ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಬಿ ನಿಲ್ಲಿಸಿದ ವಾಲ್‌ಮಾರ್ಟ್

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್/ದೆಹಲಿ (ಪಿಟಐ): ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಲಾಬಿ ನಡೆಸಲು ಅಮೆರಿಕದ ಕಾನೂನು ತಜ್ಞರ ನೆರವು ಪಡೆಯುವುದನ್ನು ವಾಲ್‌ಮಾರ್ಟ್ ಸ್ಥಗಿತಗೊಳಿಸಿದೆ.

ವಾಲ್‌ಮಾರ್ಟ್ ಭಾರತ ಪ್ರವೇಶಕ್ಕೆ ಸಂಬಂಧಿಸಿದಂತೆ ಲಾಬಿ ನಡೆಸಿರುವ ಬಗ್ಗೆ ಭಾರತ ಸರ್ಕಾರ ಕೈಗೊಂಡ ತನಿಖಾ ವರದಿಯನ್ನು ಮುಂದಿನ ತಿಂಗಳು ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಈ ಹೇಳಿಕೆ ಹೊರಬಿದ್ದಿದೆ.

ಭಾರತ ಮಾರುಕಟ್ಟೆ ಪ್ರವೇಶಕ್ಕೆ ಲಾಬಿ ನಡೆಸುವುದನ್ನು ಸ್ಥಗಿತಗೊಳಿಸಿರುವುದು ಶಾಶ್ವತವೋ ಅಥವಾ ತಾತ್ಕಾಲಿಕವೇ ಎನ್ನುವುದನ್ನು ವಾಲ್‌ಮಾರ್ಟ್ ಖಚಿತ ಪಡಿಸಿಲ್ಲ. ಜೂನ್ 30ರಂದು ಕೊನೆಗೊಂಡ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಭಾರತ ಮಾರುಕಟ್ಟೆ ಪ್ರವೇಶ ಮಾಡಲು ವಾಲ್‌ಮಾರ್ಟ್ ನಡೆಸಿದ ಲಾಬಿಯ ಮೊತ್ತ 20 ಲಕ್ಷ ಡಾಲರ್ (ರೂ12 ಕೋಟಿ).

ವಾಲ್‌ಮಾರ್ಟ್ ಸೇರಿ ವಿಶ್ವದ ಅನೇಕ ಕಂಪೆನಿಗಳು ಭಾರತದ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲು ತುದಿಗಾಲಲ್ಲಿ ನಿಂತಿದ್ದು, ಬಂಡವಾಳ ಹೂಡಿಕೆ ನಿಯಮಗಳಲ್ಲಿ ಸಡಿಲಿಕೆ ಮಾಡುತ್ತಿರುವುದನ್ನು ಎದುರು ನೋಡುತ್ತಿವೆ.

ವಾಲ್‌ಮಾರ್ಟ್ ಲಾಬಿ ನಡೆಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಆಯೋಗವು ತನಿಖೆಗೆ ಅಗತ್ಯವಿರುವ ಮಾಹಿತಿಗಳನ್ನು ಕಲೆಹಾಕಿಲ್ಲ. ಭಾರತದಲ್ಲಿ ವಹಿವಾಟು ಆರಂಭಕ್ಕೆ ಲಾಬಿ ನಡೆಸಲು ವಾಲ್‌ಮಾರ್ಟ್ ಎಷ್ಟು ಹಣ ಖರ್ಚು ಮಾಡಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಅವಶ್ಯಕ ಮಾಹಿತಿ ವರದಿಯಲಿಲ್ಲ. 

ಭಾರತದ ಮಾರುಕಟ್ಟೆ ಪ್ರವೇಶ ಮಾಡಲು ವಾಲ್‌ಮಾರ್ಟ್ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡುತ್ತಿದೆ ಎನ್ನುವುದು ಗೊತ್ತಾದ ನಂತರ ಸರ್ಕಾರ ತನಿಖೆಗೆ ಆದೇಶಿಸಿತ್ತು.

ತನಿಖೆ ಪ್ರಗತಿಯಲ್ಲಿರುವಾಗಲೂ ವಾಲ್‌ಮಾರ್ಟ್ ಲಾಬಿ ನಡೆಸುವುದನ್ನು ಮುಂದುವರಿಸಿತ್ತು. ಆಶ್ಚರ್ಯ ಎನ್ನುವಂತೆ ದಿಢೀರ್ ಆಗಿ ಈ ಲಾಬಿ ನಡೆಸುವುದನ್ನು ವಾಲ್‌ಮಾರ್ಟ್ ಸ್ಥಗಿತಗೊಳಿಸಿದೆ.

ಭಾರತ ಮಾರುಕಟ್ಟೆ ಪ್ರವೇಶ ಮತ್ತು ವಿದೇಶ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಗೆ ನಿಯಮಗಳ ಸಡಿಲಿಕೆಯಲ್ಲಿ ಲಾಬಿ ನಡೆಸಲು ವಾಲ್‌ಮಾರ್ಟ್ 2012ರಲ್ಲಿ ಒಟ್ಟು 61.3 ಲಕ್ಷ ಡಾಲರ್ (ರೂ33 ಕೋಟಿ) ಖರ್ಚು ಮಾಡಿತ್ತು.

ಲಾಬಿ ನಡೆಸಿರುವ ಕುರಿತು ತನಿಖೆ ನಡೆಸಲು ಸರ್ಕಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರನ್ನು ನೇಮಕ ಮಾಡಿತು. ನ್ಯಾಯಮೂರ್ತಿ ಮುದ್ಗಲ್ ತನಿಖಾ ವರದಿಯನ್ನು ಕಂಪೆನಿ ವ್ಯವಹಾರಗಳ ಸಚಿವಾಲಯಕ್ಕೆ ಮೇ ತಿಂಗಳಲ್ಲಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT