ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯಕ್ಕೆ ಕಾರ್ನಾಡ್‌ ಟೀಕೆ

ಸಲಿಂಗರತಿ: ಸುಪ್ರೀಂಕೋರ್ಟ್ ತೀರ್ಪಿಗೆ ತೀವ್ರ ವಿರೋಧ
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಲಿಂಗರತಿ ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಲೈಂಗಿಕ ಕಾರ್ಮಿಕರ ಒಕ್ಕೂಟದ ಸದಸ್ಯರು  ನಾಟಕಕಾರ ಗಿರೀಶ್ ಕಾರ್ನಾಡ್‌ ನೇತೃತ್ವದಲ್ಲಿ ನಗರದ ಪುರಭವನದ  ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.

ಮೈಸೂರು, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ಪ್ರತಿಭಟನಾಕಾರರು, ಮಧ್ಯಾಹ್ನ 3.30ರ ಸುಮಾರಿಗೆ ಪುರಭವನದ ಬಳಿ ಜಮಾಯಿಸಿ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಘೋಷಣೆ ಕೂಗಿ­ದರು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದು­ಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗಿರೀಶ್ ಕಾರ್ನಾಡ್, ‘ಪ್ರೀತಿ ವಿಚಾರದಲ್ಲಿ ಲಿಂಗ ತಾರತಮ್ಯ ಇರಬಾರದು. ಮನುಷ್ಯರನ್ನು ಪ್ರೀತಿಸಲು ಯಾವುದೇ ಕಾನೂನು ಅಡ್ಡಿಯಾಗಬಾರದು. ಈ ಬಗ್ಗೆ ‘ಸಲಿಂಗರತಿ ಅಪರಾಧವಲ್ಲ’ ಎಂದು ದೆಹಲಿ ಹೈಕೋರ್ಟ್‌ 2009ರಲ್ಲಿ ನೀಡಿದ್ದ ತೀರ್ಪು ನ್ಯಾಯಯುತವಾಗಿತ್ತು. ನಾಲ್ಕು ವರ್ಷಗಳ ಬಳಿಕ ಆ ತೀರ್ಪನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿ ಸಲಿಂಗರತಿ ‘ಶಿಕ್ಷಾರ್ಹ ಅಪರಾಧ’ ಎಂದು ತೀರ್ಪು ನೀಡಿರುವುದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕು­ಗಳನ್ನು ಕಸಿದುಕೊಳ್ಳುವಂತಿದೆ’ ಎಂದರು.

ನಂತರ ಮಾತನಾಡಿದ ಪರ್ಯಾಯ ಕಾನೂನು ವೇದಿಕೆ ಸಂಘಟನೆಯ ಸದಸ್ಯ ವಿನಯ್ ಶ್ರೀನಿವಾಸ್‌, ‘ಸಲಿಂಗಿ ಅಥವಾ ಲೈಂಗಿಕ ಅಲ್ಪ­ಸಂಖ್ಯಾ­ತರಾಗಿ ಹುಟ್ಟುವುದು ಆ ಮಗುವಿನ ತಪ್ಪಲ್ಲ. ಅದೊಂದು ಸಹಜ ವಿದ್ಯಮಾನ. ಹೀಗಾಗಿ ಲೈಂಗಿಕ ಅಲ್ಪ­ಸಂಖ್ಯಾ­ತರನ್ನು ದೂಷಿಸುವುದು ಸರಿಯಲ್ಲ. ಆದರೆ, ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನ ಮೂಲಕ ಆ ಸಮುದಾಯವನ್ನು ತಿರಸ್ಕಾರದಿಂದ ನೋಡಿದೆ. ಅಲ್ಲದೇ, ಮುಕ್ತವಾಗಿ ಬದುಕುವ, ಪ್ರೀತಿಸುವ, ಅಭಿವ್ಯಕ್ತಪಡಿಸುವ ಮತ್ತು ತಾರತಮ್ಯ ಮುಕ್ತ ಹಕ್ಕುಗಳನ್ನು ಆನಂದಿಸಲು ಲೈಂಗಿಕ ಅಲ್ಪಸಂಖ್ಯಾತರು ಅರ್ಹರಲ್ಲ ಎಂದು ಹೇಳಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ ಪುನರ್‌ಪರಿಶೀಲನೆ ನಡೆಸಬೇಕು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯಲು ಸರ್ಕಾರ ಮುಂದಾಗಬೇಕು. ತೀರ್ಪಿನ ವಿರುದ್ಧ ರಾಜ್ಯದೆಲ್ಲೆಡೆ ಹಂತ ಹಂತವಾಗಿ ಹೋರಾಟ ನಡೆಸಲಾಗು­ವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

‘ಮನುಸ್ಮೃತಿಯು ಈ ದೇಶದ ಜನರ ಮನಸ್ಸನ್ನು ಕೆಡಿಸಿ ಹಾಕಿದೆ. ಸಂವಿಧಾನ­ಬದ್ಧವಾಗಿರುವ ದೇಶದ ಆಡಳಿತ ಕೂಡ ಮನುಸ್ಮೃತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ದೊಡ್ಡ ದುರಂತ. ಜಾತಿ, ಧರ್ಮ, ಲಿಂಗ ತಾರತಮ್ಯಗಳಿಗೆ ಮನುಸ್ಮೃತಿಯೇ ಮೂಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮನುಸ್ಮೃತಿ ಹಾಗೂ ಸಂವಿಧಾನದ ಕಲಂ 377 ಎಂದು ಬರೆದಿದ್ದ ಫಲಕಗಳನ್ನು ದಹನ ಮಾಡಿದರು.

ಗುಡ್ ಆಸ್ ಯು, ಸ್ವಭಾವ, ಸಾಧನಾ ಮಹಿಳಾ ಸಂಘ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಗಳ (ಎನ್‌ಜಿಒ) ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT