ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಸಂಚಾರಕ್ಕೆ ಅವಕಾಶ ನೀಡಲು ಮನವಿ

ಮಡಿಕೇರಿ– ಮಂಗಳೂರು ತಾತ್ಕಾಲಿಕ ರಸ್ತೆ
Last Updated 18 ಸೆಪ್ಟೆಂಬರ್ 2013, 8:16 IST
ಅಕ್ಷರ ಗಾತ್ರ

ಮಡಿಕೇರಿ: ಮುಂಗಾರು ಮಳೆಯಿಂದ ಕೊಯಿನಾಡು ಬಳಿಯಲ್ಲಿ ಕುಸಿತಗೊಂಡಿದ್ದ ಮಡಿಕೇರಿ –ಮಂಗಳೂರು ಹೆದ್ದಾರಿ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯಲ್ಲಿ ಲಾರಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಸುಳ್ಯ ತಾಲ್ಲೂಕಿನ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್, ರಸ್ತೆ ಕುಸಿತಗೊಂಡು ಮೂರು ತಿಂಗಳುಗಳೇ ಕಳೆದಿದ್ದು, ಮಳೆ ಕೂಡ ಕಡಿಮೆಯಾಗಿದೆ. ಆದರೂ ಕೂಡ ರಸ್ತೆ ಕಾಮಗಾರಿ ನಡೆಸಲು ಸಂಬಂಧಿಸಿದ ಇಲಾಖೆ ಮುಂದಾಗಿಲ್ಲ ಎಂದು ಅವರು ಆರೋಪಿಸಿದರು.

ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯಲ್ಲಿ ಲಾರಿಗಿಂತಲೂ ಭಾರವಿರುವ ಹೈಟೆಕ್ ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಲಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಿಲ್ಲ ಎಂದು ಅವರು ದೂರಿದರು.

ಇದರಿಂದಾಗಿ ಅನೇಕ ಕಾರ್ಮಿಕರು ಹಾಗೂ ಲಾರಿ ಮಾಲೀಕರು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸೆ. 23ರೊಳಗೆ ಈ ಬಗ್ಗೆ ಸಂಬಂಧಿಸಿದ ಇಲಾಖಾ ಸಿಬ್ಬಂದಿ ಕ್ರಮ ಕೈಗೊಳ್ಳದಿದ್ದಲ್ಲಿ ಸಂಪಾಜೆ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ಖಜಾಂಚಿ ಗೋಪಾಲ ಕೃಷ್ಣ, ಲಾರಿ ಮಾಲೀಕ ಕೆ.ಆರ್. ಅಪ್ಪುಕುಂಞಿ ಹಾಜರಿದ್ದರು. 

ವಿಶ್ವೇಶ್ವರಯ್ಯ ದಿನಾಚರಣೆ
ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆಯು ಮಂಗಳವಾರ ನಡೆಯಿತು.

ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಸೋಮವಾರಪೇಟೆಯ ಸಮೂಹ ಸಂಪನ್ಮೂಲ ವ್ಯಕ್ತಿ ಎ.ಜೆ. ಮೇರಿ ಚಾಲನೆ ನೀಡಿದರು.

ವಿಶ್ವೇಶ್ವರಯ್ಯ ಅವರ ಜೀವನ ಸಾಧನೆಯನ್ನು ತಿಳಿಸಿದರು. ಶಿಕ್ಷಣ ಇಲಾಖೆಯ ಸರಕಾರಿ ಶಾಲೆಗಳ 6 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 'ಒಲಂಪಿಯಾಡ್' ಗಣಿತ ಮತ್ತು ವಿಜ್ಞಾನ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ವಿಶ್ವೇಶ್ವರಯ್ಯ ಅವರ  ಬಗ್ಗೆ ಶಾಲಾ ವಿದ್ಯಾರ್ಥಿಗಳಾದ ತೇಜಸ್ವಿನಿ, ಮೋಕ್ಷಿತಾ, ಭವ್ಯಾ, ಸೈಯದ್ ಜುಹೇಬ್, ವಿನಯ್ ಮಾತನಾಡಿದರು. 

ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ದೇವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. 6ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದ 'ಒಲಂಪಿಯಾಡ್' ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT