ್‌ವೆಸ್ಟ್‌ಮೆಂಟ್ ಸರ್ವಿಸಸ್‌ನ ನಿರ್ದೇಶಕ ಅರುಣ ಕೇಜ್ರಿವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT