ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾದೀದಿ ಉರ್ದು ಪರ್ವ!

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಸಿನಿಮಾರಂಗ ಅದೇ ತಾನೆ ಬೇರೂರತೊಡಗಿದ್ದ ಕಾಲ. ಮುಂಬಯಿ ಹಿಂದಿ ಚಿತ್ರರಂಗದ ಕೇಂದ್ರವಾಗಿ ಬೆಳೆಯತೊಡಗಿತ್ತು. ಆಗೆಲ್ಲ ಕೆ.ಎಲ್.ಸೈಗಲ್‌ನಂಥ ಶ್ರೇಷ್ಠ ಗಾಯಕರು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರ ಪ್ರಭಾವ ಎಷ್ಟು ದಟ್ಟವಾಗಿತ್ತೆಂದರೆ, ಮುಖೇಶ್‌ನಂಥ ಗಾಯಕರು ಸಹ ಸೈಗಲ್‌ರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದರು. ಭಾರತರತ್ನ ಲತಾ ಮಂಗೇಶ್ಕರ್ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟದ್ದು ಇಂಥ ಸಂದರ್ಭದಲ್ಲಿ.

ಲತಾ ಮಂಗೇಶ್ಕರ್ ಹೆಸರು ಅದೇ ತಾನೆ ಚಿತ್ರರಂಗದಲ್ಲಿ ಕೇಳಿಬರತೊಡಗಿತ್ತು. ಕೆಲವಂ ಬಲ್ಲವರಿಂದ ಕಲಿತು ಪಕ್ವಗಾಯಕಿಯಾಗಲು ಆಕೆ ಹವಣಿಸುತ್ತಿದ್ದ ದಿನಗಳವು. ಲತಾಗೆ ಆತ್ಮೀಯರಾದ, ಆಕೆಯ ಪ್ರತಿಭೆಯನ್ನು ಗುರುತಿಸಿದ ಕೆಲವು ಸಂಗೀತ ನಿರ್ದೇಶಕರು ಆಕೆಗೆ ಮಾರ್ಗದರ್ಶನ ಮಾಡುತ್ತಿದ್ದ ಕಾಲ. ಆಗೆಲ್ಲ ಗಾಯಕರು, ಮಹಾನ್ ನಟರು ಕಾರುಗಳನ್ನು ಹೊಂದಿರಲಿಲ್ಲ. ಮುಂಬಯಿ ಜೀವನಾಡಿ ಎನಿಸಿರುವ ಲೋಕಲ್ ರೈಲುಗಳಲ್ಲಿಯೇ ಓಡಾಡಬೇಕಿದ್ದ ಸ್ಥಿತಿಯಿತ್ತು. ಅಂಥ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರ ಜೀವನವನ್ನೇ ಬದಲಾಯಿಸಿದ ಒಂದು ಘಟನೆ ಜರುಗಿತು.

ಲತಾ ಮಂಗೇಶ್ಕರ್ ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಅವರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಂದು ದಿನ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಗೋರೆಗಾಂವ್‌ದಲ್ಲಿರುವ ಸ್ಟುಡಿಯೋಕ್ಕೆ ಅವರಿಬ್ಬರೂ ಹೊರಟಿದ್ದರು. ಇವರು ಕುಳಿತ ಬೋಗಿಯಲ್ಲಿ ಹಿಂದಿ ಚಿತ್ರದ ಸೂಪರ್‌ಸ್ಟಾರ್ ದಿಲೀಪ್‌ಕುಮಾರ್ ಕೂಡ ಪ್ರಯಾಣಿಸುತ್ತಿದ್ದರು. ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಲತಾ ಅವರನ್ನು ದಿಲೀಪ್‌ಕುಮಾರ್ ಅವರಿಗೆ ಪರಿಚಯಿಸಿದರು.

‘ಈಕೆ ಲತಾ ಮಂಗೇಶ್ಕರ್. ಪ್ರತಿಭಾವಂತ ಗಾಯಕಿ. ಹಿಂದಿ ಚಿತ್ರರಂಗದ ಭರವಸೆ’.ಲತಾ ಪರವಾಗಿ ಅನಿಲ್ ಬಿಸ್ವಾಸ್ ಪ್ರಶಂಸೆಯ ಮಾತುಗಳನ್ನಾಡಿದರು.ಎಲ್ಲವನ್ನೂ ಶಾಂತವಾಗಿ ಕೇಳಿದ ದಿಲೀಪ್‌ಕುಮಾರ್ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದು ಹೀಗೆ-
‘ಅಲ್ಲಯ್ಯ- ನೀನು ಹೇಳುವುದೆಲ್ಲವೂ ಸರಿ. ಈಕೆ ಉಲಿಯುವ ಉರ್ದು ಕೇಳಬೇಕೆ? ಮಹಾರಾಷ್ಟ್ರದವರು ಉಲಿಯುವ ಉರ್ದು ಕೇಳುವುದಕ್ಕೆ ಹಿಂಸೆಯಾಗುತ್ತದೆ’.

ದಿಲೀಪ್‌ಕುಮಾರ್ ಮಾತಿನಿಂದ ಲತಾ ಮಂಗೇಶ್ಕರ್ ನೊಂದುಕೊಂಡರು. ಅವರ ಸ್ವಾಭಿಮಾನಕ್ಕೆ ಈ ಮಾತುಗಳು ತಗುಲಿದುವು. ತಕ್ಷಣ ಅವರು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡರು- ‘ಇಂಥ ಮಾತುಗಳನ್ನು ಜೀವಮಾನದಲ್ಲಿಯೇ ಯಾರಿಂದಲೂ ಕೇಳಬಾರದು’.

ಅಂದಿನ ಘಟನೆ ಲತಾ ಮಂಗೇಶ್ಕರ್ ಜೀವನವನ್ನೇ ಬದಲಾಯಿಸಿತು. ಅವರು ಹಟತೊಟ್ಟು ಉರ್ದು ಕಲಿಯತೊಡಗಿದರು. ಇದಕ್ಕಾಗಿ ಒಬ್ಬ ಮೌಲ್ವಿಯನ್ನು ನಿಯಮಿಸಿಕೊಂಡರು.ಪಟ್ಟುಬಿಡದೆ ಆ ಭಾಷೆಯನ್ನು ಒಲಿಸಿಕೊಂಡರು. ಮುಂದೆ ವೃತ್ತಿಜೀವನದಲ್ಲಿ ಈ ಸಾಧನೆ ಅವರಿಗೆ ಬಹು ಪ್ರಯೋಜನಕಾರಿ ಎನಿಸಿತು.

ಅಂದು ಲತಾ ಮಂಗೇಶ್ಕರ್ ಕುರಿತು ಲಘುವಾಗಿ ಮಾತನಾಡಿದ್ದ ದಿಲೀಪ್‌ಕುಮಾರ್ ಮುಂದೆ ಅವರ ಆತ್ಮೀಯರಲ್ಲಿ ಒಬ್ಬರೆನಿಸಿದರು. ಲತಾ ದಿಲೀಪ್‌ಕುಮಾರರನ್ನು ‘ಅಣ್ಣ’ ಎಂದು ಗೌರವಿಸಿದರು. ಪ್ರತಿವರ್ಷ ರಾಖಿ ಕಟ್ಟುವಷ್ಟು ಸಂಬಂಧ ಗಾಢವಾಯಿತು.ಬೇರೆ ಭಾಷೆಗಳಲ್ಲಿ ಹಾಡುವ ಸಂದರ್ಭ ಒದಗಿದಾಗಲೆಲ್ಲ ಲತಾ ಮಂಗೇಶ್ಕರ್‌ಗೆ ಅಂದಿನ ಘಟನೆ ನೆನಪಾಗುತ್ತಿತ್ತು.

ಅಂತೆಯೇ ಅವರು ತಾವು ಹಾಡಲಿರುವ ಭಾಷೆಯ ತಿರುಳನ್ನು ಅರಿಯಲು ಪ್ರಯತ್ನಿಸಿದ್ದಾರೆ. ‘ಸಂಗೊಳ್ಳಿ ರಾಯಣ್ಣ’ ಕನ್ನಡ ಸಿನಿಮಾಕ್ಕಾಗಿ ಹಾಡುವಾಗ ಕನ್ನಡವನ್ನೂ, ಭಗವದ್ಗೀತೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸಂಸ್ಕೃತವನ್ನು ಕಲಿತು-ಅರಿತು ಹಾಡಿದ್ದಾರೆ. ಅಂತೆಯೇ ಆ ಹಾಡುಗಳು ಇಂದಿಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ. ಅವರು ಹಾಡಿರುವ ಇತರ ಭಾಷೆಗಳ ಹಾಡುಗಳಿಗೂ ಈ ಮಾತು ಅನ್ವಯಿಸುತ್ತದೆ.

ದಿಲೀಪ್‌ಕುಮಾರರ ಅಂದಿನ ಮಾತು ಅವರನ್ನು ಸಾಧನೆಗೆ ತೊಡಗಿಸಿತು. ಭಾಷೆಯ ಮರ್ಯಾದೆಯನ್ನು ಪರಿಚಯಿಸಿತು.ಇಂದು ಲತಾದೀದಿ ಹಿಂದಿ ಸಿನಿಮಾರಂಗದಲ್ಲಿ ಹಿನ್ನೆಲೆ ಗಾಯನ ಕ್ಷೇತ್ರದ ಸಾಮ್ರಾಜ್ಞಿ ಎನಿಸಿದ್ದಾರೆ. ಭಾರತರತ್ನ ಪಡೆದಿರುವ ಇಬ್ಬರು ಮಹಾನ್ ಗಾಯಕಿಯರಲ್ಲಿ ಒಬ್ಬರೆನಿಸಿದ್ದಾರೆ. (ಇನ್ನೊಬ್ಬರು ಎಂ.ಎಸ್.ಸುಬ್ಬುಲಕ್ಷ್ಮಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT