ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರು ವೀರಶೈವರಲ್ಲ: ಮಾತೆ ಮಹಾದೇವಿ

Last Updated 14 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಹಾವೇರಿ: ‘ಬಸವ ತತ್ವ ಅನುಯಾಯಿ ಗಳು ಲಿಂಗಾಯತರೇ ವಿನಃ ವೀರ ಶೈವರು ಅಲ್ಲ, ಲಿಂಗಾಯತ ಮತ್ತು ವೀರಶೈವ ಎಂಬುವು ಸಮಾನಾರ್ಥದ ಪದಗಳು ಅಲ್ಲ. ಅವುಗಳಿಗೆ ಒಂದಕ್ಕೊಂದು ಸಂಬಂಧವೂ ಇಲ್ಲ. ಲಿಂಗಾಯತರು ಹಿಂದೂ ಧರ್ಮದ ಅಂಗವೂ ಅಲ್ಲ. ಹಿಂದೂ ಎನ್ನುವುದು ನಿಜವಾದ ಧರ್ಮವೇ ಅಲ್ಲ’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿನ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಶಿವಪುರ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ಇಷ್ಟ ಲಿಂಗದ ಕಲ್ಪನೆಯೊಂದಿಗೆ ಲಿಂಗಾಯತ ಧರ್ಮ ಹುಟ್ಟಿಕೊಂಡಿದೆ. ಇದು ವಿಶ್ವಗುರು ಬಸವಣ್ಣನವರ ಕೊಡುಗೆ ಯಷ್ಟೇ ಅಲ್ಲದೇ ಇದೊಂದು ಸ್ವತಂತ್ರ ಧರ್ಮವಾಗಿದೆ. ಪ್ರಗತಿಪರ ದೃಷ್ಟಿ ಕೋನ, ಜಾತ್ಯತೀತ ಸ್ವರೂಪ ಹೊಂದಿದೆ ಎಂದರು.

ಲಿಂಗಾಯತ ಧರ್ಮಕ್ಕೆ ಬಸವಣ್ಣನೇ ಧರ್ಮ ಸಂಸ್ಥಾಪಕ ನಾಗಿದ್ದು ವಚನ ಶಾಸ್ತ್ರವೇ ಅದರ ಸಂವಿಧಾನ ವಾಗಿದೆ. ಹೀಗಾಗಿ ಕರ್ನಾಟಕದ ಲಿಂಗಾಯತರನ್ನು ವೀರಶೈವರು ಎಂದು ಕರೆಯುವುದು ಆಭಾಸಕರ. ವೀರಶೈವರು ಪಕ್ಕದ ರಾಜ್ಯಗಳಲ್ಲಿದ್ದು, ಅವರು ಮಾಂಸಾಹಾರಿಗಳಾಗಿದ್ದಾರೆ. ಅಲ್ಲದೇ ಪುರೋಹಿತಶಾಹಿ ವರ್ಣಬೇಧ ನೀತಿ ಅಲ್ಲಿ ಜಾರಿಯಲ್ಲಿದೆ ಎಂದು ತಿಳಿಸಿದರು.

ರದ್ದತಿಗೆ ಆಗ್ರಹ
ರಾಜ್ಯದಲ್ಲಿ ಲಿಂಗಾಯತರು ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದರೆ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರ ಸುತ್ತೋಲೆ ಯೊಂದನ್ನು 2002 ರಲ್ಲಿಯೇ ಹೊರಡಿಸಿದೆ. ಸರ್ಕಾರದ ಆದೇಶದಿಂದ ಗೊಂದಲವಾಗುತ್ತದೆ. ಆದ್ದರಿಂದ ಈ ಆದೇಶವನ್ನು ರದ್ದುಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದ ಜಂಗಮರು ತಾವು ಬೇಡ, ಬುಡುಗ, ಮಾಲ ಜಂಗಮರೆಂದು ಹೇಳಿಕೊಂಡು ಮೂಲ ದಲಿತರ ಮೀಸಲಾತಿ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದು ಲಿಂಗಾಯತರಿಗೆ ಶೋಭೆ ತರುವ ಕೆಲಸವಲ್ಲ. ದಲಿತರ ಮೀಸಲಾತಿ ಕಸಿಯುವ ಜಂಗಮರ ಯತ್ನಕ್ಕೆ ಕೆಲ ಮಠಾಧೀಶರೂ ಬೆಂಬಲ ನೀಡುತ್ತಿದ್ದಾರೆ. ದಲಿತರಿಗಾಗಿರುವ ಸೌಲಭ್ಯಗಳನ್ನು ಕಸಿದುಕೊಳ್ಳುವುದು ಸರಿಯಲ್ಲ. ಸಮಾಜದ ಜನ ಕಳ್ಳದಾರಿಯಲ್ಲಿ ಸೌಲಭ್ಯ ಪಡೆಯದೇ ಸ್ವತಂತ್ರ, ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಪಡೆದುಕೊಂಡ ನಂತರ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಅವರು ಹೇಳಿದರು.

‘ಜನಗಣತಿಯಲ್ಲಿ ಲಿಂಗಾಯತ ಎಂದಷ್ಟೇ ಬರೆಸಿ’
ಹಾವೇರಿ: ‘ದೇಶದಾದ್ಯಂತ ಆರಂಭವಾಗಿರುವ ಜನಗಣತಿಯಲ್ಲಿ ಬಸವಣ್ಣನ ಅನುಯಾಯಿಗಳು ಹಾಗೂ ಲಿಂಗಾಯತ ಧರ್ಮಿಯರು ಧರ್ಮದ ಕಾಲಂನಲ್ಲಿ ಕೇವಲ ಲಿಂಗಾಯತ ಬರೆಸಬೇಕೆ ವಿನಃ, ವೀರಶೈವ ಲಿಂಗಾಯತ ಎಂದಾಗಿ ಬರೆಸಬಾರದು’ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಮಾತೆ ಮಹಾದೇವಿ ಕರೆ ನೀಡಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಅದರಲ್ಲಿ ಒಳಪಂಗಡಗಳು ಸಾಕಷ್ಟಿವೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದಷ್ಟೇ ಬರೆಸಬೇಕು. ಒಳಪಂಗಡಗಳಾದ ಬಣಜಿಗರು, ಪಂಚಮಸಾಲಿ, ಸಾದರ ಎಂದೆಲ್ಲಾ ಬರೆಸಬಾರದು ಎಂದು ವಿನಂತಿಸಿದರು.ಕೆಲವು ಸಂಘಟನೆಗಳು ಹಾಗೂ ಮಠಾಧೀಶರು ವೀರಶೈವ, ಹಿಂದೂ ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸುವಂತೆ ಹೇಳುತ್ತಿದ್ದಾರೆ. ಲಿಂಗಾಯತ ಧರ್ಮಕ್ಕೂ ವೀರಶೈವ ಪದಕ್ಕೂ ಸಂಬಂಧವಿಲ್ಲ. ಅದಕ್ಕಾಗಿ ವೀರಶೈವ ಲಿಂಗಾಯತ ಎಂದು ಬರೆಸಬಾರದು ಎಂದು ಮಾತಾಜಿ ಮನವಿ ಮಾಡಿದರು.

2001 ರ ಜನಗಣತಿಯಲ್ಲಿ ಸಹ ಇದೇ ರೀತಿ ಗೊಂದಲ ಸೃಷ್ಟಿಯಾಗಿ ಹಲವಾರು ಜನರು ವೀರಶೈವ ಲಿಂಗಾಯತ ಎಂದು ಬರೆಸಿದ್ದಾರೆ. ಇದರಿಂದ ನಿಜವಾದ ಲಿಂಗಾಯತ ಧರ್ಮೀಯರ ಸಂಖ್ಯೆ ನಿಖರವಾಗಿ ತಿಳಿಯಲು ಸಾಧ್ಯವಾಗಿಲ್ಲ. ಹಿಂದೆ ಮಾಡಿದ ತಪ್ಪನ್ನು ಈಗ ಮಾಡಬಾರದು. ಲಿಂಗಾಯತ ಧರ್ಮಿಯರು ಎಷ್ಟಿದ್ದೇವೆ ಎಂದು ತಿಳಿದುಕೊಳ್ಳಲು ಇದೊಂದು ಸದಾವಕಾಶ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈಗ ನಡೆಯುತ್ತಿರುವ ಗಣತಿ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸರಿಯಾದ ಜ್ಞಾನವಿಲ್ಲ. ಗಣತಿ ಫಾರಂನ ಏಳನೇ ಕಾಲಂನಲ್ಲಿ ಕೇಂದ್ರ ಸರ್ಕಾರ ಗುರುತಿಸಿರುವ ಆರು ಧರ್ಮಗಳನ್ನು ಬಿಟ್ಟು ಬೇರೆ ಧರ್ಮವಿದ್ದರೆ, ಅದನ್ನು ನಮೂದಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಜನಗಣತಿ ಮಾಡಲು ಬಂದ ಅಧಿಕಾರಿಗಳು, ಆರ ಧರ್ಮಗಳಲ್ಲಿಯೇ ಒಂದನ್ನು ನಮೂದಿಸಬೇಕೆಂದು ಜನರೊಂದಿಗೆ ವಾದ ಮಾಡುತ್ತಿದ್ದಾರಲ್ಲದೇ, ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಮುಂದಾಗುವವರ ಧರ್ಮದ ಕಾಲಂನಲ್ಲಿ ಹಿಂದೂ ಲಿಂಗಾಯತ ಎಂದು ಬರೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಗಣತಿದಾರರು ಅಜ್ಞಾನದಿಂದಲೋ ಅಥವಾ ಉದ್ದೇಶಪೂರ್ವಕವೋ ಜನರು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸದಿದ್ದರೆ, ಅಂತಹ ಫಾರ್ಮಿಗೆ ಮನೆಯ ಮುಖಂಡರು ಸಹಿ ಮಾಡದೆ ಪ್ರತಿಭಟನೆ ನಡೆಸಬೇಕೆಂದು ಮಾತಾಜಿ ಸಲಹೆ ಮಾಡಿದರು. ವೀರಶೈವ-ಲಿಂಗಾಯತ ಎಂಬುದು ಒಂದೇ. ವೀರಶೈವ ಮಹಾಸಭೆ ಮತ್ತು ಕೆಲ ವೀರಶೈವ ಗಣ್ಯರು ದೆಹಲಿಯಲ್ಲಿ ಜನಗಣತಿ ಕಮೀಷ್ನರ್ ಅವರನ್ನು ಭೇಟಿ ಮನವಿ ಮಾಡಿದ್ದಕ್ಕೆ ಅವರು ಜನಗಣತಿಯಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸಲು ಎಂದು ವೀರಶೈವ ಮಹಾಸಭೆ ಸುದ್ದಿ ಹಬ್ಬಿಸಿದೆ. ಇದು ಶುದ್ಧ ಸುಳ್ಳು ಎಂದ ಅವರು, ಲಿಂಗಾಯತ ಸಮುದಾಯದ ಗಣತಿ ಪ್ರತ್ಯೇಕವಾಗಿ ನಡೆಯಬೇಕಿದೆ. ಅದಕ್ಕಾಗಿ ಜನಗಣತಿ ಆಯುಕ್ತರು ಹಾಗೂ ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಅವರಿಗೆ ಸಹ ಮನವಿ ಸಲ್ಲಿಸಲಾಗಿದೆ ಎಂದು ಮಾತಾಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಶಿವಪುರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT