ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ತರುವ ಹೂ ಚೈನಾ ಆಸ್ಟರ್

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಾಂಪ್ರದಾಯಿಕ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ದೇವನಹಳ್ಳಿ ತಾಲ್ಲೂಕಿನ ಅನೇಕ ರೈತರು ಈಗ ಹೂವಿನ ಬೇಸಾಯಕ್ಕೆ ಮನಸೋತಿದ್ದಾರೆ. ಒಂದು ಅನಧಿಕೃತ ಮೂಲದ ಪ್ರಕಾರ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಚೀನಾ ಆಸ್ಟರ್ ಹೆಸರಿನ ಹೂ ಬೆಳೆಯುತ್ತಿದ್ದಾರೆ. ಆಸ್ಟರ್ ಹೂಗಳ ಬೇಸಾಯ ಲಾಭದಾಯಕ ಅನ್ನುವುದು ಅನೇಕರ ಅನುಭವಕ್ಕೆ ಬಂದಿದೆ.

ಆಸ್ಟರ್ ಹೂಗಳು ನೋಡಲು `ಬಟನ್ಸ್~ ಹೂಗಳಂತೆ ಕಾಣುತ್ತವೆ. ಆದರೆ ಬಟನ್ ಹೂಗಳಿಗಿಂತ ತುಸು ಭಿನ್ನ. ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಹೂಗಳಿವು. ಮೂರು ತಿಂಗಳಲ್ಲಿ ಹೂ ಕೊಯ್ಲಿಗೆ ಬರುತ್ತವೆ. ಈಗ ಹೂಗಳು ಕೊಯ್ಲಿಗೆ ಬಂದಿವೆ. ರೈತರು ಲಾಭದ ಲೆಕ್ಕಾಚಾರದಲ್ಲಿದ್ದಾರೆ.ದೇವನಹಳ್ಳಿ ತಾಲ್ಲೂಕಿನ ಮಿಸುಗಾನಹಳ್ಳಿ ರೈತ ಮಾಕಲ್ಲಪ್ಪ ನಾಲ್ಕು ವರ್ಷಗಳಿಂದ ಸತತವಾಗಿ ಆಸ್ಟರ್ ಹೂ ಬೆಳೆಯುತ್ತಾರೆ. ರಾಸಾಯನಿಕ ಗೊಬ್ಬರ ಹಾಕದೆ, ಕೀಟನಾಶಕ ಬಳಸದೆ ಹೂ ಬೆಳೆಯುವುದು ಅವರ ಕ್ರಮ. ಈ ವರ್ಷ ಅವರು 20 ಗುಂಟೆಯಲ್ಲಿ ಐದು ಸಾವಿರ ಹೂವಿನ ಸಸಿಗಳನ್ನು ನಾಟಿ ಮಾಡಿದ್ದಾರೆ. ನಿತ್ಯ ಹೂಗಳನ್ನು ಚಿಕ್ಕಬಳ್ಳಾಪುರಕ್ಕೆ ಒಯ್ದು ಮಾರಾಟ ಮಾಡುತ್ತಾರೆ.

ಹದಿನೈದು ಸಾವಿರ ರೂಪಾಯಿ ಬಂಡವಾಳ ಹಾಕಿ ಹೂವಿನ ಬೇಸಾಯ ಆರಂಭಿಸಿದ ಮಾಕಲ್ಲಪ್ಪ ಈಗ ನಿತ್ಯ 100 ಕೆಜಿ ಹೂವು ಕೊಯ್ದು ಮಾರುತ್ತಾರೆ. ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹೂವಿಗೆ 30 ರೂ ಬೆಲೆ ಸಿಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ನೂರು ರೂವರೆಗೂ ಸಿಗುತ್ತದೆ. ಆಸ್ಟರ್ ಹೂಗಳಿಗೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಶ್ರಾವಣ ಮಾಸ ಮತ್ತು ಹಬ್ಬದ ಸಂದರ್ಭಗಳಲ್ಲಿ ಕೇಜಿಗೆ 150 ರೂವರೆಗೆ ಬೆಲೆ ಸಿಗುತ್ತದೆ. ಆದರೆ ದೇವನಹಳ್ಳಿಯಿಂದ ಬೆಂಗಳೂರಿಗೆ ಹೂ ಸಾಗಿಸುವುದು ಕಷ್ಟ ಹೀಗಾಗಿ ಚಿಕ್ಕಬಳ್ಳಾಪುರಕ್ಕೆ ಒಯ್ದು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಮಾಕಲ್ಲಪ್ಪ. ಆಸ್ಟರ್ ಹೂಗಳನ್ನು ಬಿಡಿಯಾಗಿ ಮತ್ತು ಬೊಕೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಎಚ್‌ಆರ್) ಆಸ್ಟರ್ ಹೂವಿನ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಪೂರ್ಣಿಮಾ ವೈಲೆಟ್, ಕಾಮಿನಿ, ಶಶಾಂಕ್ ಹಾಗೂ ಪೂಲ್ ಗಣೇಶ್ ವೈಟ್, ಪೂಲ್ ಗಣೇಶ ಪಿಂಕ್, ಪೂಲ್ ಗಣೇಶ ವೈಲೆಟ್, ಪೂಲ್ ಗಣೇಶ ಪರ್ಪಲ್‌ಗಳು ಇತ್ಯಾದಿ ಹೆಸರಿನ ತಳಿಗಳನ್ನು ದೇವನಹಳ್ಳಿ ತಾಲ್ಲೂಕಿನ ರೈತರು ಬೆಳೆಯುತ್ತಿದ್ದಾರೆ. ಮೇ-ಜೂನ್‌ನಲ್ಲಿ ಸಸಿ ನಾಟಿ ಮಾಡಿದರೆ ಶ್ರಾವಣದ ವೇಳೆಗೆ ಹೂ ಬರುತ್ತವೆ.

 ಬೀಜ ಮಳಿಗೆಗಳಲ್ಲಿ ಸಿಗುವ ಈ ಹೂವಿನ ಬೀಜಗಳು ಗುಣಮಟ್ಟ ಚೆನ್ನಾಗಿರುವುದಿಲ್ಲ. ಈ ಬೀಜಗಳ ಗಿಡಗಳು ಕೆಲವೇ ದಿನಗಳಲ್ಲಿ ಬಾಡುತ್ತವೆ. ಹೂವಿನ ಇಳುವರಿಯೂ ಕಡಿಮೆ. ಹೀಗಾಗಿ ಕೆಲವು ರೈತರಿಂದ ಬೀಜ ಸಂಗ್ರಹಿಸಿ ಬಳಸುತ್ತಿದ್ದೇನೆ ಎನ್ನುತ್ತಾರೆ ಮಾಕಲ್ಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT