ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ಗಲಾಟೆ: ಐವರ ಬಂಧನ

Last Updated 7 ಜುಲೈ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತರಾಗಿ ಲಾಲ್‌ಬಾಗ್‌ಗೆ ಶನಿವಾರ ರಾತ್ರಿ ಅತಿಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ ಆರೋಪದ ಮೇಲೆ ಐದು ಮಂದಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರದ ಮಂಜುನಾಥ್ (22), ಆತನ ಸ್ನೇಹಿತರಾದ ಪ್ರೇಮ್‌ಕುಮಾರ್(22), ಶಶಿಧರ್ (21), ಗುರುಪ್ರಸಾದ್ (20) ಮತ್ತು ಶ್ರೇಯಸ್ (19) ಬಂಧಿತರು. ಆರೋಪಿಗಳಿಂದ ಕಾರು ಹಾಗೂ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪಾನಮತ್ತರಾಗಿ ರಾತ್ರಿ ಒಂದು ಗಂಟೆ ಸುಮಾರಿಗೆ ಕಾರಿನಲ್ಲಿ ಲಾಲ್‌ಬಾಗ್‌ನ ಕೆ.ಎಚ್.ರಸ್ತೆ ಕಡೆಯ ಪ್ರವೇಶದ್ವಾರಕ್ಕೆ ಬಂದ ಆ ಐದು ಮಂದಿ, ಸೆಕ್ಯುರಿಟಿ ಗಾರ್ಡ್‌ಗೆ ಬೆದರಿಸಿ ಒಳ ನುಗ್ಗಿದ್ದಾರೆ.

ನಂತರ ಚಾಲಕ ಮಂಜುನಾಥ್, ಲಾಲ್‌ಬಾಗ್ ಆವರಣದಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ರಸ್ತೆ ಮಧ್ಯದ ಬ್ಯಾರಿಕೇಡ್‌ಗಳಿಗೆ ವಾಹನ ಗುದ್ದಿಸಿದ್ದಾನೆ. ಅಲ್ಲದೇ, ಪಾದಚಾರಿ ಮಾರ್ಗದಲ್ಲಿನ ಹೂ ಕುಂಡಗಳ ಮೇಲೆ ವಾಹನ ಹತ್ತಿಸಿ ದಾಂಧಲೆ ನಡೆಸಿದ್ದಾನೆ. ಈ ವೇಳೆ ಲಾಲ್‌ಬಾಗ್‌ನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಅವರೆಲ್ಲರನ್ನೂ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಲಾಲ್‌ಬಾಗ್‌ನ ಭದ್ರತಾ ವಿಭಾಗದ ಮೇಲ್ವಿಚಾರಕ ಮುನಿರಾಜು ಅವರು ದೂರು ಕೊಟ್ಟಿದ್ದಾರೆ. ಅತಿಕ್ರಮ ಪ್ರವೇಶ (ಐಪಿಸಿ-447), ಬೆದರಿಕೆ (ಐಪಿಸಿ-506) ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ (ಐಪಿಸಿ-427) ಆರೋಪದ ಮೇಲೆ ಬಂಧಿತರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೇ, ಮಂಜುನಾಥ್ ವಿರುದ್ಧ ಪಾನಮತ್ತ ಚಾಲನೆ ಆರೋಪದಡಿ ವಿಲ್ಸನ್‌ಗಾರ್ಡನ್ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳಾದ ಮಂಜುನಾಥ್, ಪ್ರೇಮ್‌ಕುಮಾರ್ ಮತ್ತು ಶಶಿಧರ್ ಲಾಲ್‌ಬಾಗ್ ಆವರಣದಲ್ಲಿ ತಂಪು ಪಾನೀಯ ಮಾರಾಟ ಮಳಿಗೆ ಇಟ್ಟುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT