ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಕಲೆಗಳ ಸಖ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರಿನ ರಾ. ಸತ್ಯನಾರಾಯಣ ಮತ್ತು ಬೆಂಗಳೂರಿನ ಮೈಸೂರು ವಿ. ಸುಬ್ರಹ್ಮಣ್ಯ ಅವರಿಗೀಗ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಸಮ್ಮಾನ. ಪ್ರದರ್ಶನ ಕಲಾಕ್ಷೇತ್ರದಲ್ಲಿನ ಸಾಧನೆಗಾಗಿ ಸತ್ಯನಾರಾಯಣ ಅವರಿಗೆ ‘ಅಕಾಡೆಮಿ ರತ್ನ’ ಪುರಸ್ಕಾರ ದೊರೆತಿದ್ದರೆ, ಇದೇ ಕ್ಷೇತ್ರದಲ್ಲಿನ ಸಮಗ್ರ ಸೇವೆಗಾಗಿ ಸುಬ್ರಹ್ಮಣ್ಯ ಅವರಿಗೆ ಅಕಾಡೆಮಿ ಪ್ರಶಸ್ತಿಯ ಗರಿ. ಪ್ರಶಸ್ತಿ ಪ್ರಭೆಯ ಹಿನ್ನೆಲೆಯಲ್ಲಿ ಅವರ ಬದುಕು–ಸಾಧನೆಯ ಕಿರುನೋಟ.

ಮನೆಯಲ್ಲಿ ಸದಾ ವೀಣೆಯ ನಾದ, ಸ್ವರಾಲಾಪದ ಅನುರಣನ, ಬಂದುಹೋಗುವ ಹತ್ತಾರು ಸಂಗೀತ ಸಾಧಕರು ಮತ್ತು ಕಲಿಯುವ ಆಕಾಂಕ್ಷಿಗಳ ಕಲರವ. ಇನ್ನೇನು ಬೇಕು ಆ ಮನೆಯ ಮಕ್ಕಳಿಗೆ ಸಂಗೀತ ಒಲಿಯಲು! ಇದು ಈ ವರ್ಷದ ಕೇಂದ್ರ ಸಂಗೀತ ನೃತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನರಾಗಿರುವ ಮೈಸೂರು ವಿ. ಸುಬ್ರಹ್ಮಣ್ಯ ಅವರ ಬಾಲ್ಯದ ಪರಿಸರ.

ಮೈಸೂರು ಅರಮನೆಯಲ್ಲಿ ‘ವೈಣಿಕ ಶಿಖಾಮಣಿ’ಯಾಗಿ ಪ್ರಸಿದ್ಧರಾಗಿದ್ದ ವೀಣೆ ಶೇಷಣ್ಣ ತಮ್ಮ ಮೊಮ್ಮಗ ವೆಂಕಟನಾರಾಯಣರಿಗೆ ಬಾಲ್ಯದಲ್ಲೇ ಸಂಗೀತವನ್ನು ಧಾರೆಯೆರೆದರು. ಮುಂದೆ ಅವರು ಗಾನಕಲಾಭೂಷಣ ಸ್ವರಮೂರ್ತಿ ವಿ.ಎನ್. ರಾವ್ ಎಂದು ಪ್ರಸಿದ್ಧರಾಗಿ ಮೈಸೂರು ವೀಣಾ ಬಾನಿಯ ಉತ್ತಮ ಪ್ರತಿಪಾದಕರಾದರು. ಅವರ ಮಗನಾದ ಸುಬ್ರಹ್ಮಣ್ಯ ಸಂಗೀತ ಮತ್ತು ಅದರ ಪ್ರಸಾರವನ್ನೇ  ವೃತ್ತಿಪ್ರವೃತ್ತಿಗಳಾಗಿ ಆಯ್ದುಕೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ.

ಹೆಸರಿನ ಜೊತೆ ಮೈಸೂರು ಸೇರಿದ್ದರೂ ಸುಬ್ರಹ್ಮಣ್ಯ ಬೆಳೆದದ್ದು ಬೆಂಗಳೂರಿನಲ್ಲಿ. ಬಾಲ್ಯದಲ್ಲಿ ತಂದೆಯಿಂದ ಗಾಯನ ಮತ್ತು ವೀಣೆಯ ಪಾಠ ನಡೆಯಿತು. ತಂದೆಯ ಅಕಾಲಿಕ ನಿಧನದ ನಂತರ ಅವರೇ  ಸ್ಥಾಪಿಸಿದ್ದ ‘ವೀಣಾಗಾನ ಮಂದಿರ’ದ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ತಂದೆಯ ಬೋಧನಾ ಪರಂಪರೆ ಮುಂದುವರೆಸಿದರು. ಜೊತೆಗೆ ಸಂಗೀತ ಸೇರಿ ಲಲಿತಕಲಾ ರಂಗದ ಚಟುವಟಿಕೆಗಳನ್ನು ಬಿಂಬಿಸುವ ಬರವಣಿಗೆ ಆರಂಭಿಸಿದರು. ಕನ್ನಡದಲ್ಲಿ ಲಲಿತಕಲಾ ವಿಮರ್ಶೆಯ ಆಚಾರ್ಯರಂತಿದ್ದ ಕಲಾ ವಿಮರ್ಶಕ  ಬಿ.ವಿ.ಕೆ. ಶಾಸ್ತ್ರಿ (ಮುರಲಿ) ಅವರ ಗರಡಿಯಲ್ಲಿ ಪಳಗಿದ ಸುಬ್ರಹ್ಮಣ್ಯ, ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ಸಂಗೀತ ಮತ್ತು ನೃತ್ಯ ಕುರಿತು ಬರೆಯಲಾರಂಭಿಸಿದರು.  ಬಿ.ವಿ.ಕೆ. ಶಾಸ್ತ್ರಿಗಳ ನಂತರ ಕೇಂದ್ರ ಸಂಗೀತ ನೃತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರರಾದ ಏಕೈಕ ವಿಮರ್ಶಕ ಎಂಬ ಹೆಗ್ಗಳಿಕೆಯನ್ನೂ ಅವರು ಗಳಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಆನರ್ಸ್‌ ಓದುತ್ತಿದ್ದಾಗಲೇ ಕೈಲಾಸಂ ನಾಟಕಗಳ ವಿಮರ್ಶಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದ ಸುಬ್ರಹ್ಮಣ್ಯ ರಂಗಭೂಮಿಗಿಂತ ಲಲಿತಕಲೆಗಳ ವಿಮರ್ಶೆಯಲ್ಲೇ ಹೆಚ್ಚು ಆಸಕ್ತರಾದರು. ಕಳೆದ ಮೂವತ್ತು ವರ್ಷಗಳಿಂದ ಪತ್ರಿಕೆಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ಕುರಿತ ಲೇಖನಗಳನ್ನು ಬರೆಯುತ್ತಿರುವ ಅವರು ಪ್ರಚಾರಕ್ಕೆ ಬಾರದೇ ಇದ್ದ ಎಲೆಮರೆಯ ಕಾಯಿಗಳಿಗೆ  ಪ್ರೋತ್ಸಾಹದ ನೀರೆರೆದವರು. ವಿದ್ವಾಂಸರ ವೈಶಿಷ್ಟ್ಯಗಳನ್ನು ಎತ್ತಿ ತೋರಿಸಿದವರು.

ಸುಬ್ರಹ್ಮಣ್ಯ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಬರೆದ ಅಪಾರ ಸಂಖ್ಯೆಯ ಲೇಖನಗಳಲ್ಲಿ 75 ಬರಹಗಳನ್ನು ಆಯ್ದು ‘ಕಲಾವಲೋಕನ’ ಎಂಬ ಸಂಕಲನವನ್ನೂ ತಂದಿದ್ದಾರೆ (ಪ್ರ: ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ). ಮತ್ತಷ್ಟು ಲೇಖನಗಳ ಎರಡನೇ ಸಂಪುಟವೂ ಹೊರಬರಲಿದೆ. ‘ಕನ್ನಡದಲ್ಲಿ ಸಂಗೀತ ಪುಸ್ತಕಗಳು’ ಮತ್ತು ‘ಡಾ.ಕೆ. ವೆಂಕಟಲಕ್ಷ್ಮಮ್ಮ’ ಎಂಬ ಎರಡು ಪುಸ್ತಕಗಳೂ ಹೊರಬರಲಿವೆ. ಇಂಗ್ಲಿಷ್‌ನಲ್ಲಿ ‘ವೈಣಿಕ ಶಿಖಾಮಣಿ’ ಎಂಬ ಬೃಹತ್‌ ಗ್ರಂಥವನ್ನು ರಚಿಸುತ್ತಿದ್ದಾರೆ. ಪ್ರಸ್ತುತ ವೀಣೆ ಶೇಷಣ್ಣ ಅವರು ವಾಗ್ಗೇಯಕಾರರಾಗಿ ರಚಿಸಿದ ಕೃತಿಗಳ ಸಂಪಾದನಾ ಕಾರ್ಯದಲ್ಲಿ ತೊಡಗಿರುವ ಅವರು, ಈ ಕೆಲಸ ಮುಂದಿನ ಪೀಳಿಗೆಯ ಸಂಗೀತಾಸಕ್ತರ ಸಲುವಾಗಿ ಮಾಡಲೇ ಬೇಕಾದ ಕರ್ತವ್ಯ ಎಂದು ಭಾವಿಸಿದ್ದಾರೆ.

ಮೈಸೂರು ವಿ. ಸುಬ್ರಹ್ಮಣ್ಯ ಅವರು ಒಬ್ಬ ‘ಆರ್ಕೈವಿಸ್ಟ್’ ಕೂಡಾ. ನಮ್ಮ ಹಿಂದಿನ ಸಂಗೀತಗಾರರು, ನೃತ್ಯ ಕಲಾವಿದರು, ಹರಿಕತೆ ವಿದ್ವಾಂಸರು, ಗಮಕಿಗಳು, ವಾದಕರು  ಮುಂತಾದವರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಕರ್ನಾಟಕದ ಕಲಾ ಪರಂಪರೆಯ ಮಹತ್ವದ ದಾಖಲೆ ಇದಾಗಿದೆ. ವಿಶ್ವಕನ್ನಡ ಸಮ್ಮೇಳನ, ಸಂಗೀತ ಸಮ್ಮೇಳನಗಳು, ಮುಂಬೈ, ಹಾಸನ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಕುಕ್ಕೆ ಸುಬ್ರಹ್ಮಣ್ಯ, ಚೆನ್ನೈ ಮುಂತಾದ ಕಡೆ ನಡೆದ ಸಮ್ಮೇಳನಗಳು ಮುಂತಾದ ಕಡೆಗಳಲ್ಲಿ ಈಗಾಗಲೇ ಈ ಸಂಗ್ರಹದ ಪ್ರದರ್ಶನವನ್ನೂ ಮಾಡಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳು ನೂರಾರಿವೆ ಎಂದು ನಂಬಿರುವ ಸುಬ್ರಹ್ಮಣ್ಯ, ಅಂಧ ಸಂಗೀತ ಕಲಾವಿದರನ್ನು ಸಂಘಟಿಸಿ ಸಂಗೀತ ಸಮ್ಮೇಳನವನ್ನು ನಡೆಸಲು ದುಡಿದವರು. ದೂರದರ್ಶನಕ್ಕೆ ಅಂಧ ಕಲಾವಿದರ ಸಂದರ್ಶನ ನಡೆಸಿಕೊಟ್ಟರು. ಕರ್ನಾಟಕ ಗಾನಕಲಾ ಪರಿಷತ್ತಿನ ಯುವಜನ ವಿಭಾಗದ ಪ್ರಥಮ ಸಂಚಾಲಕರಾಗಿ ಹದಿನೈದು ವರ್ಷ ಕಾರ್ಯ ನಿರ್ವಹಿಸಿದ ಅವರು ಇಡೀ ರಾಜ್ಯದ ಯುವ ಕಲಾವಿದರನ್ನು ಸಂಘಟಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಯುವ ಸಂಗೀತ ಕಲಾವಿದರಿಗೆ ಕಛೇರಿಗಳನ್ನು ಆಯೋಜಿಸಿ ಅನೇಕ ಕಲಾವಿದರು ವೇದಿಕೆಗೆ ಬರಲು ಅವಕಾಶ ಕಲ್ಪಿಸಿದರು. ನಿರಂತರವಾಗಿ ಅಧ್ಯಯನ ಗೋಷ್ಠಿಗಳನ್ನು ನಡೆಸಿ ಗಾನಕಲಾ ಪರಿಷತ್ತಿನ ಯುವ ವಿಭಾಗವನ್ನು ಚಿಂತಕರ ಚಾವಡಿಯಾಗುವಂತೆ  ನೋಡಿಕೊಂಡರು. ಸಂಗೀತ ಕಲಿಯುವುದರ ಜೊತೆಗೆ, ಸಂಗೀತಶಾಸ್ತ್ರ ಮತ್ತು ಸಂಗೀತ ಇತಿಹಾಸದ ಕಲಿಕೆಯೂ ಅವಶ್ಯಕ ಎನ್ನುವುದು ಅವರ ನಂಬಿಕೆ. ರಾಜ್ಯದಲ್ಲಿ ನಡೆಯುವ ಬಹುತೇಕ ಸಂಗೀತ ಸಮ್ಮೇಳನಗಳ ಚಿಂತನ ಮಂಥನ ಗೋಷ್ಠಿಗಳಿಗೆ ಸುಬ್ರಹ್ಮಣ್ಯ ಅವರ ಸಾರಥ್ಯವಿದ್ದೇ ಇರುತ್ತದೆ.

ಒಳ್ಳೆಯ ವಾಗ್ಮಿಯಾಗಿರುವ ಸುಬ್ರಹ್ಮಣ್ಯ ಸ್ವಾರಸ್ಯಕರ ಭಾಷಣಕ್ಕೆ  ಹೆಸರಾದವರು. ಸಂಗೀತ ನೃತ್ಯ ಕುರಿತು ವಿಭಿನ್ನ ವಿಷಯಗಳ ಮೇಲೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಬಾನುಲಿ, ದೂರದರ್ಶನ ಮತ್ತು ಸಂಗೀತ ಸಮ್ಮೇಳನಗಳಿಗಾಗಿ ಇವರು ನಿರ್ದೇಶಿಸಿದ ಮೈಸೂರು ಸದಾಶಿವರಾಯ, ವೀಣೆ ಶೇಷಣ್ಣ, ಕರಿಗಿರಿರಾಯರನ್ನು ಕುರಿತ ಸಂಗೀತ ರೂಪಕಗಳು  ಮತ್ತು ಡಾ. ಸುಕನ್ಯಾ ಪ್ರಭಾಕರ್‌ ಅವರ ಜೊತೆ ಸೇರಿ ರೂಪಿಸಿದ ‘ಹರಿದಾಸ ನಾದಾಂಜಲಿ’ ಇವರ ಬಹುಮುಖ ಆಸಕ್ತಿಗೆ ಸಾಕ್ಷಿ. ಹಿರಿಯ ಮತ್ತು ಪ್ರಸಿದ್ಧ ಸಂಗೀತಗಾರರನ್ನು ಸಂದರ್ಶನ ಮಾಡುವಾಗ ಅವರ ಮೇಲ್ಮೆಗೆ ಪೂರಕವಾದ ಸಂವಾದ ನಡೆಸುವುದು  ಮೆಚ್ಚುಗೆ ಪಡೆಯದೇ ಇಲ್ಲ. 

ಮದ್ರಾಸು ಮ್ಯೂಸಿಕ್‌ ಅಕಾಡೆಮಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಪಡೆದಿರುವ ಸಂಸ್ಥೆ. ಸುಬ್ರಹ್ಮಣ್ಯ ಅವರು ಅಲ್ಲಿ ಮನ್ನಣೆ ಪಡೆದಿರುವುದು ದೊಡ್ಡ ವಿಷಯ. ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಚೆನ್ನೈಯಲ್ಲಿ ನಡೆಯುವ ಸಂಗೀತೋತ್ಸವಗಳು ವಿಶ್ವಖ್ಯಾತಿ ಪಡೆದಿವೆ. ಪ್ರತೀ ದಿನ ಏಕಕಾಲದಲ್ಲಿ 40 ಸಂಗೀತ ಕಛೇರಿಗಳು ನಡೆಯುತ್ತವೆ. ಇದೇ ಡಿ.18ರಂದು ನಡೆಯುವ ‘ಇಂಡಿಯನ್‌ ಫೈನ್‌ ಆರ್ಟ್ಸ್’ ಸಂಗೀತ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರಿಗೆ ಬಂದಿದೆ. ಉದ್ಘಾಟನೆಯ ಗೌರವ ಮೈಸೂರು ವಿ. ಸುಬ್ರಹ್ಮಣ್ಯ ಅವರದು.

ಲಲಿತಕಲಾ ವಿಮರ್ಶೆಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಇರಲು ಸಾಧ್ಯವಿಲ್ಲ. ವಿದ್ವತ್ ವಲಯದಲ್ಲಿ ಗೌರವ ಪಡೆಯುವುದು ಇನ್ನೂ ಕಠಿಣ. ಆದರೆ ಸುಬ್ರಹ್ಮಣ್ಯ ಇವುಗಳನ್ನು ಪಡೆದವರು.

ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದು ‘ಸಂಗೀತ ಕಲಾರತ್ನ’ ಬಿರುದು ಪಡೆದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ವಿಮರ್ಶಕರ ಪ್ರಶಸ್ತಿ, ಕರ್ನಾಟಕ ಗಾನಕಲಾ ಪರಿಷತ್ತಿನ ‘ಸದಸ್‌’ ಸನ್ಮಾನ, ಸಾಂಗೀತ್ಯ ಆಸ್ಥಾನ ಪುರಸ್ಕಾರ ಇವುಗಳು ಅವರಿಗೆ ಸಂದಿವೆ. ಈಗ 2013ರ ಸಾಲಿನ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕಾರ ಅವರ ಸೇವೆಗೆ ಸಂದ ಮತ್ತೊಂದು ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT