ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಪಿ ಜ್ಞಾನ ಹೊಂದಲು ಸಂಶೋಧಕರಿಗೆ ಸಲಹೆ

Last Updated 11 ಡಿಸೆಂಬರ್ 2013, 6:43 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಸ್ತಪ್ರತಿ ವಿಷಯದಲ್ಲಿ ಸಂಶೋಧನೆ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ಮೊದಲು ಸಂಸ್ಕೃತ, ಶಾರದ ಹಾಗೂ ಮೋಡಿ ಲಿಪಿ ಸೇರಿ­ದಂತೆ ವಿವಿಧ ಲಿಪಿಗಳ ಕುರಿತು ಜ್ಞಾನ ಹೊಂದಿರಬೇಕು. ಅಷ್ಟೇ ಅಲ್ಲದೆ ಹಸ್ತ­ಪ್ರತಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು’ ಎಂದು ಮೈಸೂರಿನ ಮಹಾ­ರಾಜ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಎ. ಆಳ್ವಾರ್‌ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಹಸ್ತಪ್ರತಿ ಗ್ರಂಥ ಸಂಪಾದನೆ, ಹಳೆಗನ್ನಡ ಸಾಹಿತ್ಯ ಕುರಿತು ಚಿಂತನ ವೇದಿಕೆಯ ‘ಹಳೆಯ ಹೊನ್ನು’ ಏರ್ಪಡಿಸಿದ್ದ ’ಹಸ್ತ­ಪ್ರತಿಗಳು ಮತ್ತು ಆಧುನಿಕ ತಂತ್ರಜ್ಞಾನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೌಖಿಕ ಪರಂಪರೆಯಲ್ಲಿ ವಿದ್ವಾಂಸರಿಗೆ ಓದು ಬರಹ ತಿಳಿದಿರಲಿಲ್ಲ, ವಿದ್ವಾಂಸರು ಈ ಪರಂಪರೆಯಿಂದ ಬಂದವರಾಗಿದ್ದರಿಂದ ಓದುವುದು ಹಾಗೂ ಬರೆಯುವುದನ್ನು ಬೇರೆಯವರಿಂದ ಮಾಡಿಸುತ್ತಿದ್ದರು’ ಎಂದು ಹೇಳಿದರು. ‘ಹಸ್ತಪ್ರತಿಗಳ ಅಧ್ಯಯನ ಮಾಡಲು ಮಾಹಿತಿ ತಂತ್ರಜ್ಞಾನ ಸಾಕಷ್ಟು ಸಹಾಯಕವಾಗಿದೆ. ತಂತ್ರಜ್ಞರು ಇದಕ್ಕಾಗಿ ವಿಶೇಷ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಹಸ್ತಪ್ರತಿಗಳ ಸುಲಭ ಅಧ್ಯಯನ ಸಾಧ್ಯ’ ಎಂದು ಆಳ್ವಾರ್‌ ಹೇಳಿದರು.

ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ, ‘1996ರಿಂದಲೇ ಕನ್ನಡ ವಿಶ್ವ ವಿದ್ಯಾಲಯ ಹಸ್ತಪ್ರತಿಶಾಸ್ತ್ರವನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಅಧ್ಯಯನ ಮಾಡುತ್ತಿದೆ.  ಕನ್ನಡದಲ್ಲಿ ಪ್ರಕಟವಾಗಿರುವ ಹಸ್ತಪ್ರತಿ ಸೂಚಿಗಳ ಸಮಗ್ರ ಸೂಚಿಯನ್ನು ಮಾಡಲಾಗಿದೆ. ಮೋಡಿಲಿಪಿಯ ಸಾಫ್ಟ್‌ವೇರ್‌ ಕೂಡ ಅಭಿವೃದ್ಧಿಪಡಿಸಲಾಗಿದೆ’ ಎಂದರು.

‘ಮಾಹಿತಿ ತಂತ್ರಜ್ಞಾನದ ಬಳಕೆ ಕಬ್ಬಿಣದ ಕಡಲೆಯೇನಲ್ಲ. ಇದಕ್ಕಾಗಿ ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿ­ಕೊಳ್ಳದೇ ತಂತ್ರಜ್ಞಾನವನ್ನು ಉಪಶಕ್ತಿ­ಯಾಗಿ ಬಳಸಿಕೊಂಡು ಇಚ್ಛಾಶಕ್ತಿ­ಯಿಂದ ಸಂಶೋಧನೆ ಮಾಡಬೇಕು’ ಎಂದು ಹೇಳಿದರು. ಡಾ.ಕೆ.­ರವೀಂದ್ರ­ನಾಥ, ಡಾ.ಚಲುವರಾಜು ಉಪಸ್ಥಿತ­ರಿ­ದ್ದರು. ಇದಕ್ಕೂ ಮುನ್ನ ಇತ್ತೀಚೆಗೆ ನಿಧನ ಹೊಂದಿದ ಎನ್.ಬಸವಾರಾಧ್ಯ ಕುರಿತು ಡಾ. ಎಫ್.ಟಿ. ಹಳ್ಳಿಕೇರಿ ಮತ್ತು ಡಾ.ಕಲವೀರ ಮನ್ವಾಚಾರ ಸಂತಾಪ ಸೂಚಿಸಿದರು. ಹಳೆಯ ಹೊನ್ನು ವೇದಿಕೆಯ ಸಂಚಾಲಕ ಡಾ.ಎಸ್.ಆರ್. ಚೆನ್ನವೀರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT