ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲಿಂಗ ವ್ಯವಸ್ಥೆ ಅಧ್ಯಯನದಲ್ಲಿ ಮಹಿಳೆಗೆ ಸಿಗದ ಪ್ರಾಧಾನ್ಯ'

Last Updated 1 ಏಪ್ರಿಲ್ 2013, 6:00 IST
ಅಕ್ಷರ ಗಾತ್ರ

ಹೊಸಪೇಟೆ: ಲಿಂಗ ವ್ಯವಸ್ಥೆಯಲ್ಲಿ ಮಹಿಳೆ ಸೇರಿದಂತೆ ಯಾವುದೇ ಸೀಮಿತ ವರ್ಗವನ್ನು ಹೊರಗಿಟ್ಟು ಅಧ್ಯಯನ ಮಾಡಿದರೆ ಅದು ಅಪೂರ್ಣವಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ಆರ್. ಇಂದಿರಾ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು `ಲಿಂಗವ್ಯವಸ್ಥೆಯ ಅಧ್ಯಯನಗಳು, ವಿಧಾನ, ವೈಧಾನಿಕತೆ ಮತ್ತು ಸಿದ್ಧಾಂತಗಳ' ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಜ್ಞಾನ ವ್ಯವಸ್ಥೆಯಲ್ಲಿ ಮಹಿಳೆ, ಪುರುಷ ಮತ್ತು ಲೈಂಗಿಕ ಅಲ್ಪಸಂಖ್ಯಾತರೇ ಆಗಿದ್ದರೂ ಪ್ರಚ್ಯೇಕಿಸುವುದು ಸರಿಯಾದ ಕ್ರಮವಲ್ಲ, ಜ್ಞಾನವನ್ನು ವೃದ್ಧಿಸುವ ಕೆಲಸದಲ್ಲಿ ಪ್ರತಿಹಂತದಲ್ಲಿಯೂ ಪ್ರಶ್ನಿಸುವ, ಪುನರ್ ವಿಮರ್ಶಿಸುವ ಎಲ್ಲ ಹಂತಗಳ ಆಯಾಮಗಳನ್ನು ಪರಾಮರ್ಶೆಗೆ ಒಳಪಡಿಸಿ ವಾಸ್ತವ ನೆಲೆ ಪರಿಚಯಿಸಬೇಕಾಗಿದೆ ಎಂದರು.

ಲಿಂಗ ವ್ಯವಸ್ಥೆಯ ವಿಧಾನ, ವೈಧಾನಿಕತೆ ಮತ್ತು ಸಿದ್ಧಾಂತಗಳಲ್ಲಿ ಮಹಿಳೆಯ ಪಾತ್ರ, ಮಹಿಳೆಗೆ ದೊರೆತ ಸ್ಥಾನಮಾನ ಹಾಗೂ ಆಕೆಯ ಕೊಡುಗೆಯನ್ನು ಗುರುತಿಸುವ ಮತ್ತು ಗೌರವಿಸುವಿಕೆ ಆಗದಿರುವುದು ಉತ್ತಮ ಬೆಳವಣಿಗೆಯಲ್ಲ. ಈ ಎಲ್ಲ ಆಯಾಮಗಳ ಮೇಲೆ ವಿಚಾರ ಸಂಕಿರಣ ಬೆಳಕು ಚೆಲ್ಲಬೇಕಾಗಿದೆ ಎಂದರು.

ಹೈದರಾಬಾದ್ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಬಿ. ತಾರಕೇಶ್ವರ ಆಶಯ ಭಾಷಣ ಮಾಡಿದರು. ಸಂಶೋಧನೆಯಲ್ಲಿ ತೊಡಗುವ ಮೊದಲು ಸದ್ಯದ ಸ್ಥಿತಿ, ವಾಸ್ತವ ನೆಲೆಗಟ್ಟು ಒಳಗೊಂಡಂತೆ ಹೊಸತನ ಸೃಷ್ಟಿಸುವ ಸಂಶೋಧಕ ಪೂರ್ವಗ್ರಹಗಳಿಂದ ಹೊರಬರಬೇಕು. ಅಧ್ಯಯನದ ವೈಭವೀಕರಣವೂ ಆಗದಂತೆ ಅಂತರ್‌ಶಿಸ್ತಿನೊಂದಿಗೆ ಈ ವರೆಗೂ ನಿಲುಕದ ಆಯಾಮ ಪರಿಚಯಿಸಲು ಮುಂದಾಗಬೇಕು ಎಂದು ಯುವ ಸಂಶೋಧಕರಿಗೆ ಸಲಹೆ ನೀಡಿದರು.

ಭಾಷಾ ಅಧ್ಯಯನದ ಡೀನ್ ಡಾ. ಪಾಂಡುರಂಗಬಾಬು ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧಕರಿಗೆ ಜ್ಞಾನವನ್ನು ಹುಡುಕುವ ಮಾರ್ಗದರ್ಶನ ನೀಡಿ ವಿಷಯದ ಆಯಮಗಳನ್ನು ತೆರೆದಿಡುತ್ತಿದೆ. ಈ ಆಧಾರದ ಮೇಲೆ ಸಂಶೋಧಕ ತಜ್ಞತೆಯ ಅಪಾಯಕ್ಕೆ ಕಾರಣವಾಗದೆ, ಹೊಸ ಆಯಾಮವನ್ನು ಪರಿಚಯಿಸಲು ಕಾರ್ಯೋನ್ಮುಖವಾಗಬೇಕು ಎಂದರು.

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ತಜ್ಞರು ಲಿಂಗವ್ಯವಸ್ಥೆಯ ವಿವಿಧ ಆಯಾಮ ಅಧ್ಯಯನ, ವಿಧಾನ ವೈಧಾನಿಕತೆ ಮತ್ತು ಸಿದ್ಧಾಂತಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT