ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕೆ ಷರತ್ತು ಸಡಿಲಿಕೆ

ಅತಿಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣ
Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗಸ್ಟಾವೆಸ್ಟ್‌ಲ್ಯಾಂಡ್ ಕಂಪೆನಿಯು ಭಾರತದೊಂದಿಗೆ ಹೆಲಿಕಾಪ್ಟರ್ ಪೂರೈಕೆ ಒಪ್ಪಂದ ಕುದುರಿಸಿಕೊಳ್ಳಲು ಅನುಕೂಲವಾಗುವಂತೆ ಟೆಂಡರ್‌ಗೆ ನಿಗದಿಯಾಗಿದ್ದ ಮಾನದಂಡಗಳನ್ನೇ ಬದಲಾಯಿಸಲಾಗಿತ್ತು ಎಂಬ ಸಂಗತಿ ಬಹಿರಂಗವಾಗಿದೆ.

ಅಲ್ಲದೇ, ಕಂಪೆನಿಯುರೂ 3620 ಕೋಟಿ  ಮೊತ್ತದ ಒಪ್ಪಂದ ಕುದುರಿಸಿಕೊಳ್ಳಲುರೂ 217 ಕೋಟಿಯನ್ನು ತೆಗೆದಿರಿಸಿತ್ತು. ಅತಿ ಗಣ್ಯರ 12 ಹೆಲಿಕಾಪ್ಟರ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ಒಪ್ಪಂದ ಮೊತ್ತದ ಶೇ 7.5ರಷ್ಟು ದಲ್ಲಾಳಿ ಹಣ ಪಡೆಯಲು ಮಧ್ಯವರ್ತಿ ಒಪ್ಪಿಕೊಂಡಿದ್ದ ಎಂಬ ಸಂಗತಿಯೂ ಹೊರಬಿದ್ದಿದೆ.

ಈ ಹಗರಣ ಕುರಿತು ತನಿಖೆ ನಡೆಸುತ್ತಿರುವ ಇಟಲಿಯ ತನಿಖಾಧಿಕಾರಿಗಳು ಅಲ್ಲಿನ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ದಾಖಲಿಸಲಾಗಿದೆ.
 

ಲಂಚಾವತಾರ
* ಹೆಲಿಕಾಪ್ಟರ್ ಮಾರಾಟ ಕುದುರಿಸಲು ಲಂಚಕ್ಕಾಗಿ ಅಗಸ್ಟಾ ವೆಸ್ಟ್‌ಲ್ಯಾಂಡ್ ತೆಗೆದಿಟ್ಟಿದ್ದ ಮೊತ್ತ     ರೂ 217 ಕೋಟಿ 

* ಮಧ್ಯವರ್ತಿಗೆ ಶೇ 7.5ರಷ್ಟು ಕಮಿಷನ್ ನೀಡಲು ಒಪ್ಪಂದ

* ಆಗಸ್ಟಾ ಕಾಪ್ಟರ್‌ಗಳನ್ನಷ್ಟೇ ಖರೀದಿಸಲು ಅನುವಾಗುವಂತೆ ಟೆಂಡರ್ ಷರತ್ತುಗಳಲ್ಲಿಯೇ ಮಾರ್ಪಾಡು

* ಚೌಕಾಶಿ ನಂತರ ಲಂಚಕ್ಕಾಗಿ ಮೀಸಲಿಟ್ಟ ಮೊತ್ತ ್ಙ 362 ಕೋಟಿಗೆ ಏರಿಕೆ

* ಮುಖ್ಯ ದಲ್ಲಾಳಿ ಕ್ರಿಶ್ಚಿಯನ್ ಮಿಷೆಲ್‌ಗೆ 217 ಕೋಟಿ ಪಾವತಿಸಿದ ಆಗಸ್ಟಾ

* ಮಧ್ಯವರ್ತಿಗಳಾದ ಗಿಡೊ ಮತ್ತು ಕಾರ್ಲೊ ಎಂಬುವವರಿಗೆ ರೂ 2.8 ಕೋಟಿ ಮುಂಗಡ ದಲ್ಲಾಳಿ ಪಾವತಿ

* ವಾಯುಪಡೆ ನಿವೃತ್ತ ಮುಖ್ಯಸ್ಥ ಎಸ್.ಪಿ. ತ್ಯಾಗಿ ಸೋದರ ಸಂಬಂಧಿಗಳಾದ ಜೂಲಿ, ಡೋಕ್ಸ್ ಮತ್ತು ಸಂದೀಪ್‌ಗೆ ರೂ 72 ಲಕ್ಷ  ಪಾವತಿ

* ಈಗ ಲಂಚದ ಹಗರಣ ಬೆಳಕಿಗೆ

ಕಂಪೆನಿಯು ಲಂ ನೀಡುವ ಉದ್ದೇಶಕ್ಕೆರೂ 217 ಕೋಟಿ  ತೆಗೆದಿರಿಸಿತ್ತಾದರೂ ಅಂತಿಮವಾಗಿ ನೀಡಿದ ಲಂಚರೂ 362 ಕೋಟಿ ಎಂದು ವರದಿಯಲ್ಲಿ ಹೇಳಲಾಗಿದೆ.

ಫಿನ್ ಮೆಕಾನಿಕಾ ಕಂಪೆನಿ ಮುಖ್ಯ ಕಾರ್ಯನಿರ್ವಾಹಕ ಜಿಯುಸೆಪ್ ಒರ್ಸಿ ಮತ್ತು ಆಗಸ್ಟಾವೆಸ್ಟ್‌ಲ್ಯಾಂಡ್ ಮುಖ್ಯ ಕಾರ್ಯನಿರ್ವಾಹಕ ಬ್ರೂನೊ ಸ್ಪ್ಯಾಗ್ನೊಲಿನಿ ಪ್ರಮುಖ ದಲ್ಲಾಳಿ ಕ್ರಿಸ್ಟಿಯನ್ ಮೈಕೇಲ್ ಎಂಬಾತನಿಗೆರೂ 217 ಕೋಟಿ ಕೊಟ್ಟಿದ್ದಾರೆ. ಒಪ್ಪಂದ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ರಮ ಮಾರ್ಗ ಹಿಡಿಯಲು ಹಾಗೂ ಒಪ್ಪಂದ ಅನುಷ್ಠಾನಗೊಳಿಸುವ ಉದ್ದೇಶಕ್ಕೆ ಈ ಹಣ ನೀಡಲಾಗಿತ್ತು ಎಂದು ವಿವರಿಸಲಾಗಿದೆ.

ಬಂಧನದಲ್ಲಿರುವ ಈ ಇಬ್ಬರು ಮುಖ್ಯ ಕಾರ್ಯನಿರ್ವಾಹಕರು ದಲ್ಲಾಳಿಗಳೆನ್ನಲಾದ ಮತ್ತಿಬ್ಬರಿಗೆ (ಗಿಡೊ ರಾಲ್ಫ್ ಹಶ್ಚ್‌ಕೆ ಮತ್ತು ಕಾರ್ಲೊ ಗೆರೋಸ) ಅವರಿಗೆರೂ 2.8 ಕೋಟಿ (4 ಲಕ್ಷ ಯೂರೊ ) ನೀಡಿದ್ದರು.

ಇದರಲ್ಲಿ , ಭಾರತದ ಮಾಜಿ ಏರ್ ಚೀಫ್ ಮಾರ್ಷಲ್ ತ್ಯಾಗಿ ಅವರ ಸಹೋದರ ಬಂಧುಗಳಾದ ಜೂಲಿ, ಡೋಕ್ಸ ಮತ್ತು ಸಂದೀಪ್ ಅವರಿಗೆರೂ 72 ಲಕ್ಷ (1 ಲಕ್ಷ ಯೂರೊ ) ನಗದು ನೀಡಲಾಗಿತ್ತು ಎಂದು ವಿವರಿಸಲಾಗಿದೆ.

ತ್ಯಾಗಿ ಅವರ ಕುಟುಂಬದೊಂದಿಗೆ, ವಿಶೇಷವಾಗಿ ಈ ಮೂವರು ಸಹೋದರರೊಂದಿಗೆ ಈ ದಲ್ಲಾಳಿಗಳು ನಿಕಟ ಸಂಬಂಧ ಹೊಂದಿದ್ದರು ಎಂಬ ಅಂಶವನ್ನೂ ವರದಿ ಒಳಗೊಂಡಿದೆ.

ದಲ್ಲಾಳಿಗಳ ಪೈಕಿ ಒಬ್ಬನಾದ ಜಪ್ಪಾ ಮತ್ತು ತ್ಯಾಗಿ ಅವರ ನಡುವೆ ಟೆಂಡರ್ ಪ್ರಕ್ರಿಯೆಯು ಮಾಹಿತಿ ಕೋರಿಕೆ ಹಂತದಲ್ಲಿದ್ದಾಗ (ಆರ್‌ಐಎಫ್) ಪ್ರಥಮ ಬಾರಿಗೆ ಭೇಟಿ ನಡೆದಿತ್ತು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್ ಕನಿಷ್ಠ 18,000 ಅಡಿಗಳ ಎತ್ತರದಲ್ಲಿ ಹಾರಾಡಬೇಕು ಎಂದು ಟೆಂಡರ್‌ನಲ್ಲಿ ನಿಗದಿ ಮಾಡಿದ್ದ ನಿಬಂಧನೆಯನ್ನು ಸಡಿಲಗೊಳಿಸುವ ಕುರಿತು ಈ ಭೇಟಿ ವೇಳೆ ಚರ್ಚೆ ನಡೆದಿತ್ತು.

ನಂತರ ತ್ಯಾಗಿ ಅವರು, ತಮ್ಮ ಸಹೋದರ ಬಂಧುಗಳ ನೆರವಿನಿಂದ ಟೆಂಡರ್‌ನಲ್ಲಿ ನಿಗದಿ ಮಾಡಿದ್ದ ಮಾನದಂಡಗಳನ್ನು ಬದಲಾಯಿಸುವ ಮೂಲಕ 18,000 ಅಡಿ ಎತ್ತರವನ್ನು 15,000 ಅಡಿಗೆ ಇಳಿಸಿದ್ದರು. ಹೀಗೆ ಮಾಡಿದ್ದರಿಂದಲೇ ಇದರಿಂದ ಆಗಸ್ಟಾವೆಸ್ಟ್‌ಲ್ಯಾಂಡ್ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿತ್ತು ಎಂದು ತಿಳಿಸಲಾಗಿದೆ.

ಟೆಂಡರ್‌ಗೆ ಸಂಬಂಧಿಸಿದಂತೆ ಸಭೆಯಲ್ಲಿ ಆದ ಬೆಳವಣಿಗೆಗಳನ್ನು ತ್ಯಾಗಿ ತಮಗೆ ತಿಳಿಸುತ್ತಿದ್ದರು ಎಂದೂ ದಲ್ಲಾಳಿಗಳು ಹೇಳಿದ್ದಾರೆ. ಜತೆಗೆ, ಹೆಲಿಕಾಪ್ಟರ್‌ನ ಪರೀಕ್ಷಾರ್ಥ ಚಾಲನೆ ವೇಳೆ ಕೂಡ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

`ಲಂಚ ನೀಡಿಕೆ ಅಪರಾಧವಲ್ಲ; ಉದ್ಯಮದ ಭಾಗ'
ಲಂಡನ್ (ಪಿಟಿಐ): `ಜಾಗತಿಕ ಮಟ್ಟದಲ್ಲಿ ವ್ಯವಹರಿಸುವಾಗ ಲಂಚ ನೀಡುವುದು ವ್ಯವಹಾರದ ಒಂದು ಭಾಗ' ಎಂದು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ ಅವರು ಹೇಳುವ ಮೂಲಕ, ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಜೈಲು ಪಾಲಾಗಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮುಖ್ಯಸ್ಥ ಜೆಯುಸೆಫ್ ಒರ್ಸಿ  ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್, ಬಿಜೆಪಿ ಕೆಸರೆರಚಾಟ
ನವದೆಹಲಿ (ಐಎಎನ್‌ಎಸ್):   ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಯುಪಿಎ ನೇತೃತ್ವದ ಕಾಂಗ್ರೆಸ್ ಮತ್ತು ಪ್ರತಿಪಕ್ಷವಾದ ಬಿಜೆಪಿ ಪರಸ್ಪರ ಕೆಸರೆರಚಾಟ ಮುಂದುವರಿಸಿವೆ.

ಈ ಹಗರಣವನ್ನು ಬೊಫೋರ್ಸ್‌ ಹಗರಣಕ್ಕೆ ಹೋಲಿಸಿರುವ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.ಹೆಲಿಕಾಪ್ಟರ್ ಖರೀದಿಗೆ ನಿಗದಿಗೊಳಿಸಿದ್ದ ಕಡ್ಡಾಯ ತಾಂತ್ರಿಕ ಮಾನದಂಡಗಳು ಬದಲಾಗಿರುವುದು 2003ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಎಂದು ಅದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT