ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ರಾಜಕಾರಣಕ್ಕೆ ಹೊಸ ದೃಷ್ಟಿಕೋನ

Last Updated 18 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾ ಗಪುರದ ವಾರ್ಧಾ ರಾಷ್ಟ್ರಪಿತ ಗಾಂಧಿಯ  ಬದುಕು, ಹೋರಾಟವನ್ನು ನೆನಪಿಸುವ ತಾಣ. ಅಲ್ಲಿ ಗಾಂಧಿಯ  ಹೆಸರಿನ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯವಿದೆ. ರಾಷ್ಟ್ರಪಿತನ ನೂರಾರು ಕನಸುಗಳ ಬೀಜ ಹೊತ್ತು ಆರಂಭವಾದ ಈ ವಿಶ್ವ ವಿದ್ಯಾಲಯದಲ್ಲಿ ಆ ಕನಸುಗಳೆಲ್ಲ ಸಾಕಾರವಾಗಿದೆಯೊ ಇಲ್ಲವೋ, ಆದರೂ ಮಹಿಳೆಯರ ದಾಸ್ಯ ವಿಮೋಚನೆಯ ಕನಸು ಕಂಡ ಆ ಮಹಾತ್ಮನ ಜೀವನ ದರ್ಶನವನ್ನು ನೆನಪಿಸುವ, ಅಂತರಾಳದ ಧ್ವನಿಗೆ ಸ್ಪಂದಿಸುವಂತಹ ಚಿಂತನ ಮಂಥನವು ಕಳೆದ ತಿಂಗಳು  ಜನವರಿ 21ರಿಂದ 24ರವರೆಗೆ ವಾರ್ಧಾದಲ್ಲಿ ನಡೆಯಿತು.

ಸಂದರ್ಭ: ಇಪ್ಪತ್ತೆಂಟು ವರ್ಷ ಪ್ರಾಯದ ಭಾರತ ಮಹಿಳಾ ಅಧ್ಯಯನ ಸಂಸ್ಥೆಯ 13ನೇ ವಾರ್ಷಿಕ ಸಮ್ಮೇಳನ.
‘ಉಪವಾಸ ಸತ್ಯಾಗ್ರಹ’ ಗಾಂಧಿ ಸ್ವಾತಂತ್ರ್ಯ ವಿಮೋಚನೆಗೆ ಬಳಸಿದ ಪ್ರಮುಖ ಅಸ್ತ್ರಗಳಲ್ಲೊಂದು. ಇಂದಿಗೂ ಸುಪರಿಚಿತವಾಗಿರುವ ಆ ಅಸ್ತ್ರದ ಬಳಕೆಗೆ ಹೊಸ ವ್ಯಾಖ್ಯಾನವನ್ನು ನೀಡಿದ  ಮಣಿಪುರದ ಶರ್ಮಿಳಾ ಇರೋಮ್‌ಳ ಹತ್ತು ವರ್ಷದ ದೀರ್ಘ ಉಪವಾಸ

ಇಲ್ಲಿ ಹುಟ್ಟುವ ಸಿದ್ಧಾಂತವನ್ನು ಹೋರಾಟದ ಕ್ಷೇತ್ರಕ್ಕೆ ಕೊಂಡೊಯ್ಯಿರಿ“- ಎಂದ ಭಾರತ ಮಹಿಳಾ ಅಧ್ಯಯನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ದಿವಂಗತ  ಪ್ರೊ. ನೀರಾ ದೇಸಾಯಿಯವರ ಮಾತನ್ನು ಅಕ್ಷರಶಃ ನಿಜವಾಗಿಸುವಂತೆ ಮಹಿಳಾ ಚಳವಳಿಗೆ ಅರ್ಥಪೂರ್ಣ ವ್ಯಾಖ್ಯಾನವನ್ನು ನೀಡುವಲ್ಲಿ ಈ ಸಮ್ಮೇಳನ ಯಶಸ್ವಿಯಾಯಿತು.

 “ಅಂಚಿಗೆ ತಳ್ಳುವವರನ್ನು ಎದುರಿಸುವುದು, ಅಧಿಕಾರ ಹೇರುವವರಿಗೆ ಸವಾಲೆಸೆಯುವುದು ಮತ್ತು ಲಿಂಗ ರಾಜಕಾರಣವನ್ನು ಹೊಸ ದೃಷ್ಟಿಕೋನದಿಂದ ನೋಡುವುದು” -  ಈ ಸಮ್ಮೇಳನದ ಮುಖ್ಯ ಅಜೆಂಡಾ ಮತ್ತು ಇಂತಹ ಚರ್ಚೆಯ ಮೂಲಕ ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವವನ್ನು ತರುವುದು ಸಮ್ಮೇಳನದ ಮುಖ್ಯ ಗುರಿಯಾಗಿತ್ತು.

ಕವಯಿತ್ರಿ, ಕಾರ್ಯಕರ್ತೆ ಶರ್ಮಿಳಾ ಇರೋಮ್ ಆರಂಭಿಸಿದ ಆಮರಣಾಂತ ಉಪವಾಸ ಸತ್ಯಾಗ್ರಹ  ಈಗ ಹತ್ತು ವರ್ಷಗಳನ್ನು ಪೂರೈಸಿದೆ. ಇಂಫಾಲದಲ್ಲಿ ಸರ್ಕಾರ ಅವಳಿಗೆ ಬಲವಂತವಾಗಿ ಮೂಗಿನ ಮೂಲಕ ಆಹಾರವನ್ನು ನೀಡುವ ದಬ್ಬಾಳಿಕೆ ನಡೆಸುತ್ತಿದೆಯೇ ಹೊರತು ಅವಳ ಪ್ರತಿಭಟನೆಯ ಗಾಯಕ್ಕೆ ಮುಲಾಮು ಹಾಕುವ ಯೋಚನೆ ಮಾಡುತ್ತಿಲ್ಲ. 1958ರ ಶಸ್ತ್ರಾಸ್ತ್ರಗಳ ವಿಶೇಷ ಕಾಯಿದೆ ( ಅಊಖಅ )ಯನ್ನು ತೆಗೆದುಹಾಕಬೇಕೆಂದು ಉಪವಾಸ ಮಾಡುತ್ತಿರುವ ಆಕೆಯ ಬೇಡಿಕೆಯನ್ನು ಧಿಕ್ಕರಿಸುತ್ತಿರುವ ಸರ್ಕಾರ ದಂಗೆಯನ್ನು ಹತ್ತಿಕ್ಕುತ್ತಿದ್ದೇವೆಂಬ ನೆಪದಲ್ಲಿ  ಸೇನೆಯ ಮೂಲಕ ಅಮಾಯಕ ಜನರನ್ನು ಗುಂಡಿಕ್ಕಿ ಕೊಂದು, ಹಿಂಸಿಸಿ, ವಿಶೇಷವಾಗಿ ಹೆಂಗಸರ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದೆ. ಹೀಗೆ ಬಲಿಯಾದವರೆಷ್ಟೋ! ಕಾರ್ಯಕರ್ತೆ ಮನೋರಮಾ ಸೇನೆಯ ಅತ್ಯಾಚಾರಕ್ಕೆ ಬಲಿಯಾಗಿ ಕೊನೆಗೆ ಕೊಲೆಯಾದಾಗ ಆ ಕೃತ್ಯದ ಕ್ರೌರ್ಯವನ್ನು ಪ್ರತಿಭಟಿಸಿ ಬೆತ್ತಲೆ ಮೆರವಣಿಗೆ ಮಾಡಿದ ಮಣಿಪುರದ ಮಹಿಳೆಯರ ದಾರುಣ ಹಾಗೂ ಶ್ರೌರ್ಯದ ಗಾಥೆಯನ್ನು ಇಂಗ್ಲಿಷಿನಲ್ಲಿ ಏಕವ್ಯಕ್ತಿ ಪ್ರದರ್ಶನದ ಮೂಲಕ ಸಮ್ಮೇಳನದಲ್ಲಿ ನೆರೆದಿದ್ದ ಜನ ನಿಬ್ಬೆರಗಾಗುವಂತೆ ಪ್ರಸ್ತುತ ಪಡಿಸಿದಳು ಪುಣೆಯ ರಂಗ ಕಲಾವಿದೆ, ಎಸ್.ವಿ. ಓಜಾ.

ಕಲಾವಿದೆಯ ರಾಜಕೀಯ ಸಂಕಲ್ಪ ಮತ್ತು ಬದ್ಧತೆ ನಾಟಕಕ್ಕೊಂದು ಹೋರಾಟದ ಚೌಕಟ್ಟನ್ನು ಕೊಟ್ಟಿತು. ’ನನ್ನ ದೇಹ ನನ್ನ ಆಯುಧ’ ಎನ್ನುತ್ತಾ ಹೋರಾಟದ ಪಂಜನ್ನು ಎತ್ತಿ ಹಿಡಿಯುವ ಶರ್ಮಿಳಾಳ ಸಾತ್ವಿಕ ಸಿಟ್ಟು ಇಡೀ ಸಭಾಂಗಣದಲ್ಲಿ ಹರಡಿ ಈ ಕಲಾ ಪ್ರಯೋಗ ಮಹಿಳಾ ಹೋರಾಟದ ಎಲ್ಲೆಯನ್ನು ವಿಸ್ತರಿಸಿದ್ದು, ಒಂದು ಗಮನಾರ್ಹ ಅಂಶವಾಗಿತ್ತು.

“ಜ್ಞಾನಿಯಾಗಿ ಪ್ರಯೋಗಾಲಯದಲ್ಲಿ ತಮ್ಮ ಪಾಡಿಗೆ ಮುಳುಗಿ ಹೋಗಿದ್ದ ನಿಶಾ ಬಿಸ್ವಾಸ್  ಸರ್ಕಾರದ ಕರ್ಫ್ಯೂ ಇದ್ದಾಗ ಹೊರಗೆ ಬಂದ ಕಾರಣಕ್ಕೆ ಬಂಧನಕ್ಕೊಳಗಾಗಿ 42 ದಿನಗಳ ಸೆರೆಮನೆ ವಾಸ ಅನುಭವಿಸಬೇಕಾಗಿ ಬಂತು. ಅದರಿಂದ ಕೆಲಸದಿಂದ ಸಸ್ಪೆಂಡ್. ಆಗ ಆಕರ್ಷಿಸಿದ್ದು ಲಾಲ್‌ಗಡ್ ಚಳವಳಿ. ಸಮಸ್ಯೆಯ ಹಲವು ಆಯಾಮಗಳನ್ನು, ಸರ್ಕಾರದೊಂದಿಗಿನ ತಮ್ಮ ಅನುಭವವನ್ನು  ಸಭೆಯ ಮುಂದೆ ನಿಶಾ ಬಿಚ್ಚಿಟ್ಟರು. ಭಾರತ ಸರ್ಕಾರದ ನೆರವಿನೊಂದಿಗೆ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಕಳೆದೆರಡು ದಶಕಗಳಲ್ಲಿ ’ಅಭಿವೃದ್ಧಿ’ಯ ಹೆಸರಿನಲ್ಲಿ ನಡೆಸಿರುವ ಹಗಲು ದರೋಡೆಯನ್ನು ಪ್ರತಿಭಟಿಸಿರುವ ಜನಾಂದೋಲನಗಳಲ್ಲಿ ಭಾಗವಹಿಸಿದ ಮಹಿಳೆಯರು ಅಸಂಖ್ಯ. ಅವರ ಮೇಲೆ ನಡೆದ ದಬ್ಬಾಳಿಕೆ, ಹಿಂಸೆಯ ವಿರುದ್ಧದ ಸಂಘಟನೆಯ ಸಮಸ್ಯೆಗಳು ಸಭೆಯಲ್ಲಿ ಚರ್ಚಿತವಾದವು.  ಕಳೆದ ಎರಡು ದಶಕಗಳಿಂದ ಈಶಾನ್ಯ ಭಾರತದ ಮತ್ತು ಕಾಶ್ಮೀರಿ ಹೆಂಗಸರ ಬಗ್ಗೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, 2002ರಲ್ಲಿ ಗುಜರಾತಿನ ಮಹಿಳೆಯರು ಎದುರಿಸಿದ ಸಂಕಷ್ಟಗಳು, 2007ರಲ್ಲಿ  ಸಾಮೂಹಿಕ ಅತ್ಯಾಚಾರಕ್ಕೊಳಗಾದ ಆಂಧ್ರದ ವಕಪಲ್ಲಿಯ ಮಹಿಳೆಯರ ಸಂಕಷ್ಟಗಳು - ಇವೆಲ್ಲವನ್ನು ಆ ಜಾಗಗಳಿಂದ ಬಂದ ಮಹಿಳೆಯರ ಅಧ್ಯಯನಗಳ ಮೂಲಕ ಅನಾವರಣಗೊಳಿಸಲಾುತು.

 ಕಾನೂನು ಮತ್ತು ಸರ್ಕಾರ - ಈ ಎರಡರ ಸಂಬಂಧಗಳು ಲಿಂಗದ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಮತ್ತು ಅದನ್ನು ಪರಿಕಲ್ಪನೆಯ ಚೌಕಟ್ಟಿನಲ್ಲಿಡುವ ಬಗೆ - ಇವು ಇಲ್ಲಿ ಚರ್ಚೆಯ ಮುಖ್ಯ ಕಾಳಜಿಗಳಾಗಿದ್ದವು. ವಿವಿಧ ಲೈಂಗಿಕ ಅಸ್ಮಿತೆಗಳನ್ನು ಸಮುದಾಯವಾಗಿ ಗುರುತಿಸುತ್ತಾ, ಹೆಣ್ಣಿನ ದೇಹ ಮತ್ತು ಅದನ್ನು ಕುರಿತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳಿಗೆ ಒಳಪಡಿಸುವುದು ಹೇಗೆ ಎಂಬುದರ ಚರ್ಚೆ ಗಟ್ಟಿ ದನಿಯಲ್ಲಿ ಕೇಳಿ ಬಂತು. ಸಂಪೂರ್ಣಾರ್ಥದಲ್ಲಿ ತಮ್ಮನ್ನು ಪ್ರಜೆಗಳನ್ನಾಗಿ ಸ್ವೀಕರಿಸಬೇಕೆಂಬುದನ್ನು ಸಾಮಾಜಿಕ ಚಳವಳಿಯ ಸ್ವರೂಪದಲ್ಲಿ ಕಾಣ ಬಯಸುವ ಕ್ವೀರ್ ಚಳವಳಿಯು ದ್ವಿಲಿಂಗತ್ವದ ಹೆಸರಿನಲ್ಲಿ ಉಭಯಲಿಂಗಿಗಳನ್ನು ಅಂಚಿಗೆ ತಳ್ಳುವುದರ ಮತ್ತು ಸಾಮಾಜಿಕ ಒತ್ತಡ ಹೇರುವುದರ ವಿರುದ್ಧದ ಹೋರಾಟವನ್ನು ಲೇಬಿಯಾ (ಲೆಸ್ಬಿಯನ್ಸ್ ಅಂಡ್ ಬೈಸೆಕ್ಷುಯಲ್ಸ್ ಇನ್ ಆ್ಯಕ್ಷನ್)ದ ಮೀನಾ ಗೋಪಾಲ್ ವಿಶದವಾಗಿ ಚರ್ಚಿಸಿದರು. ಈ ಎಲ್ಲ ಸವಾಲುಗಳ ನಡುವೆ, ದೆಹಲಿ ಉಚ್ಚ ನ್ಯಾಯಾಲವು ಇಂಡಿಯನ್ ಪೀನಲ್ ಕೋಡ್‌ನ ಸೆಕ್ಷನ್ 377ರನ್ವಯ ಸಲಿಂಗಕಾಮ ಅಪರಾಧವಲ್ಲವೆಂದು ಘೋಷಿರುವುದನ್ನು ಸಭೆ ಸಂತೋಷದಿಂದ ಸ್ವಾಗತಿಸಿತು. ಲೆಸ್ಬಿಯನ್, ಗೇ, ಉಭಯಲಿಂಗಿ ಮತ್ತು ಟ್ರಾನ್ಸ್ ಜೆಂಡರ್ ಸಮುದಾಯಗಳು ತಮ್ಮ ಕುಟುಂಬದಿಂದ ಮಾತ್ರವಲ್ಲದೆ, ಸರ್ಕಾರ ಮತ್ತು ಹೊರಗಿನ ಸಮುದಾಯದಿಂದಲೂ ಅಂಗೀಕೃತವಾಗಬಹುದಾದ ಹೊಸ ಭವಿಷ್ಯವನ್ನು ಎದುರು ನೋಡಬಹುದಾಗಿದೆ.

ಒಂಟಿ ಮಹಿಳೆಯರ ವೇದಿಕೆ
ರಾಜಸ್ಥಾನದ ಉದಯಪುರದ ಗಿನ್ನಿ ಶ್ರಿವಾತ್ಸವ್ ಅವರು “ಗಮನಕ್ಕೆ ಬಾರದ ಕ್ರಾಂತಿ“ಯೆಂದು ಹೆಸರಿಸಿ ಮಂಡಿಸಿದ ವಿಚಾರಗಳು ಕುತೂಹಲಗಾರಿಯಾಗಿದ್ದವು: ವಿಧವೆಯರು, ಗಂಡನಿಂದ ಬೇರ್ಪಟ್ಟ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರು ಸೇರಿ ಸಂಘಟಿತರಾಗಿರುವ ’ಒಂಟಿ ಮಹಿಳೆಯರ ಹಕ್ಕುಗಳ ರಾಷ್ಟ್ರೀಯ ವೇದಿಕೆ’ಯು ಮುಖ್ಯವಾಗಿ ರಾಜಸ್ಥಾನ, ಹಿಮಾಚಲಪ್ರದೇಶ, ಜಾರ್ಖಂಡ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ರಾಜ್ಯಗಳಲ್ಲಿರುವ ಕಡಿಮೆ ಆದಾಯದ ವಿಧವೆಯರು, ಗಂಡನಿಂದ ಬೇರ್ಪಟ್ಟವರು ಮತ್ತು ಒಂಟಿ ಮಹಿಳೆಯರನ್ನು ಒಳಗೊಂಡಿದ್ದು ಇನ್ನೂ ಉಳಿದ ರಾಜ್ಯಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ, ಈ ಸಂಘಟನೆಯ ಮಹಿಳೆಯರು ’ಒಂಟಿ’ಯೆಂಬ ಭಾವ ತೊಲಗಿಸಿಕೊಂಡು ತಮ್ಮ ಶಕ್ತಿ, ಸಾಮರ್ಥ್ಯಗಳ ಮೂಲಕ ತಮ್ಮ ಮನ ನೋಯಿಸುವ ಸಾಮಾಜಿಕ ಪದ್ಧತಿಗಳ ವಿರುದ್ಧ ಸೆಟೆದು ನಿಂತವರು.

ಪರ್ಯಾಯ ಧ್ವನಿಯಾಗಿ ಮೂಡಿ ಬರುತ್ತಿರುವ ಮುಸ್ಲಿಂ ಮಹಿಳೆಯರ ನಾಯಕತ್ವ ಕುರಿತು ಮಾತನಾಡಿದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಕಾರ್ಯಕರ್ತೆ ನೂರ್ ಜಹಾನ್ ಕಳೆದೆರಡು ವರ್ಷಗಳಲ್ಲಿ ಅವರ ಸಂಘಟನೆ ಮುಸ್ಲಿಂ ಮಹಿಳೆಯರನ್ನು ಸಂಘಟಿಸಿದ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.  ’ಮಹಿಳಾ ಮೀಸಲಾತಿಯ ಬಗ್ಗೆ ನಿಮ್ಮ ಸಂಸ್ಥೆಯ ನಿಲ್ಲುವೇನು?’ ಎಂಬ ಸಭಿಕರ ಪ್ರಶ್ನೆಗೆ,’ಮಹಿಳಾ ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ. ನಮಗೆ ಒಳ ಮೀಸಲಾತಿ ಬೇಕಿಲ್ಲ. ನಮ್ಮ ಎಲ್ಲಾ ಗಮನವಿರುವುದು ನಮ್ಮ ಮಹಿಳೆಯರೂ ಶಿಕ್ಷಣ, ಉದ್ಯೊಗ, ಆರೋಗ್ಯ- ಎಲ್ಲ ದೊರಕಿಸಿಕೊಂಡು ಸ್ವತಂತ್ರ ಪ್ರಜೆಗಳಾಗಿ ರೂಪುಗೊಳ್ಳಬೇಕಾಗಿದೆ’ ಎಂದ ನೂರ್ ಜಹಾನ್‌ರ ಉತ್ತರ ಅವರ ಸಂಸ್ಥೆಯ ತಾತ್ವಿಕ ನಿಲುವನ್ನು ಪ್ರಕಟಪಡಿಸಿತು.

ಮಹಿಳಾ ಚಳುವಳಿ ಹಾಗೂ ಸ್ವಾತಂತ್ರ್ಯ ಚಳವಳಿಯೆರಡರಿಂದಲೂ ಫಲವತ್ತಾದ ನಾಡು ಮಹಾರಾಷ್ಟ್ರ. ಗಾಂಧಿ ಚಳುವಳಿಯ ಹಿನ್ನೆಲೆ ಮತ್ತು ಅನುಭವಗಳಿಂದ ಮೂಡಿ ಬಂದ ಇಲ್ಲಿನ ನಾಯಕಿಯರು ನಡೆಸಿದ ಬದುಕು ಮತ್ತು ಹೋರಾಟ ಭೂತ, ವರ್ತಮಾನದ ಕೊಂಡಿಯಾಗಿ ಒಂದು ಅದ್ಭುತ ಪರಂಪರೆಯ ದರ್ಶನ ಮಾಡಿಸಿದ್ದಕ್ಕೆ ಸಾಕ್ಷಿಯಾದ ಐವರು ನಾಯಕಿಯರನ್ನು ಸನ್ಮಾನ ಮಾಡಲಾುತು. ಇಲಿನಾ ಸೇನ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಮರಾಠಿ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಪುಷ್ಪ ಭಾವೆ  ಮಹಿಳಾ ನಾಯಕಿಯರನ್ನು ಸನ್ಮಾನಿಸಿದರು.
 
ಸನ್ಮಾನಿತರಾದ ಈ ಐವರು ನಾಯಕಿಯರು ತಮ್ಮ ಬದುಕಿನ ಬುತ್ತಿಯನ್ನು ಬಿಚ್ಚಿಕೊಂಡರು. ಅವರ ಅನುಭವ ಕಥನ ಒಂದು ಕಾಲಘಟ್ಟದ ಚಳವಳಿಯ ಬಹುಮುಖಿ ಸ್ವರೂಪವನ್ನು ಬಿಚ್ಚಿಟ್ಟಿತು. ಕಾರ್ಮಿಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಾಲತಿ ರಾಯ್‌ಕರ್, ಅರುಣಾ ಅಸಫ್ ಆಲಿ ಮತ್ತು ಕಮಲಾದೇವಿ ಚಟ್ಟೊಪಾಧ್ಯಾಯ ಅವರೊಡಗೂಡಿ ಕೆಲಸ ಮಾಡಿದ ಲೀಲಾ ಚಿತಾಲೆ, ಬಹುಜನ ಸ್ತ್ರೀಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ ಫುಲೆ ಕುಟುಂಬದ ಪರಂಪರೆಗೆ ಸೇರಿದ ನಳಿನಿ ಲಡ್ಕೆ, ಮಥುರಾ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿದ ಮತ್ತು ಇಂದಿಗೂ ಮಹಿಳಾ ಚಳವಳಿಯಲ್ಲಿ ದಣಿವಿಲ್ಲದೆ ದುಡಿಯುತ್ತಿರುವ ಸೀಮಾ ಸಕಾರೆ, ಸ್ವಾತಂತ್ರ್ಯ ಚಳವಳಿಯ ಕಿಚ್ಚನ್ನು ಆರದಂತೆ ತನ್ನಲ್ಲಿಟ್ಟುಕೊಂದು ಸಕ್ರಿಯವಾಗಿ ಚಳವಳಿಯಲ್ಲಿ ಭಾಗಿಯಾಗಿರುವ ಸುಮನ್ ತಾಯಿ ಬಾಂಗ್- ಇವರುಗಳು ಸಭಿಕರನ್ನುದ್ದೇಶಿಸಿ ಮಾತನಾಡಿದಾಗ ಆ ಕಾಲದ ಚಳವಳಿಯ ಸ್ಮೃತಿ ಚಿತ್ರ ಕಣ್ಣಮುಂದೆ ತೆರೆದುಕೊಂಡಿತು. 

ಇಂದಿನ ಮಹಿಳಾ ಚಳವಳಿಯ ಬಹುಮುಖತೆಯನ್ನು ಪರಿಚಯಿಸಿದ ಈ ಸಮ್ಮೇಳನ, ಆ ಬಹುಮುಖತೆಯ ಸ್ವರೂಪವನ್ನು ನಿರ್ಧರಿಸುತ್ತಿರುವ ಇಂದಿನ ಸಮಕಾಲೀನ ಒತ್ತಡಗಳನ್ನು ಚರ್ಚಿಸಿತು. ಸಮಾಜದ ಎಲ್ಲರನ್ನೂ ಒಳಗೊಳ್ಳುವ ರಾಜಕೀಯವೇ ಆರೋಗ್ಯದ ಲಕ್ಷಣಗಳುಳ್ಳ ಲಿಂಗ ಸಮಾನತೆಯ ನಿಜವಾದ ಪ್ರಜಾಪ್ರಭುತ್ವವಾದಿ  ಸಮಾಜವನ್ನು ಸೃಷ್ಟಿಸಬಲ್ಲುದು ಎಂಬ ತಾತ್ವಿಕತೆಯೊಂದಿಗೆ , ಅಂತಹ ಸ್ಥಿತಿಗೆ ಅಡ್ಡ ಬರುವವರ ವಿರುದ್ಧ ಅಗತ್ಯವಾಗಿ ನಡೆಯಬೇಕಾದ ಹೋರಾಟವನ್ನು ನೆನಪಿಸಿತು.
ಕ್ರಿಯೆ ಮತ್ತು ತತ್ವ ಒಂದಾಗಿ ಬೆಸೆದ ಈ ಸಮ್ಮೇಳನ ಮಹಿಳಾ ಚಳವಳಿಯ ಮಹಾನದಿಯಲ್ಲಿ ಎಲ್ಲ ತೊರೆಗಳು ಸೇರಬೇಕಾದ ಅಗತ್ಯತೆಯನ್ನು, ಅನಿವಾರ್ಯತೆಯನ್ನು ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT