ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದ ಹೂ ಮೆಗಾಪ್ಲಾಶ್ ಗುಲಾಬಿ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು ಸುತ್ತಮುತ್ತಲಿನ ರೈತರು ಹಣದಾಸೆಗೆ ತಮ್ಮ ಸಾಗುವಳಿ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಣದ ಆಕರ್ಷಣೆಗೆ ಒಳಗಾಗದ ರೈತರೂ ಇದ್ದಾರೆ. ಅವರಲ್ಲಿ ಅನೇಕರು ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಬರುವ ಹೂಗಳನ್ನು ಬೆಳೆಯಲು ಗಮನ ಹರಿಸುತ್ತಿದ್ದಾರೆ.

ಬೆಂಗಳೂರು ಹೊರವಲಯದ ದೊಡ್ಡಗುಬ್ಬಿ ಸಮೀಪದ ರಾಂಪುರದ ರೈತ ಆರ್.ಎಂ.ಕಾಂತಕುಮಾರ್ ಐದು ಎಕರೆಯಲ್ಲಿ ‘ಮೆಗಾಪ್ಲಾಶ್’ ಎಂಬ ತಳಿಯ ಗುಲಾಬಿ ಬೆಳೆಯುತ್ತಿದ್ದಾರೆ. ಬಟನ್ ರೋಸ್‌ಗಿಂತ  ದೊಡ್ಡದಾದ ಈ ಗುಲಾಬಿ ಹೂಗಳು ನೋಡಲು ಆಕರ್ಷಕವಾಗಿವೆ. ಈ ಗುಲಾಬಿಗಳಿಗೆ ಇತರೆ ಗುಲಾಬಿಗಳಿಗಿಂತ ಹತ್ತು ರೂ ಹೆಚ್ಚು ಬೆಲೆ ಇದೆ ಎನ್ನುತ್ತಾರೆ ಕಾಂತಕುಮಾರ್.

ದೊಡ್ಡಗುಬ್ಬಿ ಸುತ್ತಮುತ್ತ  ಮೆಗಾಪ್ಲಾಶ್ ಗುಲಾಬಿ ಬೆಳೆದವರಲ್ಲಿ ಅವರು ಮೊದಲಿಗರು. ಗೆಳೆಯರ ನೆರವಿನಿಂದ ಪುಣೆಯಿಂದ ಗಿಡಗಳನ್ನು ತರಿಸಿ ನಾಟಿ ಮಾಡಿದ್ದಾರೆ.  ಮೆಗಾಪ್ಲಾಶ್ ಗುಲಾಬಿ ಗಿಡಗಳಲ್ಲಿ ಹೂ ಕಾಣಿಸಿಕೊಳ್ಳುವವರೆಗೂ ಮುತುವರ್ಜಿವಹಿಸಬೇಕು. ಸಕಾಲಕ್ಕೆ ನೀರುಣಿಸಿ ಗೊಬ್ಬರ ಹಾಗೂ ಔಷಧಿ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಗುಲಾಬಿ ಗಿಡಗಳು  ಹತ್ತು ವರ್ಷಗಳವರೆಗೆ ಸತತವಾಗಿ ಹೂ ಬಿಡುತ್ತವೆ. ಗುಲಾಬಿ ಕಡ್ಡಿಗಳನ್ನು ಐದು ಅಡಿಗಳ ಅಂತರದ ಸಾಲುಗಳಲ್ಲಿ ನಾಟಿ ಮಾಡಬೇಕು. ಸಾಲುಗಳ ನಡುವೆ ಒಂದು ಅಡಿ ಆಳದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮುಚ್ಚಬೇಕು. ಬಳಿಕ ಸಾಲುಗಳಿಗೆ ಮೂರು ದಿನಕ್ಕೊಮ್ಮೆ ನೀರು ಬಿಡಬೇಕು. ಎರಡು ಸಲ ನೀರು ಬಿಟ್ಟ ಬಳಿಕ ಕಡ್ಡಿಗಳನ್ನು ನಾಟಿ ಮಾಡಬೇಕು.

ಒಂದು ಎಕರೆಗೆ  ಹತ್ತು ಟನ್ ಕೊಟ್ಟಿಗೆ ಗೊಬ್ಬರ ಬೇಕಾಗುತ್ತದೆ. ಸುಮಾರು 2250  ಮೆಗಾಪ್ಲಾಶ್  ಗಿಡದ  ಕಡ್ಡಿಗಳು ನಾಟಿಗೆ ಬೇಕಾಗುತ್ತವೆ. ನಾಟಿ ಮಾಡಿದ ಹದಿನೈದು ದಿನಗಳ ನಂತರ ಗಿಡಕ್ಕೆ ಎಲೆ ರೋಗ ಹಾಗೂ ನುಸಿ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಹದಿನೈದು ದಿನಕ್ಕೊಮ್ಮೆ ಸಾಫ್ ಮತ್ತು ಮೊನೊಕ್ರೊಟೊಫಸ್ ದ್ರಾವಣವನ್ನು ಗಿಡಗಳಿಗೆ ಸಿಂಪಡಿಸಬೇಕು. ತಿಂಗಳಿಗೊಮ್ಮೆ ಪ್ರತಿ ಗಿಡದ ಬುಡಕ್ಕೆ ಡಿಎಪಿ  (ರಾಸಾಯನಿಕ) ಗೊಬ್ಬರ ಹಾಕಿದರೆ ಗಿಡಗಳು ಬಲಗೊಳ್ಳುತ್ತವೆ.

ನಾಟಿ ಮಾಡಿದ ಎರಡು ತಿಂಗಳ ಬಳಿಕ ಗಿಡದಲ್ಲಿ ಮೊಗ್ಗುಗಳು ಕಾಣಿಸಿಕೊಳ್ಳತ್ತವೆ. ಒಂದು ಎಕರೆಯಲ್ಲಿ ಬೆಳೆ ಇದ್ದರೆ ನಿತ್ಯ 30 ರಿಂದ 40 ಕೇಜಿಯಷ್ಟು ಹೂ ಕೊಯ್ಲು ಮಾಡಬಹುದು. ಗಿಡಗಳ ನಿರ್ವಹಣೆಗೆ ಆರು ಸಾವಿರ ರೂ ಖರ್ಚು ಬರುತ್ತದೆ. ಒಟ್ಟಾರೆ ಎಕರೆಗೆ 30ರಿಂದ 35 ಸಾವಿರ ಆದಾಯ ಪಡೆಯಬಹುದು ಎನ್ನುತ್ತಾರೆ ಕಾಂತಕುಮಾರ್.

ಈ  ಮೆಗಾಪ್ಲಾಶ್  ಗುಲಾಬಿಯೊಂದಿಗೆ ರೂಬಿ, ಬಟನ್ ಮತ್ತಿತರ ತಳಿಯ ಗುಲಾಬಿಗಳನ್ನು  ಕಾಂತಕುಮಾರ್ ಬೆಳೆಯುತ್ತಿದ್ದಾರೆ. ಕಾಂತಕುಮಾರ್ ಅವರ ಮೊಬೈಲ್‌ನಂಬರ್- 94482 36472.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT