ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಾಂಶದ ಹಣ ನೀಡಿ: ಸಹಕಾರಿ ಸಂಸ್ಥೆಗಳಿಗೆ ಸಲಹೆ

Last Updated 17 ಜುಲೈ 2012, 6:55 IST
ಅಕ್ಷರ ಗಾತ್ರ

ಗದಗ: ಸಹಕಾರಿ ಸಂಸ್ಥೆಗಳು ಲಾಭಾಂಶದಲ್ಲಿನ ಸ್ವಲ್ಪ ಹಣವನ್ನು ಶುದ್ಧ ಕುಡಿಯುವ ನೀರಿನ ಯೋಜನೆಗೆ ತೊಡಗಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಕರೆ ನೀಡಿದರು.

ನಗರದಲ್ಲಿ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಕೆ.ಎಚ್.ಪಾಟೀಲ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಸೋಮವಾರ ಏರ್ಪಡಿಸಿದ್ದ ಶುದ್ಧ ನೀರಿಗಾಗಿ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಸಹಕಾರಿ ವರ್ಷಾಚರಣೆ ಎಂದು ಘೋಷಿಸಿದೆ. ಸಹಕಾರಿ ಸಂಘಗಳು ಲಾಭಾಂಶದಲ್ಲಿ ಸ್ವಲ್ಪ ಹಣವನ್ನು ಘಟಕ ಸ್ಥಾಪನೆಗೆ ನೀಡಬೇಕು.

ಸ್ವಯಂ ಸೇವಾ ಸಂಸ್ಥೆಗಳು, ವೈದ್ಯರು ಹಾಗೂ ಇತರರನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೇ 13ನೇ ಹಣಕಾಸಿನ ಅನುದಾನವನ್ನು ಶುದ್ಧ ನೀರು ಘಟಕ ಸ್ಥಾಪನೆಗೆ ಬಳಸಬಹುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪಾಟೀಲ ಸಲಹೆ ನೀಡಿದರು.

ಶುದ್ಧ ನೀರು ಕುರಿತು `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ಲೇಖನ ನನಗೆ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ತುಂಬಿತು. ಲೇಖನ ಓದಿ ಹಲವು ಮಂದಿ ಕರೆ ಮಾಡಿ ಘಟಕ ಸ್ಥಾಪಿಸುವಂತೆ ಮನವಿ ಮಾಡಿದರು. 30 ಘಟಕ ಸ್ಥಾಪಿಸಲು ವರ್ಷ ಬೇಕಾಯಿತು. ಜನಾಂದೋಲನ ಬಳಿಕ ತಿಂಗಳಲ್ಲಿ 20 ಘಟಕ ಕಾರ್ಯಾರಂಭ ಮಾಡಿವೆ. 15-20 ದಿನಗಳಲ್ಲಿ ಮತ್ತೆ 20 ಘಟಕಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.

ಅಂಕಿ ಅಂಶದ ಪ್ರಕಾರ ದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಪ್ರತಿ 20 ಸೆಕೆಂಡಿಗೆ ಒಂದು ಶಿಶು ಸಾವನ್ನಪ್ಪುತ್ತಿವೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಶುದ್ಧ ನೀರು ಘಟಕ ಸ್ಥಾಪನೆಗೆ ಮುಂದಾಗುವ ಗ್ರಾಮಗಳಿಗೆ ಫೌಂಡೇಷನ್ ವತಿಯಿಂದ ನೆರವು ನೀಡಲಾಗುವುದು. ಶುದ್ಧ ಘಟಕ ಸ್ಥಾಪಿಸಲು ಸರ್ಕಾರ ಕರೆದಿರುವ ಟೆಂಡರ್‌ನಲ್ಲಿ ರೂ. 20, 40 ಲಕ್ಷ ನಮೂದಿಸಲಾಗಿದೆ.

ಆದರೆ ಅದು ನಿಜವಾದ ಬೆಲೆಯಲ್ಲ. ನಾನು ಮೊದಲ ಘಟಕ ಸ್ಥಾಪನೆ ಮಾಡಿದಾಗ ಯಂತ್ರದ ವೆಚ್ಚ ರೂ. 5ಲಕ್ಷ. ಎರಡನೇ ಘಟಕ ಆರಂಭಿಸುವ ವೇಳೆಗೆ ಯಂತ್ರದ ವೆಚ್ಚ ಮತ್ತಷ್ಟು ಕಡಿಮೆಯಾಗಿತ್ತು. ಮುಂದಿನ ಆ. 9ರೊಳಗೆ ಕನಿಷ್ಠ ಒಂದು ಕೋಟಿ ಜನತೆಗೆ ಶುದ್ಧ ಕುಡಿಯುವ ನೀರು ದೊರಕುವಂತಾಗಬೇಕು ಎಂದು ಆಶಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಸಿಎಸ್‌ಐ ಪೊಲೀಯೋ ಹೋಂ ಮಕ್ಕಳು ಉದ್ಘಾಟಿಸಿದರು. ಕಾರ್ಯಾಗಾರಕ್ಕೆ 22 ಜಿಲ್ಲೆಗಳ ಜನತೆ ಆಗಮಿಸಿದ್ದರು.ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಗಡ್ಡದೇವರಮಠ, ನವದೆಹಲಿಯ ಅರ್ಬನ್ ಬ್ಯಾಂಕ್ ಫೆಡರೇಷನ್ ಸಲಹೆಗಾರ ಕೃಷ್ಣ, ಗುರುಶಾಂತಪ್ಪ, ಜಮಾದರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT