ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಚ್‌ನಲ್ಲಿ ಸ್ಥಳೀಯರಿಗೆ ಆದ್ಯತೆ

Last Updated 22 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಸಾಗರ: ಬೇರೆಬೇರೆ ಸ್ಥಳಗಳಿಂದ ಬರುವ ಪ್ರವಾಸಿಗರು ಹಿನ್ನೀರಿನ ಸಂತ್ರಸ್ತ ಜನರ ಜತೆ ಜಗಳ, ಹೊಡೆದಾಟ ಇನ್ನಿತರ ಕೃತ್ಯದಲ್ಲಿ ತೊಡಗಬಾರದು. ಸರ್ಕಾರ ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನು ತ್ಯಾಗ ಮಾಡಿರುವ ಜನರ ಹಿತದೃಷ್ಟಿಯಿಂದ ಹೊಳೆಬಾಗಿಲು- ಕಳಸವಳ್ಳಿ ಲಾಂಚ್ ಸಂಪರ್ಕ ಕಲ್ಪಿಸಿದೆ. ಸ್ಥಳೀಯರಿಗೆ ಲಾಂಚ್‌ನಲ್ಲಿ ಪ್ರಥಮ ಆದ್ಯತೆ ಎನ್ನುವುದನ್ನು ಪ್ರವಾಸಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇತ್ತೀಚೆಗೆ ಹೊಳೆಬಾಗಿಲು ಲಾಂಚ್ ಸಂಚಾರದ ಪ್ರದೇಶದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ನಡೆಯುತ್ತಿರುವ ಗಲಾಟೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಸ್ಥಳೀಯರ ಅಹವಾಲು ಆಲಿಸಿ, ನಂತರ ರಕ್ಷಣೆ ಪರಿಶೀಲನೆ ನಡೆಸಿ ಮಾತನಾಡಿದರು.

ಕಳೆದವಾರ ಸಣ್ಣಪುಟ್ಟ ವಿಷಯಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದು ಗೇಟನ್ನು ಮುಚ್ಚಲಾಗಿದೆ. ಇದರಿಂದ ಸಿಗಂದೂರುಗೆ ತೆರಳುವ ಪ್ರವಾಸಿಗರಿಗೆ, ಭಕ್ತರಿಗೆ ತೊಂದರೆ ಉಂಟಾಗಿದೆ. ಯಾವುದೇ, ಕಾರಣಕ್ಕೂ ಸ್ಥಳೀಯರಿಗೆ ತೊಂದರೆ ಆಗದಂತೆ  ಪೊಲೀಸರು ಹಾಗೂ ಲಾಂಚ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಲಾಂಚ್‌ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಜಾಗ ಉಳಿದರೆ ಮಾತ್ರ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ಕಳಸವಳ್ಳಿ ಹಾಗೂ ಅಂಬಾರಗೋಡ್ಲುವಿನ ಎರಡೂ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಗ್ರಾಮ ಪಂಚಾಯ್ತಿ ವತಿಯಿಂದ ನೇಮಿಸಬೇಕು. ಪ್ರತಿಗೇಟ್‌ಗೆ ಇಬ್ಬರು ಪೊಲೀಸರನ್ನು ನೇಮಕ ಮಾಡಲಾಗುವುದು. ಶುಕ್ರವಾರ, ಭಾನುವಾರ, ಮಂಗಳವಾರ ಹಾಗೂ ವಿಶೇಷ ದಿನಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು, ಗಲಾಟೆ ನಡೆಯದಂತೆ ನೋಡಿಕೊಳ್ಳಲು ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗುವುದು. ಜನ ಹೆಚ್ಚಿದ್ದ ಸಂದರ್ಭದಲ್ಲಿ ಯಾವುದೇ ಪ್ರವಾಸಿ ವಾಹನಗಳನ್ನು ದಾಟಿಸಬಾರದು. ಪ್ರತಿನಿತ್ಯ ಸಂಚಾರಿಸುವ ಬಸ್‌ಗಳನ್ನು ಹೊರತುಪಡಿಸಿ ಲಾರಿ, ಕ್ಯಾಂಟರ್ ಇನ್ನಿತರ ದೊಡ್ಡ ವಾಹನವನ್ನು ಲಾಂಚ್‌ಗೆ ಏರಿಸಬಾರದು ಎಂದು ತಿಳಿಸಿದರು.

ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುವರ್ಣಾ ಟೀಕಪ್ಪ, ಕೃಷ್ಣಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಬಿ. ಟಾಕಪ್ಪ, ಶೇಖರಪ್ಪ, ಪಿಎಸ್‌ಐ ದೇವರಾಜ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT