ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಸಮಾನತೆ; ಅಭಿವೃದ್ಧಿಗೆ ಪೂರಕವಾದ ಸಾಮಾಜಿಕ ಮೌಲ್ಯ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಸಮಾನತೆಯು ನಮ್ಮ ಸಮಾಜವನ್ನು ಕಾಡುತ್ತಿರುವ, ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಮತ್ತು ಗಟ್ಟಿಯಾಗಿ ನೆಲೆಯೂರಿರುವ ಒಂದು ಸಾಮಾಜಿಕ ರೋಗ. ಇದನ್ನು ಅಮರ್ತ್ಯಸೆನ್ ಭಾರತದ ಮುಖ್ಯ `ಸಾಮಾಜಿಕ ವೈಫಲ್ಯ~ವೆಂದು ಕರೆಯುತ್ತಾರೆ.
 
ಲಾಗಾಯ್ತಿನಿಂದ ನಾವು ಇದನ್ನು ಕುರಿತ ಚರ್ಚೆಯನ್ನು ಕೇವಲ ವರಮಾನಕ್ಕೆ, ಅಂದರೆ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸೀಮಿತಗೊಳಿಸಿಕೊಂಡು ಬಂದಿದ್ದೇವೆ. ಸಮಾಜ ವಿಜ್ಞಾನಗಳು ಕೂಡ ಆರ್ಥಿಕ ಸಮಾನತೆಯನ್ನು ಕುರಿತಂತೆ ಸಿದ್ಧಾಂತಗಳನ್ನು ರೂಪಿಸಿಕೊಂಡು ಬರುತ್ತಿವೆ.
 
ಆರ್ಥಿಕ ಅಸಮಾನತೆಯನ್ನು ಅಳೆಯುವ ಸಾಧನಗಳ ಬಗ್ಗೆ ಬಹಳಷ್ಟು ಕೆಲಸ ನಡೆದಿದೆ. ಆದರೆ ಅಸಮಾನತೆಗೆ ಅನೇಕ ಮುಖಗಳಿವೆ ಎಂಬುದನ್ನು, ಅದನ್ನು ಕುರಿತ ಸಾಂಪ್ರದಾಯಿಕ ಚರ್ಚೆಗಳಲ್ಲಿ ನಿರ್ಲಕ್ಷಿಸಿಕೊಂಡು ಬರಲಾಗಿದೆ. ಅದು ಅನೇಕ ಆವರಣಗಳಲ್ಲಿ ಕ್ರಿಯಾಶೀಲವಾಗಿರುತ್ತದೆ.

ವರ್ಗ, ವರ್ಣ, ಜಾತಿ, ಪ್ರದೇಶ, ವೃತ್ತಿ, ಲಿಂಗ ಮುಂತಾದ ಕ್ಷೇತ್ರಗಳಲ್ಲಿ ಅದು ಸಮಾಜವನ್ನು ಕಾಡುತ್ತಿರುವುದನ್ನು ಕಾಣಬಹುದು. ಅದನ್ನು ಸಾಮಾಜಿಕ-ರಾಜಕೀಯ ನೆಲೆಯಲ್ಲಿ ಗುರುತಿಸುವ ಮತ್ತು ಚರ್ಚಿಸುವ ಕ್ರಮ ವ್ಯಾಪಕವಾಗಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಅದಕ್ಕೆ ಜೈವಿಕ ಆಯಾಮವೂ ಇದೆ ಎಂಬುದನ್ನು ನಾವು ಮರೆಯಬಾರದು.
 
ಈ ಎಲ್ಲ ಬಗೆಯ ಅಸಮಾನತೆಗಳಲ್ಲಿ ಅತ್ಯಂತ ಸೂಕ್ಷ್ಮವಾದದ್ದು ಮತ್ತು ಕುಟುಂಬ ಸಂಬಂಧಗಳ ಆವರಣದಲ್ಲಿ ಪ್ರಯುಕ್ತವಾಗಿರುವುದು ಹಾಗೂ ಜನರ ವೈಯಕ್ತಿಕ ಸಂಬಂಧಗಳನ್ನು ಒಳಗೊಂಡದ್ದು ಅಂದರೆ ಲಿಂಗ ಅಸಮಾನತೆ. ಇದು ಕಾಲ-ದೇಶ-ಸಂದರ್ಭಕ್ಕೆ ಬದ್ಧವಾದುದಾಗಿದೆ.

ಒಂದೇ ಮನೆಯಲ್ಲಿ ಗಂಡ-ಹೆಂಡತಿಯರಾಗಿ, ತಂದೆ-ತಾಯಿಯರಾಗಿ, ಸಹೋದರ-ಸಹೋದರಿಯರಾಗಿ ಇರುವವರ ನಡುವಿನ ಅಸಮಾನತೆಯನ್ನು ಅಳೆಯುವುದು ಸುಲಭವಲ್ಲ.

ಇದು ಕಾಲ-ದೇಶ-ಸಂದರ್ಭ ಬದ್ಧವಾಗಿರುವುದರಿಂದ ಈ ವಿಷಯದಲ್ಲಿ ಸಾರ್ವತ್ರಿಕವಾದ ಸಿದ್ಧಾಂತವನ್ನು ರೂಪಿಸುವುದು ಕಷ್ಟ. ಹಾಗೆ ರೂಪಿಸಿದರೂ ಅದು ಎಲ್ಲ ದೇಶಗಳಿಗೆ, ಎಲ್ಲ ಕಾಲಕ್ಕೆ ಮತ್ತು ಎಲ್ಲ ಸಂದರ್ಭಗಳಿಗೂ ಅನ್ವಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ.
 
ಉದಾಹರಣೆಗೆ ನಮ್ಮ ಸಮಾಜದ ಸಂದರ್ಭದಲ್ಲಿ ಯಾವ ಬಗೆಯ ಅಸಮಾನತೆಯಾದರೂ ಜೈವಿಕತೆಯ ಆಯಾಮವನ್ನು ಬಿಟ್ಟು ಅದನ್ನು ಪರಿಭಾವಿಸಿಕೊಳ್ಳುವುದು ಮತ್ತು ಚರ್ಚಿಸುವುದು ಸಾಧ್ಯವಿಲ್ಲ.

ಏಕೆಂದರೆ ಅಸಮಾನತೆಯೆಂಬುದು ಜೈವಿಕವಾಗಿ ನಿರ್ಧಾರವಾಗಿರುವ ಸಂಗತಿ ಎನ್ನುವದು ನಮ್ಮಲ್ಲಿ ಪರಂಪರಾಗತವಾಗಿ ಹರಿದುಕೊಂಡು ಬಂದಿರುವ ನಂಬಿಕೆ.

ಇದು ವರ್ಣ, ವರ್ಗ, ಲಿಂಗ, ಜಾತಿ, ವೃತ್ತಿ, ಪ್ರದೇಶ ಮುಂತಾದ ಎ್ಲ್ಲಲ ಸಂಗತಿಗಳನ್ನೂ ಒಳಗೊಳ್ಳುತ್ತದೆ. ಕರ್ನಾಟಕದಲ್ಲಿ ಲಿಂಗ ಅಸಮಾನತೆಯ ಸ್ವರೂಪವನ್ನು ಅರಿತುಕೊಳ್ಳುವುದು ಕುತೂಹಲಕಾರಿ.

ಸಾಕ್ಷರತೆಯಲ್ಲಿ ಲಿಂಗ ಅಸಮಾನತೆಯು ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣವು 2001ರಲ್ಲಿ ಪುರುಷರ ಸಾಕ್ಷರತಾ ಪ್ರಮಾಣದ ಶೇ 74.73 ರಷ್ಟಿತ್ತು. ಇದು 2011ರಲ್ಲಿ ಶೇ 82.23ರಷ್ಟಕ್ಕೆ ಏರಿದೆ.

ಲಿಂಗ ಅನುಪಾತ, ಅಂದರೆ ಪ್ರತಿ ಸಾವಿರ ಪುರುಷರ ಎದುರಾಗಿ ಇರುವ ಮಹಿಳೆಯರ ಸಂಖ್ಯೆಯು 2001ರಲ್ಲಿ 965ರಷ್ಟಿತ್ತು. ಇದು 2011ರಲ್ಲಿ 968 ರಷ್ಟಾಗಿದೆ.

ರಾಜ್ಯದಲ್ಲಿ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ 1991ರಲ್ಲಿ ಶೇ 29.4ರಷ್ಟಿತ್ತು.  2001ರಲ್ಲಿ ಇದು ಶೇ 32ರಷ್ಟಾಗಿದೆ. ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ 1991ರಲ್ಲಿ 0.525ರಷ್ಟಿತ್ತು. 2001ರಲ್ಲಿ ಇದು 0.637ರಷ್ಟಾಗಿದೆ.

ಈ ಸೂಚಿಗಳಲ್ಲದೆ ಇತರೆ ವಿಷಯಗಳಲ್ಲಿ ನಮ್ಮ ರಾಜ್ಯದ ಮಹಿಳೆಯರು ಲಿಂಗ ಸಮಾನತೆಯ ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದಾರೆ. ಆದರೆ ಲಿಂಗ ಸಮಾನತೆಯ ಒಂದು ಮುಖವನ್ನು ಮಾತ್ರ ಇದು ತೋರಿಸುತ್ತದೆ. ಅನೇಕ ವಿಷಯಗಳಲ್ಲಿ ಮಹಿಳೆಯರು ಲಿಂಗ ಸಂಬಂಧಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ.

ಗಂಡು ಮತ್ತು ಹೆಣ್ಣು ಮಕ್ಕಳ ಲಿಂಗ ಅನುಪಾತವು ತೀವ್ರ ಗತಿಯಲ್ಲಿ ಕುಸಿಯುತ್ತಿದೆ. ಇದು ಅತಂಕಕಾರಿ ಸಂಗತಿಯಾಗಿದೆ. ಅದು 1991ರಲ್ಲಿ 960ರಷ್ಟಿತ್ತು. 2001ರಲ್ಲಿ 946ಕ್ಕೆ ಮತ್ತೆ 2011ರಲ್ಲಿ 943ಕ್ಕೆ ಇಳಿದಿದೆ.

ಕರ್ನಾಟಕದಲ್ಲಿ 2001ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯು 9.26 ಲಕ್ಷ.  2011ರಲ್ಲಿ ಈ ಸಂಖ್ಯೆಯು 9.85 ಲಕ್ಷಕ್ಕೆಏರಿದೆ.

ಶಿಶು ಮರಣ ಪ್ರಮಾಣದಲ್ಲಿಯೂ ಲಿಂಗ ತಾರತಮ್ಯವಿದೆ. ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಮಾಹಿತಿ ಪ್ರಕಾರ 2008ರಲ್ಲಿ ಪ್ರತಿ ಸಾವಿರ ಜನನಗಳಲ್ಲಿ ಶಿಶುಗಳ ಮರಣ ಪ್ರಮಾಣ 45. ಆದರೆ ಗಂಡು ಶಿಶುಗಳ ಮರಣ ಪ್ರಮಾಣ 44 ರಷ್ಟಾದರೆ ಹೆಣ್ಣು ಶಿಶುಗಳ ಮರಣ ಪ್ರಮಾಣ 46. ಇದು ಲಿಂಗ ತಾರತಮ್ಯದ ಸೂಚಿಯಾಗಿದೆ.

ಡಿಎಲ್‌ಎಚ್‌ಎಸ್ ಪ್ರಕಾರ 2007-08ರಲ್ಲಿ ನಮ್ಮ ರಾಜ್ಯದ ಸುಮಾರು ಐದು ಜಿಲ್ಲೆಗಳಲ್ಲಿ 18 ವರ್ಷಕ್ಕೆ ಮೊದಲೆ ಮದುವೆಯಾಗುವ ಹೆಣ್ಣು ಮಕ್ಕಳ ಪ್ರಮಾಣ ಶೇ 40ಕ್ಕಿಂತ ಅಧಿಕವಾಗಿದೆ.

ಮಹಿಳೆಯರಲ್ಲಿ ಅಪೌಷ್ಟಿಕತೆಯ ಪ್ರಮಾಣ ಅಧಿಕ ಎಂಬುದನ್ನು ಸಮೀಕ್ಷೆಗಳು ಮತ್ತೆ ಮತ್ತೆ ದೃಢಪಡಿಸುತ್ತಿವೆ. ನಾವು ನಡೆಸಿದ ಒಂದು ಅಧ್ಯಯನದಲ್ಲಿ ಕಂಡು ಬಂದಂತೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ದೇಹತೂಕದ ಸೂಚ್ಯಂಕಕ್ಕೆ (ಬಿ.ಎಂ.ಐ) ಸಂಬಂಧಿಸಿದಂತೆ ಅಗತ್ಯಕ್ಕಿಂತ ಕಡಿಮೆ ತೂಕವಿರುವ ಮಹಿಳೆಯರ ಪ್ರಮಾಣ ಶೇ 45. 

ಮಹಿಳೆಯರ ಮೇಲಿನ ಹಿಂಸೆ, ಕೌಟುಂಬಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಪರಂಪರಾಗತ ಲಿಂಗ ತಾರತಮ್ಯ ನಂಬಿಕೆಗಳ ವೈಭವೀಕರಣ ಮುಂತಾದವು ಅಡೆತಡೆಯಿಲ್ಲದೆ ನಡೆದಿವೆ.

ಅಭಿವೃದ್ಧಿಯಲ್ಲಿ ಸಮಾನತೆ: ವಿಶ್ವ ಬ್ಯಾಂಕು ತನ್ನ 2012ರ ವಿಶ್ವ ಅಭಿವೃದ್ಧಿ ವರದಿಯನ್ನು ಲಿಂಗ ಸಮಾನತೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧದ ಚರ್ಚೆಗೆ ಮೀಸಲಿಟ್ಟಿದೆ. ಅನೂಚಾನವಾಗಿ ಲಿಂಗ ಸಮಾನತೆ ಬಗ್ಗೆ ನಡೆಯುತ್ತಾ ಬಂದಿರುವ ವಿಶ್ಲೇಷಣೆಯ ವೈಖರಿಯನ್ನು ಬಿಟ್ಟು ವಿಶ್ವ ಅಭಿವೃದ್ಧಿ ವರದಿಯಲ್ಲಿ ಲಿಂಗ ಸಮಾನತೆಯನ್ನು ಕುರಿತ ಚರ್ಚೆಯನ್ನು ಬೇರೊಂದು ನೆಲೆಯಲ್ಲಿ ನಡೆಸಲಾಗಿದೆ. ಅದರಲ್ಲಿ ಲಿಂಗ ಸಮಾನತೆಯನ್ನು `ಸ್ಮಾರ್ಟ್ ಎಕನಾಮಿಕ್ಸ್~ ಎಂದು ಕರೆದಿದೆ.
 
ಲಿಂಗ ಸಮಾನತೆಯು ಅಭಿವೃದ್ಧಿಯ ಧಾತು ಸದೃಶ ಸಂಗತಿ ಎನ್ನುವುದನ್ನು ಅದರಲ್ಲಿ ಒತ್ತಿ ಹೇಳಲಾಗಿದೆ. ಇದು ಅಭಿವೃದ್ಧಿಗೆ ಹೇಗೆ ಕಾಣಿಕೆ ನೀಡುತ್ತಿದೆ ಎಂಬುದನ್ನು ಸೋದಾಹರಣವಾಗಿ ವರದಿಯಲ್ಲಿ ವಿವರಿಸಲಾಗಿದೆ.

ಲಿಂಗ ಸಮಾನತೆಯು ದುಡಿಮೆಗಾರರ ಕರ್ತೃತ್ವಕ್ಕೆ ಕಾಣಿಕೆ ನೀಡುವ ಮುಖಾಂತರ ಅಭಿವೃದ್ಧಿಯ ಸಂಪನ್ಮೂಲವಾಗುತ್ತದೆ ಎಂಬುದನ್ನು ಇಲ್ಲಿ ಸಾಧಿಸಲಾಗಿದೆ. ಲಿಂಗ ಸಮಾನತೆ ಎನ್ನುವುದು ಕೇವಲ ಮಹಿಳಾವಾದಿಗಳ ಭಾವನಾತ್ಮಕ ಘೋಷಣೆಯಲ್ಲ ಎಂಬುದು ಇಲ್ಲಿ ಸಾಬೀತಾಗಿದೆ.

ಅಭಿವೃದ್ಧಿಯು ಲಿಂಗ ಸಮಾನತೆಗೆ ಕಾಣಿಕೆ ನೀಡುತ್ತಿದ್ದರೆ ಪ್ರತಿಯಾಗಿ ಲಿಂಗ ಸಮಾನತೆಯೂ ಅಭಿವೃದ್ಧಿಗೆ ಕಾಣಿಕೆ ನೀಡುತ್ತಿರುತ್ತದೆ. ಈ ಎರಡು ಮುಖಗಳ ಸಂಬಂಧವನ್ನು ಇಂದು ಅನೇಕ ಅಧ್ಯಯನಗಳು ದೃಢಪಡಿಸಿವೆ. ಲಿಂಗ ಸಮಾನತೆ ಎನ್ನುವುದು `ಉತ್ಪಾದನಾ ಚಟುವಟಿಕೆ~ ಎಂಬುದನ್ನು ವರದಿಯಲ್ಲಿ ದಾಖಲಿಸಲಾಗಿದೆ.
 
ಅಭಿವೃದ್ಧಿಯು ಮಹಿಳೆಯರ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತೃತಗೊಳಿಸುತ್ತಿದೆ. ವಿಸ್ತೃತಗೊಂಡ ಸ್ವಾತಂತ್ರ್ಯದಿಂದಾಗಿ ಮಹಿಳೆಯರ ಉತ್ಪಾದನಾ ಸಾಮರ್ಥ್ಯವು ಉತ್ತಮಗೊಳ್ಳುತ್ತಿದೆ.

ಮತ್ತೆ ಮತ್ತೆ ಸೆನ್, ನುಸ್‌ಬೌಮ್, ನೈಲಾ ಕಬೀರ್, ಬಿನಾ ಅಗರವಾಲ ಮುಂತಾದವರು ವಾದಿಸುತ್ತಿರುವಂತೆ ಲಿಂಗ ಸಮಾನತೆಯು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ; ಅದು ಪುರುಷರಿಗೂ ಸಂಬಂಧಿಸಿದೆ.

ಅದು ಮೂಲಭೂತವಾಗಿ ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಯಾಗಿದೆ.
ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಪರಾವಲಂಬಿಗಳಾಗಿ ಪರಿಭಾವಿಸಿಕೊಳ್ಳುವ ಕ್ರಮವಿದೆ.
 
ಮಗಳಾಗಿ ತಂದೆಯನ್ನು, ಹೆಂಡತಿಯಾಗಿ ಗಂಡನನ್ನು ಮತ್ತು ತಾಯಿಯಾಗಿ ಮಗನನ್ನು ಅವಳು ಅವಲಂಬಿಸಿಕೊಂಡು ಬದುಕನ್ನು ಸಾಗಿಸಬೇಕು ಎಂಬ ನಂಬಿಕೆಯು ವ್ಯಾಪಕವಾಗಿದೆ. ಲಿಂಗ ಸಮಾನತೆಯನ್ನು ಸೆನ್ ಇಂತಹ ಸಂಬಂಧಗಳನ್ನು ಮುರಿಯುವ ಕ್ರಮದಲ್ಲಿ ಗುರುತಿಸಲು ಪ್ರಯತ್ನಿಸುತ್ತಾರೆ.

ಲಿಂಗ ಸಮಾನತೆಯೆಂದರೆ ಪುರುಷರಿಗೆ ಸರಿಸಮವಾಗುವುದು ಎಂಬ ಹಳೆಯ ಕಾಲದ ವ್ಯಾಖ್ಯೆಯನ್ನು ಇಂದು ಕೈಬಿಡಲಾಗಿದೆ. `ತಮ್ಮ ಬದುಕನ್ನು ತಾವು ಬಯಸಿದಂತೆ ತಾವೇ ಕಟ್ಟಿಕೊಳ್ಳಲು ಅಗತ್ಯವಾದ ಸಾಮರ್ಥ್ಯ~ ಎಂದು ಇಂದು ಅದನ್ನು ನಿರ್ವಚಿಸಲಾಗುತ್ತಿದೆ.

ಇದನ್ನೇ ಸೆನ್ `ಏಜೆನ್ಸಿ ಸ್ವಾತಂತ್ರ್ಯ~ವೆಂದು ಕರೆಯುತ್ತಾರೆ. ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಪುರುಷರ ದುಡಿಮೆ ಸಹಭಾಗಿತ್ವ ಪ್ರಮಾಣಕ್ಕಿಂತ ಬಹಳಷ್ಟು ಕಡಿಮೆಯಿದೆ. ಇದಕ್ಕೆ ಕಾರಣ ಅವರು ದುಡಿಮೆ ಮಾಡುತ್ತಿಲ್ಲವೆಂದಲ್ಲ.

ಆದರೆ ಅವರ ಸಂಭಾವನಾರಹಿತ ಕೆಲಸಗಳನ್ನು ದುಡಿಮೆಯ ವ್ಯಾಖ್ಯೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ.  ಮಹಿಳೆಯರು ನಿರ್ವಹಿಸುವ ಮನೆಗೆಲಸವನ್ನು ದುಡಿಮೆಯೆಂದು ಪರಿಗಣಿಸಿಲ್ಲ. ಮನೆಯ ಹೊರಗೆ ಅವರು ದುಡಿಯುತ್ತಿದ್ದರೂ ಅದನ್ನು ಸಂಘಟಿತ ವಲಯದ ಚೌಕಟ್ಟಿನಲ್ಲಿ ಸೇರಿಸಿಕೊಂಡಿಲ್ಲ.

ಎಂ.ಎನ್. ಶ್ರೀನಿವಾಸರಿಂದ ಹಿಡಿದು ಈವತ್ತಿನ ಮಹಿಳಾವಾದಿಗಳವರೆಗೆ ಮಹಿಳೆಯರು ಪ್ರತಿದಿನ `ಎರಡು ದುಡಿಮೆ ದಿನ~ಗಳನ್ನು ಬದುಕುತ್ತಿದ್ದಾರೆ ಎಂಬುದನ್ನು ಗುರುತಿಸಲಾಗಿದೆ. ಆದರೂ ಅವರ ದುಡಿಮೆಯನ್ನು ಆರ್ಥಿಕ ಕ್ಷೇತ್ರದ ಸಂಗತಿಯನ್ನಾಗಿ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ.

ವಿಶ್ವಬ್ಯಾಂಕು ತನ್ನ 2012ರ ವರದಿಯಲ್ಲಿ ಪ್ರತಿಪಾದಿಸಿರುವಂತೆ `ಅಭಿವೃದ್ಧಿಯಾಗಿ ಲಿಂಗ ಸಮಾನತೆ~ ಎಂಬ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅದನ್ನು ಕೇವಲ ಅನುಕಂಪದ ಅಥವಾ ಸಹಾನುಭೂತಿಯ ಸಂಗತಿಯನ್ನಾಗಿ ಪರಿಭಾವಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲ.
 
ಅದು ಕೇವಲ ಸ್ಮಾರ್ಟ್ ಎಕನಾಮಿಕ್ಸ್ ಮಾತ್ರವಲ್ಲ;  ಅದು ಹಾರ್ಡ್ ಎಕನಾಮಿಕ್ಸ್. ನಮ್ಮ ಸಮಾಜದ ಸಂದರ್ಭದಲ್ಲಿ ಅವರು ಒಟ್ಟು ದುಡಿಮೆಗಾರರಲ್ಲಿ ಶೇ 33ರಷ್ಟಿದ್ದಾರೆ.
 
ಅವರ ಸಂಭಾವನಾ-ರಹಿತ ದುಡಿಮೆಯನ್ನು ಲೆಕ್ಕಕ್ಕೆ ಹಿಡಿದರೆ ಅವರ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ 50ಕ್ಕಿಂತ ಅಧಿಕವಾಗುತ್ತದೆ. ಇದು ಸರಿಯಾದ ರೀತಿಯಲ್ಲಿ ಅಭಿವೃದ್ಧಿಗೆ ಸಂದರೆ ಅದು ಖಂಡಿತವಾಗಿ ಉತ್ತಮಗೊಳ್ಳುತ್ತದೆ. ಇದರಿಂದ, ಅರಿಸ್ಟಾಟಲ್‌ನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಮಹಿಳೆಯರ ಬದುಕು ಸಮೃದ್ಧವಾಗುತ್ತದೆ.

ಈ ವರ್ಷದ ಮಹಿಳಾ ದಿನಾಚರಣೆಯ ಸಂದೇಶ `ಅಭಿವೃದ್ಧಿಯಾಗಿ ಲಿಂಗ ಸಮಾನತೆ~ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಲಿಂಗ ಸಮಾನತೆ ಎಂಬುದು ಅಭಿವೃದ್ಧಿಯ ಪರಿಕರ ಮಾತ್ರವಲ್ಲ, ಅದು ತನ್ನಷ್ಟಕ್ಕೆ ತಾನು ಒಂದು ಮಹತ್ವವಾದ ಸಾಮಾಜಿಕ ಮೌಲ್ಯವಾಗಿದೆ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT