ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಹೊಲಗಳಿಗೆ ನುಗ್ಗಿದ ನೀರು

ವರುಣನ ಆರ್ಭಟಕ್ಕೆ ರೈತರು ತತ್ತರ: ಲಕ್ಷಾಂತರ ರೂಪಾಯಿ ನಷ್ಟ
Last Updated 14 ಸೆಪ್ಟೆಂಬರ್ 2013, 9:58 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಳೆದ ಮೂರು ದಿನಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು ನೂರಾರು ಎಕರೆ ಹೊಲಗಳಲ್ಲಿ ಬೆಳೆ ನೀರಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿ ಹತ್ತಾರು ಮನೆಗಳು ಧರೆಗೆ ಉರುಳಿವೆ. 

ಎರಡು ದಿನ ಸುರಿದ ಮಳೆಗೆ ಲಕ್ಷ್ಮೇಶ್ವರ ಹೊರವಲಯದ ಲಂಡಿಹಳ್ಳಿ ತುಂಬಿ ಸಮೀಪದ ಅಡರಕಟ್ಟಿ ಗ್ರಾಮಕ್ಕೆ ಸೇರಿದ ಅಂದಾಜು 50 ಎಕರೆ ಹೊಲಕ್ಕೆ ನೀರು ನುಗ್ಗಿ ಕೊಯ್ಲಿಗೆ ಸಿದ್ಧವಾಗಿದ್ದ ಈರುಳ್ಳಿ, ಗೋವಿನಜೋಳ, ಕಂಠಿಶೇಂಗಾ, ಬಿಟಿ ಹತ್ತಿ ಬೆಳೆಗಳಿಗೆ ಭಾರೀ ಧಕ್ಕೆ ತಟ್ಟಿದ್ದು ರೈತರಿಗೆ ನಷ್ಟ ಉಂಟಾಗಿದೆ. 

ಗ್ರಾಮದ ರವಿ ಚೆನ್ನಪ್ಪ ಹವಳದ ಎಂಬುವವರು ಗುರುವಾರ ಈರುಳ್ಳಿ ಕಿತ್ತು ಹೊಲದಲ್ಲಿ ಇಟ್ಟಿದ್ದರು. ಆದರೆ ಅದೇ ದಿನ ರಾತ್ರಿ ಸುರಿದ ಮಳೆಗೆ ಲಂಟಿಹಳ್ಳ ತುಂಬಿ ಬಂದಿದ್ದರಿಂದ ಈರುಳ್ಳಿ ಅಂದಾಜು ಒಂದು ಕಿಮೀವರೆಗೆ ತೇಲಿಕೊಂಡು ಹೋಗಿವೆ. ತೇಲಿ ಬಂದ ಈರುಳ್ಳಿಯನ್ನು ಹೊಲದಲ್ಲಿ ಮೊಣ ಕಾಲವರೆಗೆ ನೀರಿದ್ದರೂ ಅದರಲ್ಲಿಯೇ ರೈತರು ಆರಿಸುತ್ತಿದ್ದುದು ಶುಕ್ರವಾರ ಕಂಡು ಬಂದಿತು.

ಅದರಂತೆ ಪ್ರಶಾಂತ ಹವಳದ ಅವರಿಗೆ ಸೇರಿದ ಮೂರು ಎಕರೆ, ಮೌನೇಶ ಹವಳದರ ಒಂದು ಎಕರೆ, ರಾಮಣ್ಣ ಫಕ್ಕೀರಪ್ಪ ಹವಳದ ಅವರಿಗೆ ಸೇರಿದ ಹೊಲಕ್ಕೆ ಸಾಕಷ್ಟು ನೀರು ನುಗ್ಗಿ ಅಂದಾಜು 300 ಕ್ವಿಂಟಲ್ ಈರುಳ್ಳಿ ಬೆಳೆ ನಾಶವಾಗಿದೆ.

ಅಲ್ಲದೆ ಅದೇ ಗ್ರಾಮದ ಹಾಲಪ್ಪ ದೇವರಮನಿ ಅವರಿಗೆ ಸೇರಿದ ಒಂದು ಎಕರೆ ಬಿಟಿ ಹತ್ತಿ, ರವಿ ಹವಳದ ಅವರ ಮೂರು ಎಕರೆ ಗೋವಿನಜೋಳ ನಿಂಗನ ಗೌಡ ಪಾಟೀಲರ ಬಿಟಿ ಹತ್ತಿ ಹೊಲಗಳು ಸಂಪೂರ್ಣವಾಗಿ ಜಲಾವೃತ ವಾಗಿವೆ. ಹಾಗೆಯೇ ಮೂರು ಎಕರೆ ಹೊಲದಲ್ಲಿನ ಮಂಟೂರ ಅವರಿಗೆ ಸೇರಿದ ಕಂಠಿಶೇಂಗಾ ನೀರಿನ ಪಾಲಾಗಿದ್ದು 'ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬ ಸ್ಥಿತಿ ಇಲ್ಲಿನ ರೈತರಿಗೆ ಬಂದೊದಗಿದೆ.

'ಉಳ್ಳಾಗಡ್ಡಿ ಹೊಲಕ್ಕ ಭಾಳ ರೊಕ್ಕಾ ಖರ್ಚ ಮಾಡೇವ್ರೀ. ಆದ್ರ ಎಲ್ಲಾ ಪೀಕು ನೀರಿನ್ಯಾಗ ಸಿಕ್ಕೊಂಡೈತಿ' ಎಂದು ಯುವ ರೈತ ಮೌನೇಶ ಹವಳದ ಅವರು ಶುಕ್ರವಾರ ಪ್ರಜಾವಾಣಿ ಎದುರು ತಮ್ಮ ಅಳಲು ತೋಡಿಕೊಂಡರು.

'ಮಳಿ ಬಂದಾಗೊಮ್ಮೆ ಲಂಡಿಹಳ್ಳದ ನೀರು ನಮ್ಮ ಹೊಲಕ್ಕ ನುಗ್ಗತೈತಿ. ಹಿಂಗಾಗಿ ಇಪ್ಪತ್ತು ಮೂವತ್ತು ಎಕರೆ ಹೊಲ ಜವುಳ ಆಗೇತಿ' ಎಂದು ರವಿ ಹವಳದ ಪರಿಸ್ಥಿತಿ ಕುರಿತು ವಿವರಿಸುತ್ತಾರೆ.

'ಇನ್ನ ಎರಡ ದಿನಾ ಆಗಿದ್ರ ಉಳ್ಳಾಗಡ್ಡಿ ಕೀಳತಿದ್ವಿ. ಆದ್ರ ಗುರುವಾರ ರಾತ್ರಿ ದೊಡ್ಡ ಮಳಿ ಬಂದು ನಮ್ಮ ಹೊಲ ನೀರನ್ಯಾಗ ನಿಂತೈತಿ' ಎಂದು ಸಿದ್ಧೇಶ ಹವಳದ ತಮ್ಮ ನೋವು ತೋಡಿ ಕೊಂಡರು.

ಇಷ್ಟೆ ಅಲ್ಲದೆ ಬುಧವಾರ ಹಾಗೂ ಗುರುವಾರ ಸುರಿದ ಮಳೆಗೆ ಅಡರಕಟ್ಟಿ ಲಂಬಾಣಿ ತಾಂಡಾದಲ್ಲಿ ಉಮಲೆಪ್ಪ ಹೀರಪ್ಪ ಲಮಾಣಿ, ಶಿವಪ್ಪ ಹಲರ್ಪುರ, ಬಸಪ್ಪ ಹಡಪದ ಅವರ ಮನೆಗಳು ಬಿದ್ದಿವೆ. ಎರಡು ದಿನ ಸುರಿದ ಮಳೆ ತಾಲ್ಲೂಕಿನಲ್ಲಿ ಭಾರಿ ಅನಾ ಹುತವನ್ನೇ ಸೃಷ್ಟಿಸಿದೆ.

ಕೊಚ್ಚಿ ಹೋದ ಬೆಳೆ: ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಮೀಪದ ಹುಲ್ಲೂರು ಹಳ್ಳದ ಪ್ರವಾಹದಲ್ಲಿ ರೈತರ ಬೆಳೆ ಕೊಚ್ಚಿ ಹೋಗಿ ಹಾನಿ ಸಂಭವಿಸಿದೆ.

ಲಕ್ಷ್ಮೇಶ್ವರ-ಬೆಳ್ಳಟ್ಟಿ ಮಧ್ಯದಲ್ಲಿ ಹರಿ ಯುವ ಹುಲ್ಲೂರು ಹಳ್ಳಕ್ಕೆ ಗುರುವಾರ ಪ್ರವಾಹ ಬಂದಿದ್ದು ಬೂದಿಹಾಳ ಸರ ಹದ್ದಿಯಲ್ಲಿನ ಭಜನಪ್ಪ ಬೀರಪ್ಪ ಲಮಾಣಿ ಇವರಿಗೆ ಸೇರಿದ ಹೊಲಕ್ಕೆ ನೀರು ನುಗ್ಗಿದ್ದು ಬೆಳೆದು ನಿಂತಿದ್ದ ಬೆಳೆ ಗಳೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಲ್ಲದೆ ಹೊಲದಲ್ಲಿದ್ದ ನೀರೆತ್ತುವ ಮೋಟಾರ್ ಹಾಗೂ ಸ್ಟಾರ್ಟರ್ ಮೇಲೆ ಸುಮಾರು ಐದು ಅಡಿಗಳಷ್ಟು ನೀರು ಹರಿದು ಹೋಗಿದೆ. ಭಾರಿ ಮಳೆಗೆ ಬೆಳೆ ನಾಶವಾಗಿದ್ದು ನಮಗೆ ಸೂಕ್ತ ಪರಿಹಾರ ನೀಡಬೇಕು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT