ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಮುಖಂಡರ ಜತೆ ಕೆಪಿಸಿಸಿ ಅಧ್ಯಕ್ಷರ ಚರ್ಚೆ

Last Updated 4 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಪಕ್ಷದ ಲಿಂಗಾಯತ ಮುಖಂಡರ ಸಭೆ ಕರೆದು, ಅವರ ಸಮಸ್ಯೆಗಳ ಬಗ್ಗೆ ಶುಕ್ರವಾರ ಚರ್ಚೆ ನಡೆಸಿದರು.ಹೋಟೆಲ್‌ವೊಂದರಲ್ಲಿ ಕರೆದಿದ್ದ ಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡರೆಲ್ಲರೂ ಭಾಗವಹಿಸಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.

ಪಕ್ಷದಲ್ಲಿ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಎಐಸಿಸಿ ಸೇರಿದಂತೆ ಯಾವ ವಿಚಾರದಲ್ಲೂ ಸೂಕ್ತ ಸ್ಥಾನಮಾನಗಳು ಸಿಕ್ಕಿಲ್ಲ. ಹೀಗಾಗಿ ಲಿಂಗಾಯತರೆಲ್ಲರೂ ಬಿಜೆಪಿ ಪರ ನಿಂತಿದ್ದಾರೆ ಎನ್ನುವ ಭಾವನೆ ಇದೆ. ಅದನ್ನು ಹೋಗಲಾಡಿಸಬೇಕಾದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ ಎನ್ನುವ ಬೇಡಿಕೆಯನ್ನು ಲಿಂಗಾಯತ ಮುಖಂಡರು ಸಭೆಯಲ್ಲಿ ಮಂಡಿಸಿದರು ಎನ್ನಲಾಗಿದೆ.

ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿರುವ ವಿಚಾರ ಕೂಡ ಸಭೆಯಲ್ಲಿ ಚರ್ಚೆಗೆ ಬಂದಿದೆ. ಲಿಂಗಾಯತರಿಗೆ ಪ್ರಾತಿನಿಧ್ಯ ಇಲ್ಲ ಎಂದಾಗ ಜಯಶ್ರೀ ಕಡೆ ಬೊಟ್ಟು ಮಾಡುತ್ತಾರೆ. ಆದರೆ, ಅವರನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಯಾವ ಲಿಂಗಾಯತ ಮುಖಂಡರನ್ನು ಕೇಳಲಾಗಿತ್ತು ಎನ್ನುವ ಪ್ರಶ್ನೆಯನ್ನೂ ಕೆಲವರು ಕೇಳಿದ್ದಾರೆ.

ಮುಖಂಡರ ಅಭಿಪ್ರಾಯಗಳ ನಂತರ ಪಕ್ಷದ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಎಲ್ಲ ಸಮುದಾಯಗಳ ಮುಖಂಡರನ್ನು ಭೇಟಿ ಮಾಡುವ ಹಾಗೆ ಲಿಂಗಾಯತ ಮುಖಂಡರ ಸಭೆಯನ್ನೂ ಕರೆದಿದ್ದು ಅವರ ಅಹವಾಲುಗಳನ್ನು ಕೇಳಲಾಗಿದೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸುವ ಭರವಸೆಯನ್ನು ನೀಡಿದರು.

‘ಪ್ರಮುಖ ಜಾತಿಗಳನ್ನು ನಿರ್ಲಕ್ಷ್ಯ ಮಾಡಿ ಪಕ್ಷ ಕಟ್ಟಲು ಸಾಧ್ಯ ಇಲ್ಲ. ಈ ವಿಷಯವನ್ನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಅವರೇ ನನಗೆ ತಿಳಿಸಿದ್ದರು. ಎಲ್ಲ ಜಾತಿ-ಜನಾಂಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಲಹೆ ನೀಡಿದ್ದರು. ಅದರಂತೆ ಕೆಲಸ ಮಾಡುತ್ತಿದ್ದು, ಪಕ್ಷದ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಲಿಂಗಾಯತರಿಗೂ ಸೂಕ್ತ ಪ್ರಾತಿನಿಧ್ಯ ಸಿಗುವ ಹಾಗೆ ನೋಡಿಕೊಳ್ಳಲಾಗುವುದು’ ಎಂದರು.

ಲಿಂಗಾಯತ ಮುಖಂಡರಾದ ಅಲ್ಲಂ ವೀರಭದ್ರಪ್ಪ, ವಿ.ಎಸ್.ಕೌಜಲಗಿ, ಶಾಮನೂರು ಶಿವಶಂಕರಪ್ಪ, ಎಂ.ವಿ.ರಾಜಶೇಖರನ್, ವೀರಣ್ಣ ಮತ್ತೀಕಟ್ಟಿ, ರಾಣಿ ಸತೀಶ್, ಮಹಿಮಾ ಪಟೇಲ್, ಬಸವರಾಜ ರಾಯರೆಡ್ಡಿ, ಪಿ.ಎಂ.ಅಶೋಕ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಪ್ರಾತಿನಿಧ್ಯ ಸಿಗದಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ
ಬೆಂಗಳೂರು: ಲಿಂಗಾಯತರಿಗೆ ಈ ಸಲವೂ ಸೂಕ್ತ ಪ್ರಾತಿನಿಧ್ಯ ಮತ್ತು ಗೌರವ ಸಿಗದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎನ್ನುವ ಅಂಶವನ್ನು ಕಾಂಗ್ರೆಸ್ ಮುಖಂಡರೂ ಆದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಶುಕ್ರವಾರ ಇಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ಲಿಂಗಾಯತ ಮುಖಂಡರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎನ್ನುವ ಭಾವನೆ ಲಿಂಗಾಯತ ಜನಾಂಗಕ್ಕೆ ಇದೆ. ಇದನ್ನು ಹೋಗಲಾಡಿಸಬೇಕಾದರೆ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ಪಕ್ಷದಲ್ಲಿ ಲಿಂಗಾಯತರಿಗೂ ಸೂಕ್ತ ಸ್ಥಾನಮಾನಗಳನ್ನು ನೀಡಬೇಕು’ ಎಂದು ಹೇಳಿದರು.

‘ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಸಿಗದಂತೆ ಪಕ್ಷದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡಲು ಬಿಡುತ್ತಿಲ್ಲ’ ಎಂದು ನೇರ ಆರೋಪ ಮಾಡಿದರು.ಲಿಂಗಾಯತರೆಲ್ಲರೂ ಬಿಜೆಪಿ ಪರ ಎನ್ನುವ ಭಾವನೆ ಇದೆ. ಅದನ್ನು ಹೋಗಲಾಡಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈ ಸರ್ಕಾರವನ್ನು ಕಿತ್ತೊಗೆಯಬೇಕಾದರೆ ಕಾಂಗ್ರೆಸ್‌ನ ಹೋರಾಟಕ್ಕೆ ಲಿಂಗಾಯತರ ಬೆಂಬಲವೂ ಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT