ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕಿಂತ ಅಪಾಯವೇ ಹೆಚ್ಚು

Last Updated 9 ಜೂನ್ 2011, 9:45 IST
ಅಕ್ಷರ ಗಾತ್ರ

ಕೂಡಲಸಂಗಮ: ವಿಜಾಪೂರ ಜಿಲ್ಲೆಯ ಕೂಡಗಿಯಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ 4000 ಮೆಗಾ ವ್ಯಾಟ್ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕದಿಂದ ಪರಿಸರದ ಮೇಲಷ್ಟೇ ಅಲ್ಲದೆ ಜನ ಸಾಮಾನ್ಯರ ಆರೋಗ್ಯದ ಮೇಲೂ ನೇರ ದುಷ್ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರದ ಅಣು ಶಕ್ತಿ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಎಂ.ಬಿ. ಪಾಟೀಲ ಆತಂಕ ವ್ಯಕ್ತಪಡಿಸಿದರು.

ಇಲ್ಲಿಯ ಬಸವ ವೇದಿಕೆಯಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೂಡಗಿ ವಿದ್ಯುತ್ ಸ್ಥಾವರದಿಂದ ಆರ್‌ಸಿಎಂ, ಗಂಧಕ, ನೈಟ್ರೋಜನ್, ಆಕ್ಸೈಡ್, ಪಾದರಸದ ಪ್ರಮಾಣ ಸುತ್ತಲಿನ ಪರಿಸರದಲ್ಲಿ ಹೆಚ್ಚಾಗಲಿದೆ. ಅಪಾಯಕಾರಿ ಖನಿಜಾಂಶ ಗಾಳಿಯಲ್ಲಿ ಸೇರಿಕೊಂಡು ಉಸಿರಾಟಕ್ಕೆ ಹಾಗೂ ಉಸಿರಾಟ ಸಂಬಂಧಿ ರೋಗಗಳಿಗೆ ಕಾರಣ ಆಗಲಿದೆ ಎಂದು ವಿವರಿಸಿದರು.

ಪ್ರಾಣಾಪಾಯ: ಗಾಳಿಯಲ್ಲಿ ಧೂಳು ಅಧಿಕವಾದಾಗ ಪುಪ್ಪುಸದ ನಾಳಗಳು ನಾಶವಾಗುವವು. ಕ್ಯಾನ್ಸರ್, ಹೃದಯ ಹಾಗೂ ನರಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳುವುದು. ನೈಟ್ರೋಜನ್ ಆಕ್ಸೈಡ್‌ದಿಂದ ಮಕ್ಕಳು, ವೃದ್ದರು, ವನ್ಯಜೀವಿಗಳು, ಗಿಡ ಮರ ಬಳ್ಳಿಗಳಿಗೆ ಅಪಾಯ ಎದುರಾಗಲಿದೆ.

ಭೂಮಿ ಮತ್ತು ನೀರಿನಲ್ಲಿ ಮಿಶ್ರಣಗೊಂಡ ಆರೋಗ್ಯಕ್ಕೆ ಹಾನಿ ಮಾಡುವುದು. ಗಂಧಕದಿಂದ ಆಮ್ಲ ಮಳೆಯಾಗುವುದು. ಇದರಿಂದ ನೀರು ಮತ್ತು ವನ್ಯರಾಶಿಗೆ ಧಕ್ಕೆ ಆಗಲಿದೆ. ಪಾದರಸದಿಂದ ನರಗಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬಿರುವುದು. ಓಝೋನ್ ಪದರಿಗೂ ತೊಂದರೆ ಆಗಲಿದೆ ಎಂದು ಹೇಳಿದರು.

ಜಲ ಮಾಲಿನ್ಯ: ಸ್ಥಾವರದ ಕುಲುಮೆಯಿಂದ ಹೊರ ಹೊಮ್ಮುವ ಧೂಳಿನೊಳಗಿನ ಪಾದರಸ, ಸಿಲಿನಿಯಂ, ಕ್ಯಾಡ್ಮಿಯಂ ಮತ್ತು ಅರ್ಸೆನಿಕ್‌ನಂತಹ ವಿಷಕಾರಿ ಧಾತುಗಳು ನೇರವಾಗಿ ಉಸಿರಾಟಕ್ಕೆ ತೊಂದರೆ ಮಾಡುತ್ತವೆ. ಅಲ್ಲದೆ ಸುತ್ತಲಿನ ಹಳ್ಳ, ಬಾವಿ, ಕೆರೆ, ನದಿ ಹಾಗೂ ಇತರ ಭೂಮಿಯ ಮೇಲಿನ ನೀರಿನ ಮೂಲಕ ಅಂತರ್ಜಲ ಸೇರಿಕೊಂಡು ಕಲುಷಿತವಾದರೆ, ಭಯಾನಕ ಕಾಯಿಲೆಗಳ ಸೃಷ್ಟಿಯಾಗುವುದು ಸಹಜ ಎಂದರು.

ಕೂಡಿಗಿಯ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಪ್ರತಿದಿನ 25 ಸಾವಿರ ಟನ್ ಹಾರು ಬೂದಿ ಉತ್ಪಾದನೆ ಆಗುವುದು. ಪ್ರತಿದಿನವೂ ಉತ್ಪತ್ತಿಯಾಗುವ ಬೂದಿಯನ್ನು ವಿಲೇವಾರಿ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಪರ‌್ಯಾಯ ವ್ಯವಸ್ಥೆ ಮಾಡಿದರೂ ತ್ಯಾಜ್ಯದ ವಿಲೇವಾರಿ ಮಾಡುವುದು ಕಷ್ಟ. ಆ ಮೂಲಕ ಮನುಷ್ಯನ ಬದುಕನ್ನು ನರಕ ಮಾಡುವ ಕೆಲಸವನ್ನು ಸರ್ಕಾರವೇ ತನ್ನ ಕೈಯಾರೆ ಮಾಡಿದಂತೆ ಅಗಲಿದೆ ಎಂದು ತಿಳಿಸಿದರು.

ಹಾರು ಬೂದಿಯ ಪರಿಣಾಮ: 4000 ಮೆಗಾವ್ಯಾಟ್ ಕೂಡಗಿಯ ಈ ಸ್ಥಾವರವು ದಿನ್ಕಕೆ ಸಾಧಾರನವಾಗಿ 25000 ಟನ್ ಹಾರು ಬೂದಿಯನ್ನು ಬಿಡುವುದು ಇದರಲ್ಲಿ ಜನರು ಬದುಕಲು ಆಗುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT