ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗರಾಜು ಹತ್ಯೆ: ಪಾಲಿಕೆ ಸದಸ್ಯೆ ವಿರುದ್ಧ ಆರೋಪ ಪಟ್ಟಿ

Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಲಿಂಗರಾಜು, ಬಿಬಿಎಂಪಿ ಆಜಾದ್‌ನಗರ ವಾರ್ಡ್ ಸದಸ್ಯೆ ಗೌರಮ್ಮ ವಿರುದ್ಧ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದೇ ಅವರ ಕೊಲೆಗೆ ಮುಖ್ಯ ಕಾರಣ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಲಿಂಗರಾಜು ಅವರು ಕೊಲೆಯಾಗುವುದಕ್ಕೂ ಕೆಲ ದಿನಗಳ ಮುಂಚೆ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜು ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪ ಹೊರಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅಲ್ಲದೇ ಗೋವಿಂದರಾಜು ದಂಪತಿಯ ಆಸ್ತಿ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಮಹತ್ವದ ದಾಖಲೆಪತ್ರಗಳನ್ನು ಒದಗಿಸಿದ್ದರು ಎಂದು `ಎಸ್‌ಐಟಿ' ಅಧಿಕಾರಿಗಳು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

ಲಿಂಗರಾಜು ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಗೌರಮ್ಮ ಅವರ ಮನೆ ಮೇಲೆ 2012ರ ನ.9ರಂದು ದಾಳಿ ನಡೆಸಿ ನಗದು, ಚಿನ್ನಾಭರಣ ಹಾಗೂ ಆಸ್ತಿಯ ದಾಖಲೆಪತ್ರಗಳು ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಗೋವಿಂದರಾಜು ದಂಪತಿ, ಸುಪಾರಿ ಹಂತಕರ ಮೂಲಕ ಲಿಂಗರಾಜು ಅವರನ್ನು ಕೊಲೆ ಮಾಡಿಸಿದ್ದರೆಂಬ ಅಂಶಗಳನ್ನು ಆರೋಪ ಪಟ್ಟಿ ಒಳಗೊಂಡಿದೆ.

`ಗೌರಮ್ಮ ದಂಪತಿ ಸೇರಿದಂತೆ ಒಟ್ಟು 12 ಆರೋಪಿಗಳ ವಿರುದ್ಧ ಸುಮಾರು 4,500 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ 134 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿ, ಕೊಲೆ ಘಟನೆಯ ನಂತರ ಅವರ ಚಲನವಲನದ ವಿವರಗಳನ್ನು ಮೂರು ಸಾವಿರ ಪುಟಗಳಲ್ಲಿ ದಾಖಲಿಸಲಾಗಿದೆ' ಎಂದು `ಎಸ್‌ಐಟಿ' ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಗೋವಿಂದರಾಜು ದಂಪತಿ, ಲಿಂಗರಾಜು ಕೊಲೆಗೆ ರೂ 7 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು. ಅದರಲ್ಲಿ ಮುಂಗಡವಾಗಿ  ರೂ 2 ಲಕ್ಷವನ್ನು ಹಂತಕರಿಗೆ ನೀಡಿದ್ದರು. ಕೊಲೆ ಘಟನೆ ನಂತರ ಗೌರಮ್ಮ ತಮ್ಮ ಆಭರಣಗಳನ್ನು ಗಿರವಿ ಅಂಗಡಿಯೊಂದರಲ್ಲಿ ಅಡವಿಟ್ಟು ಉಳಿದ ರೂ 5 ಲಕ್ಷವನ್ನು ಹಂತಕರಿಗೆ ಹೊಂದಿಸಿಕೊಟ್ಟಿದ್ದರು. ಪ್ರಕರಣದ ಆರೋಪಿಗಳೆಲ್ಲಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂಬ ಅಂಶಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸುಪಾರಿ ಹಂತಕರು 2012ರ ನ.20ರಂದು ವಿಠ್ಠಲನಗರದಲ್ಲಿ ಲಿಂಗರಾಜು ಅವರ ಮನೆಯ ಸಮೀಪವೇ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

ಈ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ, ನಗರದ (ಪಶ್ಚಿಮ ವಿಭಾಗ) ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಹಾಗೂ ಸಿಐಡಿ ಎಸ್ಪಿ ಅಬ್ದುಲ್ ಅಹದ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT