ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಗೌಡ ಅಮಾನತು ಖಂಡಿಸಿ ಪ್ರತಿಭಟನೆ

Last Updated 17 ಜನವರಿ 2012, 8:30 IST
ಅಕ್ಷರ ಗಾತ್ರ

ಪಾಂಡವಪುರ: ಇಲ್ಲಿನ ಸರ್ಕಲ್ ಇನ್ಸ್ ಪೆಕ್ಟರ್ ಬಿ.ಬಿ.ಲಕ್ಷ್ಮೇಗೌಡ ಅವರನ್ನು ಅಮಾನತು ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಕ್ರಮ ಖಂಡಿಸಿ ನಾಗರಿಕರು ಪಕ್ಷಾತೀತವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾಯಿಸಿದ ನಾಗರಿಕರು ಮಾನವ ಸರಪಳಿ ರಚಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆಯ ಮೂಲಕ ಪೊಲೀಸ್ ಠಾಣೆಗೆ ತೆರಳಿ ಅಮಾನತು ಆದೇಶ ರದ್ದುಪಡಿಸಿಬೇಕು ಎಂದು ಆಗ್ರಹಿಸಿದರು.

ಅಪಘಾತವೊಂದರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಐ ಲಕ್ಷ್ಮೇಗೌಡ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಈ ನಿರ್ಧಾರ ಸಾರ್ವಜನಿಕರಲ್ಲಿ ಅಸಮಾಧಾನ ಹಾಗೂ ಅನುಮಾನ ಮೂಡಿಸುತ್ತಿದೆ. ಎಲೆಕೆರೆ-ಹಾರೋಹಳ್ಳಿ ಮಧ್ಯೆ ಇರುವ ಸೇತುವೆ ಬಳಿ ದೇಶವಳ್ಳಿ ಗ್ರಾಮದ ವಿಜೇಂದ್ರ ಸಾವಿಗೀಡಾಗಿರುವುದು ಅಪಘಾತ ಅಥವಾ ಕೊಲೆಯಿಂದಲೋ ಎಂಬುದು ತನಿಖೆ ನಡೆಯುತ್ತಿರುವಾಗಲೇ ಸಿಪಿಐ ಲಕ್ಷ್ಮೇಗೌಡ ಅವರನ್ನು ಅಮಾನತುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕರ ಕಛೇರಿಯಾಗಿ ಮೇಲ್ದರ್ಜೆಗೇರಿಸಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಬೇಕಾಗಿದೆ. ಅಲ್ಲದೆ ಪದೇ ಪದೇ ಸಿಪಿಐ ಮತ್ತು ಎಸ್‌ಐ ಗಳನ್ನು ಬದಲಾಯಿಸದೆ ಗರಿಷ್ಠ ದಿನಗಳವರೆಗೆ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಡಿವೈಎಸ್‌ಪಿ ಕಲಾ ಕೃಷ್ಣಸ್ವಾಮಿ ಪ್ರತಿಭಟನಾಕಾರರ ಮನವಿ ಪತ್ರವನ್ನು ಪಡೆದು ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಅಂತ್ಯಗೊಂಡಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಕೃಷ್ಣ, ಪ.ಪಂ.ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್, ಬಿಜೆಪಿ ಮುಖಂಡರಾದ ನಾಗಣ್ಣ, ರಮೇಶ್, ಜೆಡಿಎಸ್ ಮುಖಂಡರಾದ ಹಿರೀಮರಳಿ ಚನ್ನೇಗೌಡ, ಗಿರೀಶ್, ಚೇತನ್‌ಕುಮಾರ್, ಮನ್‌ಮುಲ್ ನಿರ್ದೇಶಕ ಎಲ್.ಸಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ದೇವರಾಜು, ಗ್ರಾ.ಪಂ.ಸದಸ್ಯ ಎಚ್.ವಿ.ಪ್ರಕಾಶ್, ಚಿಕ್ಕಾಡೆ ಮಹೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬಂಧನ: ತಾಲ್ಲೂಕಿನ ಎಲೆಕೆರೆ-ಹಾರೋಹಳ್ಳಿ ನಡುವೆ ಇರುವ ಸೇತುವೆ ಬಳಿ ಈಚೆಗೆ ನಡೆದಿದ್ದ ಅಪಘಾತ ಪ್ರಕರಣ ಹೊಸ ತಿರುವು ಪಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವಿಜೇಂದ್ರನ ತಂದೆ ಇದು ಪೂರ್ವ ನಿಯೋಜಿತ ಕೊಲೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸುತ್ತಿದ್ದ ಡಿಸಿಐಬಿ ಪೊಲೀಸ್ ಅಧಿಕಾರಿ ನಾಗೇಗೌಡ ಅವರು ದೇಶವಳ್ಳಿಯ ಚನ್ನೇಗೌಡ ಹಾಗೂ ಮಾರಗೊಂಡನಹಳ್ಳಿಯ ಸುಜಾತ ಅವರುಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT