ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ ಪುರಸಭೆಗೆ ಬೀಗ: ಪ್ರತಿಭಟನೆ

Last Updated 27 ಸೆಪ್ಟೆಂಬರ್ 2011, 6:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 13-14 ದಿನಗಳಿಂದ ಕುಡಿಯುವ ನೀರು ಪೂರೈಸದಿರುವ ಪುರಸಭೆ ಕಾರ್ಯವೈಖರಿಗೆ ರೋಸಿಹೋದ ಜನರು ಸೋಮವಾರ ಪುರಸಭೆಗೆ ಆಗಮಿಸಿ ಘೋಷಣೆ ಕೂಗಿ ನೀರು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿಲ್ಲದೆ ಸಹನೆ ಕಳೆದುಕೊಂಡಿದ್ದ ಜನತೆ ಪುರಸಭೆ ಕಚೇರಿ ಆವರಣದಲ್ಲಿನ ಹೂವಿನ ಕುಂಡಗಳನ್ನು ಎತ್ತಿ ಬಿಸಾಕಿ ತಮ್ಮ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ನಂತರ ಪುರಸಭೆ ಎದುರು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

 ~15 ದಿನಗಳಿಂದ ನೀರಿಲ್ಲದೆ ಪಟ್ಟಣದ ಜನರು ಬವಣೆ ಪಡುತ್ತಿದ್ದಾರೆ. ಆದರೆ ಪುರಸಭೆಯಲ್ಲಿ ಕುಳಿತು ನೀವೇನು ಮಾಡುತ್ತಿದ್ದೀರಿ. ಮೂಲ ಸೌಕರ್ಯಗಳಲ್ಲಿ ನೀರು ಅತಿ ಅವಶ್ಯವಾಗಿದ್ದು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ಸಮಪರ್ಕವಾಗಿ ನೀರು ಪೂರೈಸಲು ಕ್ರಮಕೈಗೊಳ್ಳದಿರುವುದೇ ಸಮಸ್ಯೆಗೆ ಕಾರಣವಾಗಿದೆ~ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸೋಮು ಪಾಟೀಲ, ರಾಘವೇಂದ್ರ ಪೂಜಾರ, ಗಂಗಾಧರ ಬಾಳಿಕಾಯಿ, ಸತೀಶ ಮೆಕ್ಕಿ, ನಾಗರಾಜ ಚಿಂಚಲಿ, ಶರಣು ಗೋಡಿ, ವೆಂಕಟೇಶ ಕಳ್ಳಿಮನಿ ಸೇರಿದಂತೆ ಮತ್ತಿತರರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ಪುರಸಭೆ ಸಿಬ್ಬಂದಿಯನ್ನು ಹೊರ ಹಾಕಿ ಬೀಗ ಜಡಿದು ಪ್ರತಿಭಟನೆಗೆ ಮುಂದಾದರು.

ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ ಅವರು ಜನರನ್ನು ಸಮಾಧಾನ ಪಡಿಸಲು ಪ್ರಯತ್ನಸಿದಾಗ ಸಹನೆ ಕಳೆದುಕೊಂಡಿದ್ದ ಪ್ರತಿಭಟನಾಕಾರರು `ಮೊದಲು ಪುರಸಭೆ ಸಿಬ್ಬಂದಿ ಹೊರ ನಡೆಯಿರಿ~ ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಸಿಬ್ಬಂದಿ ಹಾಗೂ ಕೆಲ ಸದಸ್ಯರು ಪುರಸಭೆಯಿಂದ ಹೊರ ಬಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ ಜನರನ್ನು ಸಮಾಧಾನ ಮಾಡಲು ಮುಂದಾದಾಗ `ನೀರು ಪೂರೈಕೆಯಲ್ಲಿ ಬೇಜವಾಬ್ದಾರಿ ತೋರಿದ್ದರಿಂದ ಮೊದಲು ಪಟ್ಟಣದ ಜನತೆಯಲ್ಲಿ ಕ್ಷಮೆಯಾಚಿಸಬೇಕು~ ಎಂದು ಪ್ರತಿಭಟನಾಕಾರರು ಕೂಗಿದರು.
 
ಅವರ ಒತ್ತಡಕ್ಕೆ ಮಣಿದ ಅಧ್ಯಕ್ಷರು ಜನತೆಗಾದ ವಿಳಂಬಕ್ಕೆ ವಿಷಾದಿಸಿ `ಮೋಟಾರ್ ದುರಸ್ತಿ ಕಾರ್ಯ ಮುಗಿದಿದ್ದು ಮಂಗಳವಾರದಿಂದ ನೀರು ಪೂರೈಕೆ ಮತ್ತೆ ಎಂದಿನಂತೆ ಆರಂಭವಾಗಲಿದೆ. ಕಾರಣ ಪ್ರತಿಭಟನೆ ಹಿಂತೆಗೆದುಕೊಳ್ಳಬೇಕು~ ಎಂದು ಮನವಿ ಮಾಡಿದರು.
 
ನೀರು ಬಿಡುವ ಕುರಿತು ಲಿಖಿತ ಪ್ರತಿ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಆಗ ಮಧ್ಯ ಪ್ರವೇಶಿಸಿದ ಪುರಸಭೆ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ ಮಂಗಳವಾರ ಸಂಜೆಯೊಳಗಾಗಿ ನೀರು ಬಿಡುವ ಬಗ್ಗೆ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ಬಸಣ್ಣ ಪುಠಾಣಿ, ಸುರೇಶ ಅಂಗಡಿ, ಯಲ್ಲಪ್ಪ ಚಕ್ರಸಾಲಿ, ಮಂಜುನಾಥ ಪಾಟೀಲ, ರಮೇಶ ಪಾಟೀಲ, ಚಿದಾನಂದ ಹುಳ್ಳಿ, ಈರಣ್ಣ ತೆಗ್ನಳ್ಳಿ, ಈಶ್ವರ ಗದಗ, ಈರಪ್ಪ ಬೆಲ್ಲದ, ರುದ್ರಪ್ಪ ಸಂಶಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT