ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಹರಿದು 20 ಭಕ್ತರು ಚಿರನಿದ್ರೆಗೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಐಎಎನ್‌ಎಸ್): ರಸ್ತೆ ಬದಿ ಮಲಗಿದ್ದ ಭಕ್ತರ ಮೇಲೆ ಲಾರಿಯೊಂದು ಹರಿದು 20 ಮಂದಿ ದಾರುಣ ಸಾವಿಗೀಡಾಗಿ, 6 ಜನ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಹೆದ್ದಾರಿಯಲ್ಲಿ ಮುಂಜಾನೆ ನಡೆದಿದೆ.

`ಮೃತರಲ್ಲಿ 9 ಮಹಿಳೆಯರು, ಇಬ್ಬರು ಮಕ್ಕಳು ಸೇರಿದ್ದಾರೆ. ಲಾರಿಯ ಚಕ್ರ ಸ್ಫೋಟಿಸಿ ಚಾಲಕನ ನಿಯಂತ್ರಣ ಕಳೆದುಕೊಂಡು 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ~ ಎಂದು ಅಹ್ಮದಾಬಾದ್ ವಲಯ ಐಜಿಪಿ ಆಶಿಷ್ ಭಾಟಿಯಾ ತಿಳಿಸಿದ್ದಾರೆ.

ಈ ನತದೃಷ್ಟರೆಲ್ಲರೂ ರಾಜ್ಯದ ಸಬರ್‌ಕಾಂತ ಜಿಲ್ಲೆಯಿಂದ ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳಲು ರಾಜಧಾನಿಯಿಂದ 80 ಕಿ.ಮೀ ದೂರದಲ್ಲಿರುವ ಸೈಯದ್ ಮೊಹಮ್ಮದ್ ಶಾ ಬುಖಾರಿ ಅವರ ಗದ್ದುಗೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯ ವಿಶ್ರಾಂತಿಗಾಗಿ ರಸ್ತೆ ಬದಿ ಮಲಗಿದ್ದರು.

`ಬಹಳಷ್ಟು ದೂರದಿಂದ ನಡೆದು ಬಂದಿದ್ದ ನಾವೆಲ್ಲರೂ ದಣಿದಿದ್ದೆವು. ಕೊಂಚ ಹೊತ್ತು ಸುಧಾರಿಸಿಕೊಳ್ಳುವ ಸಲುವಾಗಿ ಮಲಗಿದ್ದೆವು. ಆದರೆ ಜನರ ಕೂಗಾಟ ಕೇಳಿ ಎಚ್ಚರಗೊಂಡ ನನಗೆ ನಾನೆಷ್ಟು ಅದೃಷ್ಟವಂತ ಎಂಬುದು ತಿಳಿಯಿತು~ ಎಂದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಸೈಯದ್ ಇರ್ಷಾದ್ ಖಾನ್ ಎಂಬುವವರು ಹೇಳಿದ್ದಾರೆ.

ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ಹಾಗೂ ಗಾಯಾಳುಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಜಯ ನಾರಾಯಣ ವ್ಯಾಸ್ ತಿಳಿಸಿದ್ದಾರೆ.  ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ನ ಭಕ್ತರು ಪಾದಯಾತ್ರೆಯ ಮೂಲಕ ಈ ಉರುಸ್‌ಗೆ ತೆರಳುವ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT